Shubhashaya News

ಸಂತ್ರಸ್ತರ ಪರ ಮಾಜಿ ಶಾಸಕ ಸುಭಾμï ಗುತ್ತೇದಾರ್ ಬ್ಯಾಟಿಂಗ್ ಶುರು

ಮೊದಲು ಪರಿಹಾರ ಘೋಷಿಸಿ, ನಂತರವೇ ತೆರವುಗೆ ಆಗ್ರಹ

ಆಳಂದ: ಪಟ್ಟಣದ ಮುಖ್ಯರಸ್ತೆಯ ಹಳೆಯ ಬಜಾರಿನಲ್ಲಿ ಮಾಜಿ ಶಾಸಕ ಸುಭಾಷ ಗುತ್ತೇದಾರ ಅವರು ಸೋಮವಾರ ಸಂಜೆ ರಸ್ತೆ ಅಗಲೀಕರಣ ಸಂತ್ರಸ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಆಳಂದ: ಪಟ್ಟಣದ ಮುಖ್ಯ ರಸ್ತೆ ಅಗಲೀಕರಣ ವಿಷಯದಲ್ಲಿ ಸಂತ್ರಸ್ತರ ಪರವಾಗಿ ಮಾಜಿ ಶಾಸಕ ಸುಭಾμï ಗುತ್ತೇದಾರ್ ಅವರು ಸ್ಪಷ್ಟ ನಿಲುವು ತಳೆದಿದ್ದು, ಮೊದಲು ಪರಿಹಾರ ಘೋಷಿಸಿ ಅಥವಾ ಪರಿಹಾರ ನೀಡಿ ನಂತರವೇ ಅಗಲೀಕರಣ ಕಾರ್ಯ ಮುಂದುವರಿಸಬೇಕು ಎಂದು ಶಾಸಕ ಬಿ.ಆರ್. ಪಾಟೀಲ್ ಅವರಿಗೆ ಇಂದಿಲ್ಲಿ ಆಗ್ರಹಿಸಿದರು.
ಅಗಲೀಕರಣದ ಮುಖ್ಯರಸ್ತೆಯ ಮಹಾದೇವ ಮಂದಿರದ ಸಮೀಪದ ಜೈನ ಸಮುದಾಯ ಭವನದಲ್ಲಿ ಬುಧವಾರ ಸಂಜೆ ರಸ್ತೆ ಬದಿಯ ಆಸ್ತಿ ಮಾಲೀಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, “ನಮ್ಮ ಆಡಳಿತ ಅವಧಿಯಲ್ಲಿ 11 ಕೋಟಿ ರೂಪಾಯಿ ವೆಚ್ಚದ ರಸ್ತೆ ಅಗಲೀಕರಣ ಯೋಜನೆಯನ್ನು ತರಲಾಗಿತ್ತು. ಆ ಸಂದರ್ಭದಲ್ಲಿ ಸಾರ್ವಜನಿಕ ಸಭೆ ಕರೆದು ಪರ–ವಿರೋಧ ಅಭಿಪ್ರಾಯಗಳನ್ನು ಕೇಳಲಾಗಿತ್ತು. ಬಹುಪಾಲು ಜನರು ಒಪ್ಪಿಗೆ ನೀಡಿದ್ದರೂ, ಕೆಲವರು ನ್ಯಾಯಾಲಯದ ಮೊರೆ ಹೋಗಿ ತಡೆ ಆದೇಶ ತಂದ ಕಾರಣ ಕಾಮಗಾರಿ ಸ್ಥಗಿತಗೊಂಡಿತ್ತು,” ಎಂದು ನೆನಪಿಸಿದರು.
ಈಗ ಶಾಸಕ ಬಿ.ಆರ್. ಪಾಟೀಲ್ ಅವರು ಹಿಂದೆ ಪರಿಹಾರಕೊಟ್ಟು ಅಗಲೀಕರಣ ಮಾಡಬೇಕು ಎಂದು ಹೇಳಿದ್ದರು. ಈಗ ಅವರೇ ಅಧಿಕಾರದಲ್ಲಿದ್ದು, ಹಿಂದೆ ನೀಡಿದ್ದ ಭರವಸೆಯಂತೆ ಪರಿಹಾರ ನೀಡಿಯೇ ರಸ್ತೆ ಅಗಲೀಕರಣ ಕೈಗೊಳ್ಳಬೇಕು. “ಈಗ ಪರಿಹಾರ ನೀಡದೇ, ತೆರವುಗೊಳಿಸಲು 4.90ಕೋಟಿ ರೂಪಾಯಿ ತಂದಿದ್ದೇವೆ ಎಂದು ಹೇಳಲಾಗುತ್ತಿದೆ. ಮೊದಲು ಪರಿಹಾರ ಕೊಟ್ಟು, ನಂತರವೇ ತೆರವು ಕಾರ್ಯ ನಡೆಯಬೇಕು,” ಎಂದು ಅವರು ಸ್ಪಷ್ಟವಾಗಿ ಹೇಳಿದರು.
