Shubhashaya News

ಮುಂಗಾರು ಹಂಗಾಮಿಗೆ ಆಳಂದದಲ್ಲಿ ಅರಣ್ಯ ಸಸಿ ಸಿದ್ಧತೆ

ಪ್ರಾದೇಶಿಕ ಅರಣ್ಯ ಇಲಾಖೆಯಿಂದ ೫೨ ಸಾವಿರ, ಸಾಮಾಜಿಕ ೨೫ ಸಾವಿರ ಸಸಿ ನೆಡುವ ಗುರಿ: ರೈತರಿಗೆ ರಿಯಾಯಿತಿ ದರದಲ್ಲಿ ಸಸಿ ವಿತರಣೆ

ಆಳಂದ: ಕೊರಳ್ಳಿ ಸಸಿ ಕ್ಷೇತ್ರಕ್ಕೆ ಜಿಲ್ಲಾ ಸಹಾಯಕ ಸಂರಕ್ಷಣಾಧಿಕಾರಿ ಲಕ್ಷö್ಮಣ ಅವರು ಭೇಟಿ ನೀಡಿ ಪರಿಶೀಲಿಸಿದರು. ಆರ್‌ಎಫ್‌ಒಶಾಂತರೆಡ್ಡಿ ತೋರಿಸಿದರು.

