Shubhashaya News

ರಾಷ್ಟ್ರೀಯ ಲೋಕಾದಲತ್‌ಗೆ ಆಳಂದದಲ್ಲಿ ಸಿದ್ಧತೆ:

“ರಾಜಿ ಮಾಡಿಸಿ, ನ್ಯಾಯ ತ್ವರಿತಗತಿಯಲ್ಲಿ ತಲುಪಿಸಿ” – ನ್ಯಾಯಾಧೀಶೆ ಸುಮನ್ ಚಿತ್ತರಗಿ ಸಲಹೆ

ಆಳಂದ: ಪಟ್ಟಣದ ನ್ಯಾಯಾಲಯದಲ್ಲಿ ನಡೆದ ರಾಷ್ಟಿçÃಯ ಲೋಕ ಅದಾಲತ್ ಪೂರ್ವ ಸಿದ್ಧತಾ ಸಭೆಯಲ್ಲಿ ನ್ಯಾಯಾಧೇಶೆ ಕುಮಾರಿ ಸುಮನ್ ಚಿತ್ತರಗಿ ಮಾತನಾಡಿದರು. ಅಧಿಕಾರಿಗಳು ನ್ಯಾಯವಾದಿಗಳು ಹಾಜರಿದ್ದರು.

ಆಳಂದ: ಮುಂಬರುವ ಡಿಸೆಂಬರ್ ೧೩ರಂದು ಸ್ಥಳೀಯ ನ್ಯಾಯಾಲಯದಲ್ಲಿ ನಡೆಯಲಿರುವ ರಾಷ್ಟ್ರೀಯ ಲೋಕಾದಲತ್‌ನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ನ್ಯಾಯಾಲಯದಲ್ಲಿ ಬುಧವಾರ ಪೂರ್ವ ಸಿದ್ಧತಾ ಸಭೆ ನಡೆಯಿತು.
ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿ ಮತ್ತು ಸಿವಿಲ್ ನ್ಯಾಯಾಧೀಶೆ ಕುಮಾರಿ ಸುಮನ್ ಚಿತ್ತರಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, “ಲೋಕಾದಲತ್ ಕೇವಲ ಕೇಸು ಇತ್ಯರ್ಥದ ಕಾರ್ಯಕ್ರಮವಲ್ಲ, ಇದು ನ್ಯಾಯಾಂಗ ವ್ಯವಸ್ಥೆಯ ಜನಪರ ಚಿತ್ರಣ ಎಂದರು.
ಪಕ್ಷಕಾರರನ್ನು ರಾಜಿ ಮಾಡಿಸುವಲ್ಲಿ ಅಧಿಕಾರಿಗಳು ಮತ್ತು ವಕೀಲರು ಮನಸಾ-ವಾಚಾ-ಕರ್ಮಣಾ ತೊಡಗಿಸಿಕೊಳ್ಳಬೇಕು. ಒಂದೇ ದಿನ ಸಾವಿರಾರು ಕೇಸುಗಳನ್ನು ಶಾಶ್ವತವಾಗಿ ಮುಕ್ತಾಯಗೊಳಿಸುವ ಈ ಅವಕಾಶವನ್ನು ಯಾರೂ ವ್ಯರ್ಥ ಮಾಡಿಕೊಳ್ಳಬಾರದು” ಎಂದು ಕಿವಿಮಾತು ಹೇಳಿದರು.
ಸಭೆಯಲ್ಲಿ ಬ್ಯಾಂಕ್ ಸಾಲ ವಸೂಲಾತಿ, ಚೆಕ್ ಬೌನ್ಸ್, ಮೋಟಾರ್ ಅಪಘಾತ ಪರಿಹಾರ ವಿದ್ಯುತ್-ನೀರು ಶುಲ್ಕ ಬಾಕಿ, ಭೂ ಸ್ವಾಧೀನ ಪರಿಹಾರ, ಕುಟುಂಬ ವಿವಾದಗಳು, ಕಿರು-ಕ್ರಿಮಿನಲ್ ರಾಜಿ ಪ್ರಕರಣಗಳು ಸೇರಿದಂತೆ ಸಾವಿರಾರು ರಾಜಿಯಾಗಬಲ್ಲ ಕೇಸುಗಳನ್ನು ಗುರುತಿಸಿ ಚರ್ಚಿಸಲಾಯಿತು. “ಪಕ್ಷಕಾರರಿಗೆ ಪ್ರಕರಣದ ಸತ್ಯ ಸ್ಥಿತಿ, ದೀರ್ಘಕಾಲಿಕ ನ್ಯಾಯಾಲಯ ಪ್ರಕ್ರಿಯೆಯ ತೊಂದರೆ, ರಾಜಿಯಾದಲ್ಲಿ ತಕ್ಷಣ ಪರಿಹಾರದ ಲಾಭ ಇದೆಲ್ಲವನ್ನೂ ತಾಳ್ಮೆಯಿಂದ ತಿಳಿಸಿ ಮನವೊಲಿಸಿ ತನ್ನಿ” ಎಂದು ನ್ಯಾಯಾಧೀಶೆ ಸೂಚಿಸಿದರು.
