Shubhashaya News

ನರೇಗಾ ಕಾಮಗಾರಿ ಅವ್ಯವಹಾರ: ಮಾಜಿ ಶಾಸಕರ ದೂರಿನ ಮೇಲೆ ಜಿಲ್ಲಾ ಪಂಚಾಯತ್ ತನಿಖಾ ತಂಡದ ಪರಿಶೀಲನೆ

ಆಳಂದ: ತಾಲೂಕಿನ ಹಲವಡೆ ಗ್ರಾಮದಲ್ಲಿ ನರೇಗಾ ಯೋಜನೆಯಡಿ ನಡೆದ ಕಾಮಗಾರಿಗಳಲ್ಲಿ ದೊಡ್ಡ ಮಟ್ಟದ ಅವ್ಯವಹಾರ ನಡೆದಿದೆ ಎಂದು ಮಾಜಿ ಶಾಸಕ ಸುಭಾಷ ಗುತ್ತೇದಾರ ಅವರು ಸರ್ಕಾರ ಮತ್ತು ಲೋಕಾಯುಕ್ತರಿಗೆ ದೂರು ಸಲ್ಲಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತ್ ನಿಯೋಜಿತ ಅಧಿಕಾರಿಗಳ ತನಿಖಾ ತಂಡವು ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ತಂಡವು ಕಾಮಗಾರಿಗಳ ಅನುಷ್ಠಾನಕ್ಕೆ ಸಂಬಂಧಿಸಿದ ವಾಸ್ತವ್ಯತೆ ಮತ್ತು ಉದ್ಯೋಗ ಖಾತ್ರಿ ಯೋಜನೆಯಡಿ ನೋಂದಾಯಿತ ಕಾರ್ಮಿಕರ ಪಟ್ಟಿಗಳನ್ನು ಪರಿಶೀಲಿಸಿತು. ವಿವಿಧ ಗ್ರಾಮ ಪಂಚಾಯತ್ ವ್ಯಾಪ್ತಿಯ ತೆರೆದ ಬಾವಿ ಕಾಮಗಾರಿಯಲ್ಲಿ ಅಕ್ರಮ ನಡೆಯುತ್ತಿದ್ದು, ಅದನ್ನು ತಡೆಹಿಡಿದು ತಪ್ಪಿತಸ್ಥ ಅಧಿಕಾರಿಗಳು ಮತ್ತು ಅದಕ್ಕೆ ಜವಾಬ್ದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಗುತ್ತೇದಾರ ಅವರು ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು.

ಜಿಲ್ಲಾ ಪಂಚಾಯತ್ ತನಿಖಾ ತಂಡವು ಹಾಳತಡಕಲ್ ವ್ಯಾಪ್ತಿಯ ನಸೀರವಾಡಿ ಗ್ರಾಮದ ತೆರೆದ ಬಾವಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದಾಗ, ಅಲ್ಲಿ ಕಾರ್ಮಿಕರ ಬದಲು ಯಂತ್ರಗಳ ಬಳಕೆ ಕಂಡುಬಂದಿದೆ ಎಂದು ಗುತ್ತೇದಾರ ತಂಡಕ್ಕೆ ತಿಳಿಸಿದರು. ಇದಲ್ಲದೆ, ಉದ್ಯೋಗ ಖಾತ್ರಿಯಡಿ ಸತ್ತವರ ಹೆಸರಿನಲ್ಲಿ ಹಾಗೂ ವಲಸೆ ಹೋದವರ ಹೆಸರಿನಲ್ಲಿ ಕೃತಕವಾಗಿ ನೋಂದಾಯಿಸಿ ಕೂಲಿ ಹಣ ಪಾವತಿಸಲಾಗುತ್ತಿದೆ ಎಂಬ ಗಂಭೀರ ಆರೋಪ ಮಾಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಗೈರಾಗಿದ್ದರು, ಆದರೆ ಸ್ಥಳೀಯರು ತನಿಖಾ ತಂಡದ ಮುಂದೆ ತಮ್ಮ ಅಹವಾಲುಗಳನ್ನು ಮಂಡಿಸಿದರು. ನಂತರ, ಮಾದನಹಿಪ್ಪರಗಾ ಮತ್ತು ಧರ್ಮವಾಡಿ ಗ್ರಾಮಗಳ ಕಾಮಗಾರಿಗಳನ್ನು ತಂಡ ಪರಿಶೀಲಿಸಿತು. ಈ ಪರಿಶೀಲನೆ ಸಂದರ್ಭದಲ್ಲಿ ಮಾಜಿ ಶಾಸಕ ಗುತ್ತೇದಾರ ಅವರೂ ಹಾಜರಿದ್ದರು.

ಮಾಜಿ ಶಾಸಕರ ಗಂಭೀರ ಆರೋಪ: ಗುತ್ತೇದಾರ ಅವರು ಪುನರುಚ್ಛಾರ ಮಾಡಿ, “ಉದ್ಯೋಗ ಖಾತ್ರಿಯಡಿ ಮಂಜೂರಾದ ೪೦೦ಕ್ಕೂ ಹೆಚ್ಚು ತೆರೆದ ಬಾವಿಗಳ ಕಾಮಗಾರಿ ಅಧಿಕಾರಿಗಳು ಮತ್ತು ಶಾಸಕರ ಬೆಂಬಲಿಗರು ನೇಮಕಿತ ಕಾರ್ಮಿಕರಿಗೆ ಕೆಲಸ ನೀಡದೇ ಯಂತ್ರಗಳ ಮೂಲಕ ನಡೆಸುತ್ತಿದ್ದಾರೆ. ಈ ಮೂಲಕ ಶೇ ೩೦ರಷ್ಟು ಹಣವನ್ನು ಲೂಟಿ ಮಾಡಲಾಗಿದೆ. ಸುಮಾರು ೬ ಕೋಟಿ ರೂಪಾಯಿ ಅವ್ಯವಹಾರವಾಗಿದೆ,” ಎಂದು ಆರೋಪಿಸಿದರು. ಅವರು ಈ ಅವ್ಯವಹಾರವನ್ನು ತಡೆಹಿಡಿದು ಕಠಿಣ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಆಗ್ರಹಿಸಿದರು.

Leave A Reply

Your email address will not be published.