ರೈತರ ಆಕ್ರೋಶ ತೀವ್ರ: ಮೇ ೨೫ಕ್ಕೆ ಶಾಸಕ ಕಚೇರಿಗೆ ಮುತ್ತಿಗೆ
ಎರಡು ತಿಂಗಳ ಧರಣಿಗೂ ಸ್ಪಂದನೆ ಇಲ್ಲವೆಂದು ಕಿಸಾನಸಭಾ ಆರೋಪ – ನೀರು, ವಿದ್ಯುತ್, ಸಾಲಬಾಧೆ ಸಮಸ್ಯೆ ಪರಿಹಾರಕ್ಕೆ ಒತ್ತಾಯ
ಆಳಂದ: ಪಟ್ಟಣದ ಪ್ರವಾಸಿ ಮಂದಿರ ಮುಂದೆ ರೈತಪರ ಬೇಡಿಕೆಗೆ ಆಗ್ರಹಿಸಿ ಕಿಸಾನಸಭಾ, ಖೇತ ಮಜದೂರ ಯುನಿಯನ್ ಆಶ್ರಯದಲ್ಲಿ ನಡೆದ ಅನಿರ್ದಿಷ್ಟಾವಧಿ ಧರಣಿ ನಡುವೆ ಮುಖಂಡ ಮೌಲಾ ಮುಲ್ಲಾ, ಚಂದ್ರಕಾAತ ಖೋಬ್ರೆ, ಧರ್ಮಣ್ಣಾ ಪೂಜಾರಿ, ಮಹಾದೇವ ಮಂಟಗಿ ಇತರರು ಘೋಷಣಾ ಚಳವಳಿ ನಡೆಸಿದರು.
ಆಳಂದ: ರೈತಪರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ ಎರಡು ತಿಂಗಳಿನಿAದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೂ ಸರ್ಕಾರ ಹಾಗೂ ಜನಪ್ರತಿನಿಧಿಗಳಿಂದ ಯಾವುದೇ ಸಮರ್ಪಕ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಮೇ ೨೫ರಂದು ಶಾಸಕ ಬಿ.ಆರ್. ಪಾಟೀಲ ಅವರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಕಿಸಾನಸಭಾ ರಾಜ್ಯ ಕಾರ್ಯಾಧ್ಯಕ್ಷ ಮೌಲಾ ಮುಲ್ಲಾ ಎಚ್ಚರಿಕೆ ನೀಡಿದರು.
ಪಟ್ಟಣದ ಪ್ರವಾಸಿ ಮಂದಿರದ ಎದುರು ಕಿಸಾನಸಭಾ ಹಾಗೂ ಭಾರತೀಯ ಖೇತ ಮಜದೂರ ಯೂನಿಯನ್ ಆಶ್ರಯದಲ್ಲಿ ನಡೆಯುತ್ತಿರುವ ರೈತಪರ ಧರಣಿ ಸತ್ಯಾಗ್ರಹದ ವೇಳೆ ಗುರುವಾರ ನಡೆದ ಘೋಷಣಾ ಚಳವಳಿಯಲ್ಲಿ ಮಾತನಾಡಿದ ಅವರು, ರೈತ ಹೋರಾಟಗಳ ಬೆನ್ನೇರಿಕೊಂಡು ಅಧಿಕಾರಕ್ಕೆ ಬಂದ ಜನಪ್ರತಿನಿಧಿಗಳು ಈಗ ರೈತರ ಸಮಸ್ಯೆಗಳ ಬಗ್ಗೆ ಮೌನ ವಹಿಸಿರುವುದು ದುರಂತಕರ ಬೆಳವಣಿಗೆಯಾಗಿದೆ ಎಂದು ಆರೋಪಿಸಿದರು.
ತಾಲೂಕಿನಾದ್ಯಂತ ತೀವ್ರಗೊಂಡಿರುವ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಅಂತರ್ಜಲ ಮಟ್ಟ ಹೆಚ್ಚಿಸಲು ಸಮಗ್ರ ಯೋಜನೆಗಳನ್ನು ಜಾರಿಗೊಳಿಸಿ ಕೃಷಿಗೆ ನೀರಾವರಿ ಸೌಲಭ್ಯ ಒದಗಿಸಬೇಕು. ರೈತರಿಗೆ ಸಮರ್ಪಕ ವಿದ್ಯುತ್ ಪೂರೈಕೆ ಹಾಗೂ ಬಾಕಿ ಉಳಿದಿರುವ ಹೊಸ ವಿದ್ಯುತ್ ಸಂಪರ್ಕಗಳನ್ನು ಕೂಡಲೇ ನೀಡಬೇಕು ಎಂದು ಒತ್ತಾಯಿಸಿದರು.
“ಎರಡು ತಿಂಗಳಿನಿAದ ನಿರಂತರ ಹೋರಾಟ ನಡೆಯುತ್ತಿದ್ದರೂ ಶಾಸಕರು ಸ್ಥಳಕ್ಕೆ ಭೇಟಿ ನೀಡಿ ರೈತರ ಅಹವಾಲು ಆಲಿಸುವ ಕನಿಷ್ಠ ಪ್ರಯತ್ನ ಕೂಡ ಮಾಡಿಲ್ಲ. ಅನೇಕ ಬಾರಿ ಮನವಿ ಸಲ್ಲಿಸಿದರೂ ಸ್ಪಂದನೆ ಸಿಗದ ಕಾರಣ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುತ್ತಿದೆ” ಎಂದು ಮೌಲಾ ಮುಲ್ಲಾ ಹೇಳಿದರು.
