ಚಿತ್ತಾಪುರ; ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಸೋಮವಾರ ಸಡಗರ ಸಂಭ್ರಮದಿಂದ ನಾಗರಪಂಚಮಿ ಹಬ್ಬ ಆಚರಿಸಲಾಯಿತು.
ಪಟ್ಟಣದ ರಾಯಲ್ ಮೈದಾನದಲ್ಲಿ ನಾಗರ ಮೂರ್ತಿಗಳಿಗೆ ಮಹಿಳೆಯರು ವಿವಿಧ ಬತ್ತಿಗಳಿಂದ ನಾಗರ ಮೂರ್ತಿಗೆ ಅಲಂಕಾರ ಮಾಡಿದರು. ನಂತರ ಕುಟುಂಬದ ಸದಸ್ಯರು ಹಾಲೆರೆದು ಭಕ್ತಿಭಾವ ಅರ್ಪಿಸಿದರು. ಕರ್ಪೂರ ಬೆಳಗಿ ಹೂವು ಕಾಯಿ ಅರ್ಪಿಸಿ, ಪ್ರಾರ್ಥನೆ ಸಲ್ಲಿಸಿದರು. ಅಲ್ಲದೆ ಅಳ್ಳು, ಕಡಲೆ ಗುಗ್ಗರಿ, ಶೇಂಗಾದ ಉಂಡೆ, ತಂಬಿಟ್ಟು ಕಡಲೆಕಾಳು ಪಲ್ಲೆ ಮುಟಿಗಿ ಉಂಡಿಗಳನ್ನು ನಾಗರ ಮೂರ್ತಿಗೆ ನೈವೇದ್ಯ ಸಲ್ಲಿಸಿದರು. ಕಲ್ಲಿನ ನಾಗರಕ್ಕೆ ಹಾಲೆರೆದು, ಮಹಿಳೆಯರು, ಹೆಣ್ಣು ಮಕ್ಕಳು ಉಪವಾಸ ಮಾಡುವ ಮೂಲಕ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ತಮ್ಮ ಆಪ್ತರಿಗೆ, ಬಂಧುಗಳಿಗೆ ಕುಪ್ಪಸ, ಕೊಬ್ಬರಿ, ಅಳ್ಳಿಟ್ಟು ಮತ್ತು ಗುಗ್ಗರಿ ಕೊಟ್ಟರು. ಹಬ್ಬಕ್ಕೆ ತಯಾರಿಸಿದ ಖಾದ್ಯಗಳನ್ನು ಪರಸ್ಪರ ಹಂಚಿಕೊಂಡು ಸವಿದರು.
ಪಂಚಮಿ ಅಂಗವಾಗಿ ಯುವಕರು ಭಾರ ಎತ್ತುವುದು, ನಿಗದಿಪಡಿಸಿದ ಗುರಿಯತ್ತ ನಿಂಬೆ ಹಣ್ಣು, ತೆಂಗಿನ ಕಾಯಿ ಎಸೆಯುವುದು, ಕಣ್ಣಿಗೆ ಬಟ್ಟೆ ಕಟ್ಟಿ ಸ್ಥಳ ಗುರುತಿಸುವುದು, ಎತ್ತಿನ ಗಾಡಿಗಳನ್ನು ಜಗ್ಗುವ ಸಾಹಸದ ಬಾಜಿ ಕಟ್ಟಿ ಸಂಭ್ರಮಿಸಿದರು.
Next Post