ಆಳಂದ: ಪಟ್ಟಣದ ಮತಗಟ್ಟೆ ಸಂಖ್ಯೆ 105ರಲ್ಲಿ ಗಣಿತಿದಾರ ಈಶ್ವರಿ, ಮೇಲ್ವಿಚಾರಕ ಶಶಿಕಾಂತ ಬಂಗಡಗಾರ ಅವರು ಮನೆಗಳಿಗೆ ಭೇಟಿ ನೀಡಿ ಸಮೀಕ್ಷೆ ಕಾರ್ಯ ನಡೆಸಿದರು.
ಆಳಂದ: ತಾಲೂಕಿನಲ್ಲಿ ಸೋಮವಾರದಿಂದ ಆರಂಭಗೊಂಡ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಕುರಿತ ಸಮಗ್ರ ಸಮೀಕ್ಷೆ 254 ಮತಗಟ್ಟೆಗಳ ಪೈಕಿ ಇದರಲ್ಲಿ 17 ಮತಗಟ್ಟೆಗಳಲ್ಲಿ ಸಿಬ್ಬಂದಿ ಸೋಮವಾರವಷ್ಟೇ ಗೈರುಹಾಜರಾದರೂ, ಉಳಿದ 183 ಮತಗಟ್ಟೆಗಳಲ್ಲಿ ಸುಸೂತ್ರವಾಗಿ ಕಾರ್ಯ ನಿರ್ವಹಿಸಲಾಗಿದೆ. ಈ ಸಮೀಕ್ಷೆಯಲ್ಲಿ ಗೈರುಹಾಜರಾದ ಸಿಬ್ಬಂದಿ ವಿರುದ್ಧ ತಾಲೂಕು ನೋಡಲಾಧಿಕಾರಿಗಳು ಮೇಲಾಧಿಕಾರಿಗಳಿಗೆ ಶಿಸ್ತು ಕ್ರಮಕ್ಕಾಗಿ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಗೈರುಹಾಜರಾದ ಸಿಬ್ಬಂದಿಯಲ್ಲಿ ಕೆಲವರು ತಮ್ಮ ವಿರುದ್ಧದ ಪ್ರಸ್ತಾವನೆಯ ಬೆನ್ನೆಲೆಯಲ್ಲಿ ಮಂಗಳವಾರದಂದು ಬಂದು ಕರ್ತವ್ಯಕ್ಕೆ ಸಂಬಂಧಿಸಿದ ಆದೇಶ ಪ್ರತಿಗಳನ್ನು ಪಡೆದು ಕೆಲಸಕ್ಕೆ ಹಾಜರಾಗುವ ಪ್ರಯತ್ನ ಮಾಡಿದ್ದು ಕಂಡುಬಂದಿದೆ.
ಸಮೀಕ್ಷೆಯಲ್ಲಿ ಗಣತಿದಾರರಿಗೆ ನೀಡಲಾಗಿದ್ದ ಎಪಿಕೆ ಆಪ್ ನಿರ್ವಹಣೆಯಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದ್ದು, ಕೆಲವೆಡೆ ಈ ಕಾರ್ಯಕ್ಕೆ ಅಡ್ಡಿಯಾಗಿದೆ. ಈ ತಾಂತ್ರಿಕ ಸಮಸ್ಯೆಯ ಹೊರತಾಗಿಯೂ, 183 ಮತಗಟ್ಟೆಗಳಲ್ಲಿ ಸಮೀಕ್ಷೆ ಸುಗಮವಾಗಿ ನಡೆದಿದೆ ಎಂದು ಮೂಲಗಳು ಹೇಳಿಕೊಂಡಿವೆ.
ಸಮೀಕ್ಷೆಯಡಿ ಸಿಬ್ಬಂದಿಗಳು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಸರ್ಕಾರ ವಹಿಸಿದ ಈ ಮಹತ್ವದ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸುವ ನಿಟ್ಟಿನಲ್ಲಿ ಗಣತಿದಾರರು ಶ್ರಮಿಸುತ್ತಿದ್ದಾರೆ. ಒಟ್ಟಾರೆಯಾಗಿ, ಕೆಲವು ಸವಾಲುಗಳ ಹೊರತಾಗಿಯೂ ಸಮೀಕ್ಷೆಯು ತಾಲೂಕಿನಲ್ಲಿ ಪರಿಣಾಮಕಾರಿಯಾಗಿ ಮುಂದುವರೆದಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸುಗಮಗೊಳಿಸುವ ನಿರೀಕ್ಷೆಯಿದೆ.
ಗಣತಿ ಯಶಸ್ವಿಗೆ ಮನವಿ:
ಒಳಮೀಸಲಾತಿ ಸಮಗ್ರ ಸಮೀಕ್ಷೆ ಗಣಿತಿ ಕಾರ್ಯವು ಪಟ್ಟಣ ಸೇರಿ ಗ್ರಾಮೀಣ ಭಾಗದ 254 ಮತಗಟ್ಟೆಗಳಲ್ಲಿ ಸುಗಮವಾಗಿ ನಡೆದಿದೆ. ಮೊದಲು ದಿನ ಸೋಮವಾರ 17 ಮಂದಿ ಗೈರಾಗಿದ್ದರು, ಮಂಗಳವಾರ ಕೆಲವರು ಹಾಜರಾಗಿದ್ದಾರೆ. ಸುಸೂತ್ರವಾಗಿ ಯಶಸ್ವಿಯಾಗಲು ಗಣಿತಿದಾರರಿಗೆ ಸ್ಥಳೀಯ ಸಿಬ್ಬಂದಿಗಳು ಮತ್ತು ಸಮುದಾಯ ಬಾಂಧವರು ಸಹಕರಿಸಿ ಯಶಸ್ವಿಗೊಳಿಸಬೇಕು.
ಅಣ್ಣಾರಾವ್ ಪಾಟೀಲ ತಹಸೀಲ್ದಾರರು ಆಳಂದ.