“ನಮ್ಮ ಹೊಲ – ನಮ್ಮ ರಸ್ತೆ” ಯೋಜನೆಯನ್ನು ಜಾರಿಗೊಳಿಸಿ ಗ್ರಾಮೀಣ ಕೃಷಿ ರಸ್ತೆಗಳ ಅಭಿವೃದ್ಧಿಗೆ ಸರ್ಕಾರ ಮುಂದಾಗಬೇಕು. ಖಾಸಗಿ ಲೇವಾದೇವಿ ಸಂಸ್ಥೆಗಳ ಅಕ್ರಮ ವ್ಯವಹಾರಗಳ ವಿರುದ್ಧ ಸಮಗ್ರ ತನಿಖೆ ನಡೆಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ದನಗಳ ಕೊಟ್ಟಿಗೆ ಮತ್ತು ಕುರಿದೊಡ್ಡಿ ನಿರ್ಮಾಣಕ್ಕೂ ಸರ್ಕಾರ ಅನುದಾನ ನೀಡಬೇಕು ಎಂದು ಆಗ್ರಹಿಸಿದರು.
ಖಂಡಾಳ, ಕೊರಳ್ಳಿ ಸೇರಿದಂತೆ ತಾಲೂಕಿನ ಹಲವು ಗ್ರಾಮಗಳಲ್ಲಿ ಖಾಸಗಿ ಹಣಕಾಸು ಸಂಸ್ಥೆಗಳ ಸಾಲದ ಒತ್ತಡದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಆತ್ಮಹತ್ಯೆ ಪ್ರಕರಣಗಳೂ ಹೆಚ್ಚುತ್ತಿರುವುದಾಗಿ ಆರೋಪಿಸಿದ ಅವರು, “ರೈತರ ಮೇಲಿನ ಆರ್ಥಿಕ ಶೋಷಣೆಯನ್ನು ತಡೆಯುವಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ವಿಫಲರಾಗಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಡೋಳಾ ಗ್ರಾಮದಲ್ಲಿ ಕೃಷಿ ಸಂಚೈಯನಿ ಯೋಜನೆಯಡಿ ಅಂತರ್ಜಲ ಮಟ್ಟ ಹೆಚ್ಚಳಕ್ಕಾಗಿ ಬಿಡುಗಡೆಯಾದ ಅನುದಾನದ ದುರ್ಬಳಕೆಯ ವಿರುದ್ಧ ಇನ್ನೂ ಯಾವುದೇ ಕ್ರಮ ಕೈಗೊಳ್ಳದಿರುವುದನ್ನೂ ಪ್ರಶ್ನಿಸಿದ ಅವರು, ಈ ಎಲ್ಲಾ ಸಮಸ್ಯೆಗಳ ಕುರಿತು ಸ್ಪಷ್ಟ ಉತ್ತರ ಹಾಗೂ ತಕ್ಷಣದ ಕ್ರಮಕ್ಕೆ ಆಗ್ರಹಿಸಿ ಮೇ ೨೫ರಂದು ಶಾಸಕ ಕಚೇರಿಗೆ ಮುತ್ತಿಗೆ ಹಾಕಿ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ರೈತರ ಹೋರಾಟಕ್ಕೆ ವಿವಿಧ ಸಂಘಟನೆಗಳು ಹಾಗೂ ಗ್ರಾಮೀಣ ಭಾಗದ ರೈತರಿಂದ ಬೆಂಬಲ ವ್ಯಕ್ತವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಹೋರಾಟ ಮತ್ತಷ್ಟು ತೀವ್ರ ಸ್ವರೂಪ ಪಡೆಯುವ ಸಾಧ್ಯತೆ ಇದೆ ಎಂದು ಹೋರಾಟಗಾರರು ತಿಳಿಸಿದ್ದಾರೆ.
ಹೋರಾಟ ಸ್ಥಳಕ್ಕೆ ರಮೇಶ ಲೋಹಾರ, ರವಿ ಪಾಟೀಲ ಆಳಂಗಾ, ಯುವ ಮುಖಂಡ ಮಹಾದೇವ ಕಾಂಬಳೆ ಬಬಲೇಶ್ವರ ಭೇಟಿ ನೀಡಿ ರೈತರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕಿಸಾನಸಭಾ ಗೌರವ ಅಧ್ಯಕ್ಷ ಚಂದ್ರಕಾAತ ಖೋಬ್ರೆ, ತಾಲೂಕು ಅಧ್ಯಕ್ಷ ಧರ್ಮಣ್ಣಾ ಪೂಜಾರಿ, ನ್ಯಾಯವಾದಿ ಪಂಡಿತ ಸಲಗರ, ಕಮಲೇಶ ಅವುಟೆ, ರತನಚಂದ ಕಲಶೆಟ್ಟಿ, ಮಹಾದೇವ ಮಂಟಕಿ, ಕಭೀರಾ ಬೇಗಂ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.