ಕಲಬುರಗಿ: ಪಿ.ಎಂ. ಕಿಸಾನ್ (PM-KISAN) ಯೋಜನೆಯ ಅರ್ಹ ಫಲಾನುಭವಿ ರೈತರು ಮುಂದಿನ ಕಂತಿನ ನೆರವು ಪಡೆಯಲು ಬಯೋಮೆಟ್ರಿಕ್ ಅಥವಾ ಮುಖ (Face) ದೃಢೀಕರಣ ಆಧಾರಿತ ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ. ಈ ಯೋಜನೆಯಡಿ ನಕಲಿ ಫಲಾನುಭವಿಗಳನ್ನು ತಡೆಯಲು, ಮೃತರನ್ನು ಪಟ್ಟಿಯಿಂದ ಕೈಬಿಟ್ಟು, ಅರ್ಹ ರೈತರಿಗೆ ಪಾರದರ್ಶಕವಾಗಿ ಹಣ ಜಮೆ ಮಾಡಲು ಕೇಂದ್ರ ಸರ್ಕಾರವು ಈ ಕ್ರಮ ಕೈಗೊಂಡಿದೆ ಎಂದು ಕಲಬುರಗಿ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಆಧಾರ್ ಓಟಿಪಿ ಆಧಾರಿತ ಇ-ಕೆವೈಸಿಯಿಂದಾಗಿ ಮೃತಪಟ್ಟವರ ಖಾತೆಗಳಿಗೂ ಹಣ ವರ್ಗಾವಣೆಯಾಗುತ್ತಿದ್ದ ಪ್ರಕರಣಗಳು ಬೆಳಕಿಗೆ ಬಂದಿದ್ದರಿಂದ, ಕೇಂದ್ರ ಸರ್ಕಾರವು ಓಟಿಪಿ ವ್ಯವಸ್ಥೆ ರದ್ದುಗೊಳಿಸಿ, ಬಯೋಮೆಟ್ರಿಕ್ ಅಥವಾ ಫೇಸ್ ಆಧಾರಿತ ಇ-ಕೆವೈಸಿಗೆ ಮಾತ್ರ ಅವಕಾಶ ನೀಡಿದೆ. ಪ್ರತಿ ಫಲಾನುಭವಿ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸಿದ್ದರೂ ಇ-ಕೆವೈಸಿ ಪ್ರಕ್ರಿಯೆ ಮಾಡಬೇಕಿದೆ.
ಜಿಲ್ಲೆಯಲ್ಲಿ ಒಟ್ಟು 1,99,067 ರೈತರ ಇ-ಕೆವೈಸಿ ಬಾಕಿ ಇದೆ. (ಅಫಜಲಪೂರ-26786, ಆಳಂದ-31954, ಚಿಂಚೋಳಿ-19324, ಚಿತ್ತಾಪೂರ-17097, ಕಲಬುರಗಿ-18418, ಕಾಳಗಿ-13792, ಕಮಲಾಪೂರ-11156, ಜೇವರ್ಗಿ-21056, ಸೇಡಂ-20621, ಶಹಬಾದ-3364 ಹಾಗೂ ಯಡ್ರಾಮಿ-15499).
ರೈತರು ಹತ್ತಿರದ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಅಥವಾ ಪಿ.ಎಂ. ಕಿಸಾನ್ ಮೊಬೈಲ್ ಅಪ್ಲಿಕೇಶನ್ ಡೌನ್‍ಲೋಡ್ ಮಾಡಿಕೊಂಡು, ಸ್ಮಾರ್ಟ್ ಫೋನ್ ಮೂಲಕ ಮುಖ ದೃಢೀಕರಣ ಮಾಡಿ ಸ್ವತ: ಇ-ಕೆವೈಸಿ ಪೂರ್ಣಗೊಳಿಸಬಹುದು.
ಮತ್ತಿತರ ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಛೇರಿಗೆ ಸಂಪರ್ಕಿಸಬೇಕೆಂದು ಅವರು ತಿಳಿಸಿದ್ದಾರೆ.