ಆಳಂದ: ಕಡಗಂಚಿ ಬಳಿಯ ಸಿಯುಕೆ ಆಯೋಜಿಸಿದ್ದ “ನಶಾಮುಕ್ತ ಯುವ – ವಿಕಸಿತ ಭಾರತ ಸಂಕಲ್ಪ ಜಾಗೃತಿ ಅಭಿಯಾನ” ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವರ್ಚುವಲ್ ಭಾಷಣವನ್ನು ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ, ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ವೀಕ್ಷಿಸಿದರು.
ಆಳಂದ: ಮಾದಕವಸ್ತು ಸೇವನೆಯಿಂದ ಮುಕ್ತವಾದ ಯುವ ಸಮುದಾಯ ನಿರ್ಮಾಣವೇ ವಿಕಸಿತ ಭಾರತದ ಅಡಿಪಾಯವಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯೂ ಈ ಜಾಗೃತಿ ಅಭಿಯಾನದ ರಾಯಭಾರಿಯಾಗಬೇಕು ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಕರೆ ನೀಡಿದರು.
ತಾಲೂಕಿನ ಕಡಗಂಚಿ ಬಳಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಕೇಂದ್ರ ಸರ್ಕಾರದ “ನಶಾಮುಕ್ತ ಯುವ – ವಿಕಸಿತ ಭಾರತ ಸಂಕಲ್ಪ ಜಾಗೃತಿ ಅಭಿಯಾನ” ಅಂಗವಾಗಿ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಯುವಜನತೆ, ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಹಾಗೂ ಶಿಕ್ಷಣ ಸಂಸ್ಥೆಗಳನ್ನು ಉದ್ದೇಶಿಸಿ ನೀಡಿದ ನೇರ ವರ್ಚುವಲ್ ಭಾಷಣವನ್ನು ವಿಶ್ವವಿದ್ಯಾಲಯದ ಆಡಿಟೋರಿಯಂ–೧ ಹಾಗೂ ಆಡಿಟೋರಿಯಂ–೨ರಲ್ಲಿ ವಿದ್ಯಾರ್ಥಿಗಳು ಮತ್ತು ಬೋಧಕ ವೃಂದ ವೀಕ್ಷಿಸಿದರು.
ಆಡಿಟೋರಿಯಂ–೧ರಲ್ಲಿ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಹಾಗೂ ಆಡಿಟೋರಿಯಂ–೨ರಲ್ಲಿ ಪ್ರಭಾರ ಕುಲಸಚಿವ ಪ್ರೊ. ವೆಂಕಟ ರಮಣ ದೊಡ್ಡಿ ಅವರ ಉಪಸ್ಥಿತಿಯಲ್ಲಿ ಸುಮಾರು ೮೦೦ಕ್ಕೂ ಅಧಿಕ ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಧಾನಿಯವರ ಸಂದೇಶವನ್ನು ಆಲಿಸಿದರು.
ವಿಶ್ವವಿದ್ಯಾಲಯದ ಸುಮಾರು ೨,೧೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಈಗಾಗಲೇ ‘ಮೇರಾ ಯುವ ಭಾರತ’ ವೇದಿಕೆಯಡಿ ನಶಾಮುಕ್ತ ಭಾರತ ಅಭಿಯಾನಕ್ಕೆ ನೋಂದಣಿ ಮಾಡಿಕೊಂಡಿದ್ದು, ಸ್ವಯಂಚಾಲಿತವಾಗಿ ಪ್ರಮಾಣಪತ್ರವನ್ನೂ ಪಡೆದಿದ್ದಾರೆ ಎಂಬ ಮಾಹಿತಿಯನ್ನು ಅಧಿಕಾರಿಗಳು ನೀಡಿದರು.