ಪುರಸಭೆ ಅಧಿಕಾರಿಗಳು ರಸ್ತೆ ಅಗಲೀಕರಣ ಕಾರ್ಯಾಚರಣೆಯನ್ನು ಮುಂದುವರಿಸಿ, ಜನರಿಂದ ಸ್ವಯಂಪ್ರೇರಿತ ತೆರವುಗೆ ಸಹಿ ಪಡೆಯುತ್ತಿರುವುದು ಸರಿಯಲ್ಲ. “ಪರಿಹಾರ ಘೋಷಿಸುವವರೆಗೂ ಯಾರೂ ತಮ್ಮ ಮನೆ ಬಿಟ್ಟು ಹೊರಬರಬಾರದು. ದಾಖಲೆಗಳನ್ನು ಸಾರ್ವಜನಿಕವಾಗಿ ತೋರಿಸಬೇಕು. ಒಂದೇ ಮಾರ್ಗದಲ್ಲಿ ಪೂರ್ಣವಾಗಿ ರಸ್ತೆ ಅಗಲೀಕರಣ ಮಾಡಬೇಕು. ಅಲ್ಲಲ್ಲಿ ಜಾಗ ಬಿಡಿಸಿ ಕಾಮಗಾರಿ ನಡೆಸುವುದು ನ್ಯಾಯಸಮ್ಮತವಲ್ಲ,” ಎಂದು ಸುಭಾμï ಗುತ್ತೇದಾರ್ ಕಟುವಾಗಿ ಟೀಕಿಸಿದರು.
ಸಭೆಯಲ್ಲಿ ಆಸ್ತಿ ಕಳೆದುಕೊಳ್ಳುತ್ತಿರುವ ಲಕ್ಷ್ಮಿಬಾಯಿ ಸ್ವಾಮಿ ಅವರು ಮಾತನಾಡಿ, “ಬಿ.ಆರ್. ಅಣ್ಣಾ, ನೀವು ಹಿಂದೆ ಹೇಳಿದಂತೆ ಮೊದಲು ಪರಿಹಾರ ನೀಡಿ ನಂತರವೇ ರಸ್ತೆ ಅಗಲೀಕರಣ ಮಾಡಿ. ಜಾಗ ಕಳೆದುಕೊಂಡವರಿಗೆ ನ್ಯಾಯವಾಗಿ ಜಾಗ ಅಥವಾ ಪರಿಹಾರ ನೀಡಬೇಕು,” ಎಂದು ಮನವಿ ಮಾಡಿದರು.
ದತ್ತು ಕುಂಬಾರ ಸೇರಿ ಇತರರು ಅವರು ಸಹ ಮಾತನಾಡಿ ಪರಿಹಾರಕ್ಕೆ ಒತ್ತಾಯಿಸಿದರು.
ಸಭೆಯಲ್ಲಿ ರಸ್ತೆ ಬದಿಯ ಆಸ್ತಿ ಮಾಲೀಕರು, ಸಂತ್ರಸ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು, ಪರಿಹಾರ ವಿಷಯದಲ್ಲಿ ಸ್ಪಷ್ಟತೆ ಬಂದ ನಂತರವೇ ಅಗಲೀಕರಣ ಕಾರ್ಯ ಮುಂದುವರಿಸಬೇಕು ಎಂಬ ಒಕ್ಕೊರಲ ಅಭಿಪ್ರಾಯ ವ್ಯಕ್ತವಾಯಿತು.
ಈ ಸಂದರ್ಭದಲ್ಲಿ ಸಂತ್ರಸ್ತ ಮಹಾವೀರ ಕಾಸರ, ಅಡವಿರಾಜ ಅತ್ನೂರ, ಸ್ವಸ್ತಿಕ ಮೆಡಿಕಲ್ ಮಾಲೀಕ ಶೇಖರ ಶಹಾ, ಸೂರ್ಯಕಾಂತ ಕಲಶೆಟ್ಟಿ, ಸಂಗಮೇಶ ಸಜ್ಜನಶೆಟ್ಟಿ, ಅಮೀತ ಶಹಾ, ಬಿಜೆಪಿ ಮುಖಂಡ ಶ್ರೀಶೈಲ ಖಜೂರಿ, ಮೃತ್ಯುಂಜಯ ಆಲೂರೆ, ಶಿವುಪುತ್ರ ನಡಗೇರಿ, ಸೋಮಶೇಖರ ಹತ್ತರಕಿ ಸೇರಿದಂತೆ ಅನೇಕರು ಇದ್ದರು.

Comments are closed.

Don`t copy text!