ಆಳಂದ: ಮುಂಗಾರು ಹಂಗಾಮು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ಅರಣ್ಯ ವಿಸ್ತರಣೆ ಹಾಗೂ ಹಸಿರು ಸಂರಕ್ಷಣೆಗೆ ಪ್ರಾದೇಶಿಕ ಮತ್ತು ಸಾಮಾಜಿಕ ಅರಣ್ಯ ಇಲಾಖೆಗಳು ಭಾರೀ ಪ್ರಮಾಣದಲ್ಲಿ ಸಸಿ ಉತ್ಪಾದನೆ ಮತ್ತು ನೆಡುವ ಕಾಮಗಾರಿಗಳಿಗೆ ಸಿದ್ಧತೆ ನಡೆಸಿವೆ. ರಸ್ತೆ ಬದಿಗಳು, ಅರಣ್ಯ ಪ್ರದೇಶಗಳು, ಸರ್ಕಾರಿ ಜಮೀನುಗಳು, ಶಾಲಾ-ಕಾಲೇಜು ಆವರಣಗಳು ಹಾಗೂ ರೈತರ ಹೊಲಗಳಲ್ಲಿ ಹಸಿರು ವಾತಾವರಣ ನಿರ್ಮಿಸುವ ಉದ್ದೇಶದಿಂದ ಸಾವಿರಾರು ಸಸಿಗಳನ್ನು ಬೆಳೆಸಲಾಗಿದ್ದು, ಮಳೆಯಾದ ಬಳಿಕ ಹಂತ ಹಂತವಾಗಿ ನೆಡುವ ಕಾರ್ಯ ಕೈಗೊಳ್ಳಲಾಗುತ್ತದೆ.
ಈಚೆಗೆ ಕೊರಳ್ಳಿ ಸಸಿ ಕ್ಷೇತ್ರಕ್ಕೆ ಜಿಲ್ಲಾ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲಕ್ಷ್ಮಣ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಾದೇಶಿಕ ವಲಯದ ಆರ್‌ಎಫ್‌ಒ ಶಾಂತರೆಡ್ಡಿ ಸಸಿ ಉತ್ಪಾದನೆ, ನಿರ್ವಹಣೆ ಹಾಗೂ ಮುಂಗಾರು ಕಾಮಗಾರಿಗಳ ಕುರಿತು ಮಾಹಿತಿ ನೀಡಿದರು. ಮಳೆಗಾಲ ಆರಂಭವಾದ ತಕ್ಷಣ ಸಸಿ ನೆಡುವ ಕಾಮಗಾರಿಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಹಾಗೂ ಸಸಿಗಳ ಸಂರಕ್ಷಣೆಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರಾದೇಶಿಕ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಸುಮಾರು ೧,೫೦೦ ಹೆಕ್ಟೇರ್ ಅರಣ್ಯ ಪ್ರದೇಶವಿದ್ದು, ಇದರಲ್ಲಿ ಟ್ರೀ ಕವರ್ ಹಾಗೂ ಕ್ಯಾನೋಪಿಂಗ್ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಭೂಸನೂರ, ಕಡಗಂಚಿ ಹಾಗೂ ಗೋಳಾ ಅರಣ್ಯ ಪ್ರದೇಶಗಳಲ್ಲಿ ಈಗಾಗಲೇ ಗುಂಡಿ ತೋಡುವ ಕಾಮಗಾರಿ ಪೂರ್ಣಗೊಂಡಿದ್ದು, ಬೇವು, ಹೊಂಗೆ, ತಪ್ಸೆ, ನೀಲ್, ನೆರಳೆ, ಮಹಾಗನಿ ಸೇರಿದಂತೆ ವಿವಿಧ ಜಾತಿಯ ಸುಮಾರು ೧೨ ಸಾವಿರ ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ ಎಂದು ಅಧಿಕಾರಿಗಳು ಹೇಳಿಕೊಂಡಿದ್ದಾರೆ.
ಇದೇ ವೇಳೆ ಮಾದನಹಿಪ್ಪರಗಾ ವಲಯದಲ್ಲಿ ಪ್ರಮುಖ ರಸ್ತೆ ಮಾರ್ಗಗಳು ಹಾಗೂ ಮುನ್ನೊಹಳ್ಳಿ ರಸ್ತೆ ಬದಿಗಳಲ್ಲಿ ನೆಡುತೋಪ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಕಳೆದ ಸಾಲಿನಲ್ಲಿ ವಾಗ್ದರಿ–ರಿಬ್ಬನಪಲ್ಲಿ–ಕಲಬುರಗಿ–ಆಳಂದ ಮಾರ್ಗದ ದ್ವಿಪಥ ಹೆದ್ದಾರಿ ಬದಿಯಲ್ಲಿ ನೆಟ್ಟ ಗಿಡಮರಗಳು ಇಲಾಖೆಯ ಸಮರ್ಪಕ ನಿರ್ವಹಣೆಯಿಂದ ಉತ್ತಮವಾಗಿ ಬೆಳೆಯುತ್ತಿರುವುದು ಗಮನಾರ್ಹವಾಗಿದೆ.
