Shubhashaya News

ಪರಿಹಾರಕ್ಕಾಗಿ ಪ್ರತಿಭಟನೆ ನಾಳೆ

ರಸ್ತೆ ಅಗಲೀಕರಣ ಕಾರ್ಯದಲ್ಲಿ ಆಸ್ತಿ ಕಳೆದುಕೊಂಡ ನಾಗರಿಕರಿಗೆ ಪರಿಹಾರ ಧನ ನೀಡಬೇಕು ಎಂದು ಒತ್ತಾಯಿಸಿ ಜಿ.ಪಂ ಮಾಜಿ ಉಪಾಧ್ಯಕ್ಷ ಹರ್ಷಾ ಎಸ್ ಗುತ್ತೇದಾರ ನೇತೃತ್ವದಲ್ಲಿ ನಿರಾಶ್ರಿತರೊಂದಿಗೆ ಬೆಳಿಗ್ಗೆ 10:30 ಗಂಟೆಗೆ ಆಳಂದ ಪಟ್ಟಣದ ಪುರಸಭೆಯ ಎದುರುಗಡೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದಲ್ಲಿ ಅಭಿವೃದ್ಧಿಗಾಗಿ ಹಳೆ ತಹಸೀಲ ಕಾರ್ಯಾಲಯದಿಂದ ದರ್ಗಾ ಬೇಸ್‍ವರೆಗೆ ರಸ್ತೆ ಅಗಲೀಕರಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ರಸ್ತೆ ಅಗಲೀಕರಣ ಕಾರ್ಯ ಕೈಗೊಳ್ಳುವಾಗ ಯಾವುದೇ ಪೂರ್ವ ನೋಟೀಸ್ ನೀಡಿರುವುದಿಲ್ಲ ಇದರಿಂದ ಆಸ್ತಿಯ ಮಾಲೀಕರು ತೊಂದರೆ ಅನುಭವಿಸುವಂತಾಗಿದೆ. ಈಗಾಗಲೇ ಅಗಲೀಕರಣ ಪ್ರಾರಂಭ ಮಾಡಿರುವ ಖಾಸಗಿ ಆಸ್ತಿಗಳಲ್ಲಿ ಬಹಳಷ್ಟು ಜನ ಕಡು ಬಡವರದಾಗಿದ್ದು. ಅವರಿಗೆ ಬೇರೆ ಕಡೆ ಎಲ್ಲಿಯೂ ಸೂರಾಗಲಿ, ನಿವೇಶನಗಳಾಗಲಿ ಇಲ್ಲ. ಅವರಿಗೆ ವಾಸಿಸುವುದಕ್ಕೆ ಯಾವುದೇ ರೀತಿಯ ಪರ್ಯಾಯ ವ್ಯವಸ್ಥೆ ಕಲ್ಪಿಸದೇ ಏಕಾಏಕಿ ಮನೆಗಳನ್ನು ತೆರವುಗೊಳಿಸುತ್ತಿರುವುದರಿಂದ ಅವರ ಬದುಕು ಅತಂತ್ರವಾಗಿದೆ.
ಈಗ ಆಸ್ತಿ ಕಳೆದುಕೊಳ್ಳುತ್ತಿರುವ ನಾಗರಿಕರ 3-4 ತಲೆಮಾರುಗಳು ಈ ಆಸ್ತಿಯಲ್ಲಿ ವಾಸವಾಗಿದ್ದಾರೆ. ಇದು ಕೇವಲ ಭೌತಿಕ ಆಸ್ತಿಯಾಗಿರದೇ ಆ ಆಸ್ತಿಗಳ ಜೊತೆ ಅವರು ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ರಸ್ತೆ ಅಗಲೀಕರಣ ಕಾರ್ಯದಲ್ಲಿ ಆಸ್ತಿ ಕಳೆದುಕೊಂಡ ನಾಗರಿಕರಿಗೆ ಪ್ರಸ್ತುತ ಮಾರುಕಟ್ಟೆಯ ಮೌಲ್ಯದಂತೆ ಪರಿಹಾರ ಧನ ಮಂಜೂರಿ ಮಾಡಿ ಅವರಿಗೆ ನಿಸರ್ಗ ಸಹಜ ನ್ಯಾಯ ಒದಗಿಸಿ ಕೊಡಬೇಕು.
ಈಗಾಗಲೇ ನಿಗದಿಯಾಗಿರುವಂತೆ ರಸ್ತೆ ಅಗಲೀಕರಣದ ಸಂದರ್ಭದಲ್ಲಿ ರಸ್ತೆಯ ಎರಡು ಬದಿಯಲ್ಲಿ 20 ಫೀಟ್ ರಸ್ತೆ ಅಗಲೀಕರಣ ಮಾಡಲಾಗುವುದು ಎಂದು ತಿಳಿಸಲಾಗಿದೆ ಆದರೆ ಈಗ ಎರಡು ಬದಿಯಲ್ಲಿ 25 ಫೀಟ್ ರಸ್ತೆ ಅಗಲೀಕರಣ ಮಾಡುತ್ತಿದ್ದಾರೆ ಇದು ಅವೈಜ್ಞಾನಿಕವಾಗಿದ್ದು. ಕೂಡಲೇ ಇದನ್ನು ನಿಲ್ಲಿಸಬೇಕು.
ರಾಜ್ಯ ಸರ್ಕಾರವು ಬೆಂಗಳೂರಿನ ಯಲಹಂಕದಲ್ಲಿರುವ ಕೋಗಿಲು ಬಡಾವಣೆಯಲ್ಲಿ ತೋರಿರುವ ಮಾನವೀಯ ಕಾಳಜಿಯಂತೆ ಆಳಂದ ಪಟ್ಟಣದ ನಾಗರಿಕರ ಮೇಲೂ ತೋರಿ ಅವರಿಗೂ ಪರಿಹಾರ ಕಲ್ಪಿಸಿ ಅಥವಾ ಬೇರೆ ಕಡೆ ಪರ್ಯಾಯ ವ್ಯವಸ್ಥೆ ಮಾಡಿ ಗೌರವಯುತ ಜೀವನ ನಡೆಸಲು ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿಕೊಳ್ಳುತ್ತೇವೆ.
ಈ ಮೇಲಿನ ನ್ಯಾಯಯುತವಾದ ಬೇಡಿಕೆಗಳನ್ನು ಒಂದು ವಾರದೊಳಗಾಗಿ ಬಗೆ ಹರಿಸದಿದ್ದರೇ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಉಪವಾಸ ಸತ್ಯಾಗ್ರಹ ಸೇರಿದಂತೆ ಉಗ್ರ ಸ್ವರೂಪದ ಹೋರಾಟ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Comments are closed.

Don`t copy text!