Shubhashaya News

ಪಡಸಾವಳಿಯ ಕೆಕೆಆರ್‍ಡಿಬಿ ರಸ್ತೆ ಕಾಮಗಾರಿಯ ಕಳಪೆ:ಆರೋಪ

ಆಳಂದ: ಪಡಸಾವಳಿ ಗ್ರಾಮದಲ್ಲಿನ ಒಂದು ಕಿ.ಮೀ. ಡಾಂಬರಿ ಹೊಸ ಕಾಮಗಾರಿ ಕುಸಿದು ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ಸ್ಥಳೀಯರು ತೋರಿಸಿದರು.

ಅಳಂದ: ಹೊಸ ರಸ್ತೆ ಕೈಗೊಂಡು ಕೆಲವೆ ದಿನಗಳಲ್ಲಿ ಹಳ್ಳಹಿಡಿದು ಕೋಟಿ ರೂಪಾಯಿ ನೀರುಪಾಲಾದ ಪ್ರಸಂಗ ಆಡಳಿತವನ್ನೇ ಅಣಕಿಸುವಂತೆ ಮಾಡಿದ ಪ್ರಸಂಗ ತಾಲೂಕಿನ ಪಡಸಾವಳಿ ಗ್ರಾಮದ ರಸ್ತೆ ಕಾಮಗಾರಿಯಲ್ಲಿ ಬಯಲಾಗಿದೆ.
ಗ್ರಾಮದಲ್ಲಿ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮ (ಕೆಕೆಆರ್‍ಡಿಬಿ) ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಮುಂದುವರೆದ ರಸ್ತೆ ಹೊಸ ಡಾಂಬರಿ ಕಾಮಗಾರಿಯ ಪಡಸಾವಳಿ ಸಾರ್ವಜನಿಕ ಆಸ್ಪತ್ರೆಯಿಂದ ಗ್ರಾಮದ ಬಸ್ ನಿಲ್ದಾಣದವರೆಗಿನ ಒಂದು ಕಿಲೋಮೀಟರ್ ಡಾಂಬರಿ ರಸ್ತೆ ಕಾಮಗಾರಿಯ ಗುಣಮಟ್ಟ ತೀವ್ರ ಕಳಪೆಯಾಗಿದೆ ಎಂದು ಸ್ಥಳೀಯ ಕಾಂಗ್ರೆಸ್ ಮುಖಂಡ ಕಾಶಿನಾಥ್ ಗಾಯಕ್ವಾಡ್ ಮತ್ತು ಮುಬಾರಕ್ ಮುಲಗೆ ಆರೋಪಿಸಿದ್ದಾರೆ.
ಈ ಕಾಮಗಾರಿಯ ಅವ್ಯವಸ್ಥೆಯಿಂದ ಗ್ರಾಮಸ್ಥರಿಗೆ ಸಂಚಾರ ಮತ್ತು ಓಡಾಟದಲ್ಲಿ ಗಂಭೀರ ತೊಂದರೆಯಾಗಿದ್ದು, ಗುತ್ತಿಗೆದಾರರು ಹಾಗೂ ಸಂಬಂಧಿತ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ.
ಗ್ರಾಮದ ಜನರ ಬಹುದಿನಗಳ ಬೇಡಿಕೆಯಾಗಿದ್ದ ಈ ರಸ್ತೆ, ಆಸ್ಪತ್ರೆಯಿಂದ ಬಸ್ ನಿಲ್ದಾಣದವರೆಗಿನ ಪ್ರಮುಖ ಸಂಪರ್ಕ ಮಾರ್ಗವಾಗಿದೆ. ಆದರೆ, ಕಾಮಗಾರಿಯ ಕಳಪೆ ಗುಣಮಟ್ಟದಿಂದ ರಸ್ತೆಯ ಮೇಲ್ಮೈ ಗುಂಡಿಗಳಿಂದ ಕೂಡಿದ್ದು, ಅಸಮತಲವಾಗಿದೆ. ಇದರಿಂದ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಓಡಾಟಕ್ಕೆ ತೊಂದರೆಯಾಗಿದ್ದು, ರೋಗಿಗಳು ಮತ್ತು ವೃದ್ಧರಿಗೆ ಆಸ್ಪತ್ರೆಗೆ ತೆರಳಲು ತೀವ್ರ ಸಮಸ್ಯೆಯಾಗಿದೆ ಮಳೆಗಾಲದಲ್ಲಿ ಗುಂಡಿಗಳು ತುಂಬಿ ರಸ್ತೆಯೇ ಕಾಣದಂತಾಗಿದೆ,” ಎಂದು ಕಾಶಿನಾಥ್ ಗಾಯಕ್ವಾಡ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಬಾರಕ್ ಮುಲಗೆ ಮಾತನಾಡಿ, “ಸರ್ಕಾರದ ಒಂದು ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯಲ್ಲಿ ಗುಣಮಟ್ಟಕ್ಕೆ ಯಾವುದೇ ಗಮನ ಕೊಡಲಾಗಿಲ್ಲ. ಗುತ್ತಿಗೆದಾರರ ಜವಾಬ್ದಾರಿಯಿಲ್ಲದಿರಿಕೆ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಾರ್ವಜನಿಕ ಹಣವನ್ನು ವ್ಯರ್ಥ ಮಾಡಲಾಗಿದೆ. ಇದು ಗಂಭೀರ ಅಪರಾಧವಾಗಿದ್ದು, ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು,” ಎಂದು ಒತ್ತಾಯಿಸಿದ್ದಾರೆ.
ಕಾಮಗಾರಿಯ ಸಮಯದಲ್ಲಿ ಸೂಕ್ತ ಮೇಲ್ವಿಚಾರಣೆಯ ಕೊರತೆ, ಕಳಪೆ ಸಾಮಗ್ರಿ ಬಳಕೆ ಮತ್ತು ತಾಂತ್ರಿಕ ದೋಷಗಳು ಈ ಸಮಸ್ಯೆಗೆ ಕಾರಣವಾಗಿವೆ ಎಂದು ಅವರು ಆರೋಪಿಸಿದ್ದಾರೆ.
“ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಗುತ್ತಿಗೆದಾರ ಮತ್ತು ಸಂಬಂಧಿತ ಅಧಿಕಾರಿಗಳನ್ನು ಜವಾಬ್ದಾರರನ್ನಾಗಿಸಬೇಕು. ಒಂದು ವೇಳೆ ತಕ್ಷಣ ಕಾಮಗಾರಿ ಆರಂಭವಾಗದಿದ್ದರೆ, ಗ್ರಾಮಸ್ಥರೊಂದಿಗೆ ಸೇರಿ ಕಾನೂನು ಹೋರಾಟದ ಜೊತೆಗೆ ಉಗ್ರವಾದ ಪ್ರತಿಭಟನೆಯನ್ನು ಕೈಗೊಳ್ಳಲಾಗುವುದು,” ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

Comments are closed.

Don`t copy text!