ಆದರೆ ವರ್ಷ ಕಳೆದಂತೆ ಅರಣ್ಯ ಅಭಿವೃದ್ಧಿಗೆ ಅಗತ್ಯ ಜಾಗದ ಕೊರತೆ, ಸರ್ಕಾರದ ಅನುದಾನದ ಅಭಾವ ಹಾಗೂ ಸಸಿ ಉತ್ಪಾದನೆ ಕುಗ್ಗುತ್ತಿರುವುದು ಇಲಾಖೆಗೆ ಸವಾಲಾಗಿ ಪರಿಣಮಿಸಿದೆ. ಕಳೆದ ಸಾಲಿನಲ್ಲಿ ಸುಮಾರು ೬೦ ಸಾವಿರ ಸಸಿಗಳನ್ನು ಉತ್ಪಾದಿಸಲಾಗಿದ್ದರೆ, ಈ ಬಾರಿ ೫೨ ಸಾವಿರ ಸಸಿಗಳ ಉತ್ಪಾದನೆ ಮಾತ್ರ ಸಾಧ್ಯವಾಗಿದೆ. ಆದರೂ ಹಸಿರು ವಿಸ್ತರಣೆ ಕಾರ್ಯ ನಿರಂತರವಾಗಿ ಮುಂದುವರಿಸುವ ಸಂಕಲ್ಪದೊAದಿಗೆ ಇಲಾಖೆ ಸಜ್ಜಾಗಿದೆ.
ರೈತರ ಅರಣ್ಯ ಕೃಷಿಗೆ ಉತ್ತೇಜನ ನೀಡುವ ಉದ್ದೇಶದಿಂದ ಮಹಾಗನಿ, ಸೀತಾಫಲ, ಸಾಗವಾನಿ, ಖಾಜು, ಬೀದಿರು, ಹೆಬ್ಬೇವು ಸೇರಿದಂತೆ ಹಲವು ಜಾತಿಯ ಸುಮಾರು ೩೦ ಸಾವಿರ ಸಸಿಗಳನ್ನು ರಿಯಾಯಿತಿ ದರದಲ್ಲಿ ವಿತರಿಸಲು ಸಿದ್ಧತೆ ಮಾಡಲಾಗಿದೆ. ಕೇವಲ ೩ ರಿಂದ ೬ ರೂಪಾಯಿ ದರದಲ್ಲಿ ರೈತರಿಗೆ ಸಸಿಗಳನ್ನು ನೀಡಲಾಗುತ್ತಿದ್ದು, ರೈತರು ಇದರ ಸದ್ಬಳಕೆ ಮಾಡಿಕೊಂಡು ತಮ್ಮ ಹೊಲಗಳಲ್ಲಿ ಅರಣ್ಯ ಕೃಷಿ ಕೈಗೊಳ್ಳಬೇಕೆಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
ಕಡಗಂಚಿ ಹಾಗೂ ಕೊರಳ್ಳಿ ನರ್ಸರಿಗಳಲ್ಲಿ ಮುಂಗಾರು ಹಂಗಾಮಿಗಾಗಿ ಸಸಿ ಉತ್ಪಾದನೆ ಭರದಿಂದ ಸಾಗಿದ್ದು, ಈಗಾಗಲೇ ಸಾವಿರಾರು ಸಸಿಗಳು ಬೆಳೆದು ವಿತರಣೆಗೆ ಸಿದ್ಧವಾಗಿವೆ ಎಂದು ಪ್ರಾದೇಶಿಕ ವಲಯದ ಆರ್‌ಎಫ್‌ಒ ಶಾಂತರೆಡ್ಡಿ ತಿಳಿಸಿದ್ದಾರೆ.
ಇನ್ನೊಂದೆಡೆ ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ ಶಾಲೆಗಳು, ಕಾಲೇಜುಗಳು, ಸಂಘ-ಸAಸ್ಥೆಗಳು, ರಸ್ತೆ ಬದಿಗಳು ಹಾಗೂ ಸರ್ಕಾರಿ ಜಮೀನುಗಳಲ್ಲಿ ನೆಡುತೋಪ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸಲಾಗಿದೆ. ಬಬಲೇಶ್ವರ ಹಾಗೂ ಕೊರಳ್ಳಿ ಸಂರಕ್ಷಣಾ ಕೇಂದ್ರಗಳಲ್ಲಿ ಸುಮಾರು ೨೩ ಸಾವಿರ ಸಸಿಗಳನ್ನು ಉತ್ಪಾದಿಸಲಾಗಿದ್ದು, ೪೧ ಕಿಲೋಮೀಟರ್ ವ್ಯಾಪ್ತಿಯಲ್ಲಿ ಹಸಿರು ಅಭಿವೃದ್ಧಿ ಗುರಿ ಹೊಂದಲಾಗಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಹೆಚ್ಚುವರಿಯಾಗಿ ೯ ಕಿ.ಮೀ. ವ್ಯಾಪ್ತಿಯಲ್ಲಿ ಕಾಮಗಾರಿ ಕೈಗೊಳ್ಳುವ ಪ್ರಸ್ತಾವನೆ ಇದ್ದು, ಕ್ರಿಯಾ ಯೋಜನೆ ಅಂತಿಮ ಹಂತದಲ್ಲಿದೆ.
ಸಾಮಾಜಿಕ ಅರಣ್ಯ ಇಲಾಖೆಯ ವತಿಯಿಂದಲೂ ಸುಮಾರು ೭ ಸಾವಿರ ಸಸಿಗಳನ್ನು ಕೇವಲ ೬ ರೂಪಾಯಿ ದರದಲ್ಲಿ ರೈತರಿಗೆ ನೀಡಲು ಸಿದ್ಧತೆ ಮಾಡಲಾಗಿದೆ. ಪರಿಸರ ಸಂರಕ್ಷಣೆ ಮತ್ತು ಭವಿಷ್ಯದ ಹಸಿರು ವಾತಾವರಣಕ್ಕಾಗಿ ರೈತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಸಿ ನೆಡುವ ಕಾರ್ಯದಲ್ಲ್ಲಿ ಭಾಗವಹಿಸಬೇಕು ಎಂದು ಸಾಮಾಜಿಕ ಅರಣ್ಯ ವಲಯಾಧಿಕಾರಿ ವೀರೇಂದ್ರ ಸಿ.ವೈ ಮನವಿ ಮಾಡಿದ್ದಾರೆ.

Comments are closed.

Don`t copy text!