Shubhashaya News

ಮಣೂರ ಆಸ್ಪತ್ರೆಯ ‘ದಿ ವೆಲ್‌ನೆಸ್ ರೆವಲ್ಯೂಷನ್’ ಮ್ಯಾಗಝೀನ್‌ನ 5ನೇ ಸಂಚಿಕೆ ಲೋಕಾರ್ಪಣೆ

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಜನರಲ್ಲಿ ಆರೋಗ್ಯ, ಕ್ಷೇಮ, ಯೋಗ ಹಾಗೂ ಸದೃಢ ಜೀವನಶೈಲಿಯ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ನಗರದ ಪ್ರತಿಷ್ಠಿತ ಮಣೂರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವತಿಯಿಂದ ಪ್ರಕಟಿಸಲಾಗುತ್ತಿರುವ ‘ದಿ ವೆಲ್‌ನೆಸ್ ರೆವಲ್ಯೂಷನ್’ ಆರೋಗ್ಯ ಮತ್ತು ಕ್ಷೇಮ ಕುರಿತ ಮ್ಯಾಗಝೀನ್‌ನ 5ನೇ ಸಂಚಿಕೆಯನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಅವರು ಮಣೂರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಲೋಕಾರ್ಪಣೆಗೊಳಿಸಿದರು.

ಮ್ಯಾಗಝೀನ್‌ನ್ನು ಓದಿದ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಅವರು, ಆರೋಗ್ಯ ಮತ್ತು ಕ್ಷೇಮದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಣೂರ ಆಸ್ಪತ್ರೆ ಕೈಗೊಂಡಿರುವ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಣೂರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯಸ್ಥ ಡಾ. ಫಾರುಕ್ ಅಹ್ಮದ್ ಮಣೂರ, “ಕಲ್ಯಾಣ ಕರ್ನಾಟಕ ಭಾಗದ ಜನರಲ್ಲಿ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಕಳೆದ ಐದು ವರ್ಷಗಳಿಂದ ಮಣೂರ ಆಸ್ಪತ್ರೆಯ ತಂಡವು ನಿರಂತರವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ಉಚಿತ ಆರೋಗ್ಯ ತಪಾಸಣಾ ಶಿಬಿರಗಳು, ಟ್ರಾಮಾ ಡೇ ಸೇರಿದಂತೆ ವಿವಿಧ ಆರೋಗ್ಯ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜನರಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ,” ಎಂದರು.

“ಇದರ ಮುಂದುವರಿದ ಭಾಗವಾಗಿ ಜನರಿಗೆ ಆರೋಗ್ಯ, ಕ್ಷೇಮ, ಯೋಗ ಮತ್ತು ದೈಹಿಕ-ಮಾನಸಿಕ ಸದೃಢತೆಯ ಕುರಿತು ಮತ್ತಷ್ಟು ಮಾಹಿತಿ ಹಾಗೂ ಜಾಗೃತಿ ಮೂಡಿಸುವ ಉದ್ದೇಶದಿಂದ ‘ದಿ ವೆಲ್‌ನೆಸ್ ರೆವಲ್ಯೂಷನ್’ ಮ್ಯಾಗಝೀನ್‌ನ್ನು ಪ್ರಕಟಿಸಲಾಗುತ್ತಿದೆ. ಇದು ಕಲ್ಯಾಣ ಕರ್ನಾಟಕ ಭಾಗದಲ್ಲಿ ಆರೋಗ್ಯ ಮತ್ತು ಕ್ಷೇಮದ ಕುರಿತು ಪ್ರಕಟವಾಗುತ್ತಿರುವ ಪ್ರಪ್ರಥಮ ಮ್ಯಾಗಝೀನ್ ಆಗಿದ್ದು, ಇದೀಗ 5ನೇ ಸಂಚಿಕೆ ಬಿಡುಗಡೆಯಾಗಿದೆ. ಈ ಮ್ಯಾಗಝೀನ್‌ನ್ನು ಕಲ್ಯಾಣ ಕರ್ನಾಟಕದ ಪ್ರತಿಯೊಂದು ತಾಲೂಕಿಗೂ ಉಚಿತವಾಗಿ ವಿತರಿಸಲಾಗುತ್ತಿದೆ,” ಎಂದು ಡಾ. ಫಾರುಕ್ ಅಹ್ಮದ್ ಮಣೂರ ತಿಳಿಸಿದರು.

Leave A Reply

Your email address will not be published.