ವಾಡಿ, ಸೆ.3: ದೇಶದ ಭಾವಿ ಪ್ರಜೆಗಳಾದ ವಿದ್ಯಾರ್ಥಿ ಯುವಜನರ ದೇಹದ ಆರೋಗ್ಯ ಗುಟ್ಟು ಕ್ರೀಡಾ ಚಟುವಟಿಕೆಗಳಲ್ಲಿದೆ ಎಂದು ಸ್ಥಳೀಯ ಎಸಿಸಿ ಅದಾನಿ ಸಿಮೆಂಟ್ ಕಾರ್ಖಾನೆಯ ಘಟಕ ಮುಖ್ಯಸ್ಥ ಪ್ರಶಾಂತ ದೇಶಮುಖ ಹೇಳಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಕ್ರೀಡಾ ದಿನಾಚರಣೆ ಕಾರ್ಯಕ್ರಮದಲ್ಲಿ ಅದಾನಿ ಫೌಂಡೇಶನ್ ವತಿಯಿಂದ ಮಂಜೂರು ಮಾಡಲಾದ ವಿವಿಧ ಕ್ರೀಡಾ ಸಾಮಗ್ರಿಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿ ಅವರು ಮಾತನಾಡಿದರು. ಒಂದಾನೊಂದು ಕಾಲದಲ್ಲಿ ಗ್ರಾಮೀಣ ಕ್ರೀಡೆಗಳೇ ದೈಹಿಕ ಸದೃಢತೆಗೆ ಪೂರಕವಾಗಿದ್ದವು. ಇಂದು ಕ್ರೀಡಾಪಟುಗಳಿಗೆ ಅನೇಕ ಸೌಲಭ್ಯಗಳು ಇರುವುದನ್ನು ನಾವು ಕಾಣುತ್ತಿದ್ದೇವೆ. ಮೈದಾನದಲ್ಲಿ ಬೀಡುಬಿಟ್ಟು ಆಟವಾಡುವ ಮಕ್ಕಳ ಆರೋಗ್ಯ ಉತ್ತಮಗೊಳ್ಳುತ್ತದೆ. ಮಾನಸಿಕವಾಗಿ ಹಾಗೂ ದೈಹಿಕವಾಗಿ ವಿದ್ಯಾರ್ಥಿಗಳು ಚೈತನ್ಯಶೀಲರಾಗಿದ್ದಾಗಲೇ ಪ್ರತಿಭೆ ಹೊರಜಗತ್ತಿಗೆ ಪರಿಚಯವಾಗುತ್ತದೆ. ಪಾಠದಷ್ಟೇ ಆಟಕ್ಕೂ ಆಧ್ಯತೆ ನೀಡಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ಪ್ರಾಂಶುಪಾಲ ಉದಯ ಧರೆಣ್ಣವರ್, ಕ್ರೀಡಾ ದಿನಾಚರಣೆ ದಿನವನ್ನು ಆಯ್ಕೆ ಮಾಡಿಕೊಂಡು ಅದಾನಿ ಸಿಮೆಂಟ್ ಕಾರ್ಖಾನೆಯ ಮುಖ್ಯಸ್ಥರು ನಮ್ಮ ಶಾಲೆಯ ನೂರಾರು ವಿದ್ಯಾರ್ಥಿಗಳಿಗೆ ಕ್ರೀಡಾ ಸಾಮಗ್ರಿ ನೀಡುವ ಮೂಲಕ ಮಕ್ಕಳ ದೈಹಿಕ ಆರೋಗ್ಯ ಕಾಳಜಿ ಮೆರೆದಿದ್ದಾರೆ. ಈ ಸೌಲಭ್ಯವನ್ನು ಬಳಸಿಕೊಂಡು ಕ್ರೀಡಾಪಟು ವಿದ್ಯಾರ್ಥಿಗಳು ಉತ್ತಮ ಪ್ರತಿಭೆ ಮೆರೆಯಬೇಕು ಎಂದು ಹೇಳಿದರು.
ಎಸಿಸಿ ಕಂಪನಿಯ ಸಿಮೆಂಟ್ ಗುಣಮಟ್ಟ ಮುಖ್ಯಸ್ಥ ಕೋಮಲ್ ಸಿಂಗ್ ಡಾಂಗೆ, ಜನರಲ್ ಮ್ಯಾನೇಜರ್ ಆದರ್ಶ ಕುಮಾರ, ಜೈಸ್ವಾಲ್, ಎಸಿಸಿ ಸಿಮೆಂಟ್ ಕಾರ್ಖಾನೆಯ ಸಿಎಸ್ ಆರ್ ಅದಾನಿ ಫೌಂಡೇಶನ್ ಮುಖ್ಯಸ್ಥ ಶೇಖ್ ಶಬ್ಬೀರ್, ಡಿ.ಆರ್.ಶರತ್, ಯೋಗ ಶಿಕ್ಷಕ ಮಲ್ಲಯ್ಯಸ್ವಾಮಿ ಮಠಪತಿ, ಪತ್ರಕರ್ತ ಮಡಿವಾಳಪ್ಪ ಹೇರೂರ, ನಿಲಯ ಪಾಲಕ ನಾಗರಾಜ ನೆಲೋಗಿ, ಶಿಕ್ಷಕರಾದ ಸಿದ್ದಲಿಂಗ ರಾಠೋಡ, ನೀಲಯ್ಯ ಹಿರೇಮಠ, ಅದಾನಿ ಫೌಂಡೇಶನ್ ಸಿಬ್ಬಂದಿ ಈರಣ್ಣ ಇಸಬಾ, ಸುನಿತಾ ಸಿತಾಳೆ, ಅಶ್ವಿನಿ ಗೌಳಿ, ಶ್ವೇತಾರಾಣಿ ಸೇರಿದಂತೆ ನೂರಾರು ಜನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ದೈಹಿಕ ಶಿಕ್ಷಕ ಶ್ರೀನಾಥ್ ಇರಗೊಂಡ ನಿರೂಪಿಸಿ, ವಂದಿಸಿದರು.