ಗಮನಾರ್ಹ ಅಂಶಗಳು: ನ್ಯಾಯಾಲಯದಲ್ಲಿ ಸಾವಿರಾರು ಬಾಕಿ ಪ್ರಕರಣಗಳಿದ್ದು, ಈ ಲೋಕಾದಲತ್‌ನಲ್ಲಿ ನಿರೀಕ್ಷಿತ ಕೇಸುಗಳನ್ನು ಇತ್ಯರ್ಥಪಡಿಸುವ ಗುರಿಯಿದೆ. ಪಕ್ಷಕಾರರಿಗೆ ಉಚಿತ ಕಾನೂನು ಸಲಹೆ, ಮಧ್ಯಸ್ಥಿಕೆ ಸೌಲಭ್ಯ ರಾಜಿ ಒಪ್ಪಂದಕ್ಕೆ ಬಂದರೆ ಕೋರ್ಟ್ ಶುಲ್ಕ ಸಂಪೂರ್ಣ ಮರುಪಾವತಿ, “ನ್ಯಾಯಾಲಯದ ಬಾಗಿಲು ಯಾವಾಗಲೂ ತೆರೆದಿರುತ್ತದೆ, ಆದರೆ ಲೋಕಾದಲತ್‌ನಲ್ಲಿ ಒಂದೇ ದಿನದಲ್ಲಿ ಮನೆಗೆ ನ್ಯಾಯ ಒಯ್ಯುವ ಅವಕಾಶ ಬಂದಿದೆ. ಇದನ್ನು ಸದುಪಯೋಗಪಡಿಸಿಕೊಳ್ಳಿ” ಎಂದು ನ್ಯಾಯಾಧೀಶೆ ಸುಮನ್ ಚಿತ್ತರಗಿ ಪಕ್ಷಕಾರರಿಗೆ ಮತ್ತು ಅಧಿಕಾರಿಗಳಿಗೆ ಕರೆ ನೀಡಿದರು.
ಸಭೆಯಲ್ಲಿ ಸರ್ಕಾರಿ ವಕೀಲರಾದ ಶ್ರೀಮತಿ ಜ್ಯೋತಿ ಬಂದಿ, ಇಸ್ಮಾಯಿಲ್ ಪಟೇಲ್, ಬಾರ್ ಅಸೋಸಿಯೇಷನ್ ಪದಾಧಿಕಾರಿಗಳು, ರಾಷ್ಟ್ರೀಕೃತ ಬ್ಯಾಂಕ್‌ಗಳ ಪ್ರತಿನಿಧಿಗಳು, ವಿದ್ಯುತ್ ವಿತರಣಾ ಕಂಪನಿ, ನೀರಾವರಿ ಮತ್ತು ಪಾಲಿಕೆ ಅಧಿಕಾರಿಗಳು, ಶಿಕ್ಷಣ ಇಲಾಖೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.
ಎಲ್ಲ ಇಲಾಖೆಗಳು ತಮ್ಮ ಬಾಕಿ ಪ್ರಕರಣಗಳ ಪಟ್ಟಿ ಸಿದ್ಧಪಡಿಸಿ, ಪಕ್ಷಕಾರರಿಗೆ ಮೊದಲೇ ಸಂಪರ್ಕಿಸಿ ಲೋಕಾದಲತ್‌ಗೆ ಹಾಜರಾಗುವಂತೆ ಮನವೊಲಿಕೆ ಆರಂಭಿಸುವುದಾಗಿ ಭರವಸೆ ನೀಡಿದರು.
ವಿಶೇಷವಾಗಿ ಬ್ಯಾಂಕ್‌ಗಳು ಒನ್-ಟೈಮ್ ಸೆಟಲ್‌ಮೆಂಟ್ ಯೋಜನೆಗಳನ್ನು ಘೋಷಿಸಿ, ಸಾಲಗಾರರಿಗೆ ಗಮನಾರ್ಹ ರಿಯಾಯಿತಿ ನೀಡುವುದಾಗಿ ತಿಳಿಸಿದವು.
ಡಿಸೆಂಬರ್ ೧೩ರ ರಾಷ್ಟ್ರೀಯ ಲೋಕಾದಲತ್ ಆಳಂದ ಜಿಲ್ಲೆಯ ನ್ಯಾಯ ಇತಿಹಾಸದಲ್ಲಿ ಹೊಸ ದಾಖಲೆ ಬರೆಯಲಿದೆ ಎಂಬ ವಿಶ್ವಾಸಕ್ಕೆ ಈ ಪೂರ್ವ ಸಿದ್ಧತಾ ಸಭೆ ಬುನಾದಿ ಹಾಕಿದೆ.

Comments are closed.

Don`t copy text!