Shubhashaya News

ನಿಂಬರಗಾದಲ್ಲಿ ಕಾರ್ಮಿಕ ಸೇವಾ ಕೇಂದ್ರ ಉದ್ಘಾಟನೆ

“ಕಾರ್ಮಿಕರ ಹಕ್ಕುಗಳ ರಕ್ಷಣೆಗೆ ಸಂಘಟನೆಗಳು ಬಲವಾಗಬೇಕು”

ಆಳಂದ: ಕಟ್ಟಡ ಮತ್ತು ಕಾರ್ಮಿಕ ಕಲ್ಲುಕ್ವಾರಿ ಕಾರ್ಮಿಕ ಸೇವಾ ಸಂಘವದ ಆಶ್ರಯದಲ್ಲಿ ನಿಂಬರಗಾ ಕಾರ್ಮಿಕ ಸಂಘಟನೆಯ ಸೇವಾ ಕೇಂದ್ರವನ್ನು ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ಶರಣಪ್ಪ ಆರ್. ಹಳಿಮನಿ ಉದ್ಘಾಟಿಸಿದರು. ಪ್ರಭುದೇವ ಯಳಸಂಗಿ, ಭೀಮಾಶಂಕರ ಮಾಡಿಯಾಳ, ಯಲ್ಲಪ್ಪ ಎಸ್. ಕಟ್ಟಿಮನಿ ಇತರರು ಇದ್ದರು.

ಆಳಂದ: ಕಾರ್ಮಿಕರ ಸಾಮಾಜಿಕ ಭದ್ರತೆ, ಆರೋಗ್ಯ, ಶಿಕ್ಷಣ ಹಾಗೂ ಹಕ್ಕುಗಳ ರಕ್ಷಣೆಗೆ ಹಾಗೂ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಕಾರ್ಮಿಕ ಸಂಘಟನೆಗಳು ಇನ್ನಷ್ಟು ಬಲಿಷ್ಠವಾಗಬೇಕು ಎಂದು ಕಾರ್ಮಿಕ ಇಲಾಖೆ ಜಿಲ್ಲಾಧಿಕಾರಿ ಶರಣಪ್ಪ ಆರ್. ಹಳಿಮನಿ ಹೇಳಿದರು.
ತಾಲೂಕಿನ ನಿಂಬರಗಾದಲ್ಲಿ ನಿಂಬರಗಾ ವಲಯ ಕಟ್ಟಡ ಮತ್ತು ಕಲ್ಲು ಕ್ವಾರಿ ಕಾರ್ಮಿಕ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ “ನಿಂಬರಗಾ ಕಾರ್ಮಿಕ ಸಂಘಟನೆ ಸೇವಾ ಕೇಂದ್ರ” ಉದ್ಘಾಟನೆ ಹಾಗೂ ೧೪೦ನೇ ವಿಶ್ವ ಕಾರ್ಮಿಕ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಅಭಿವೃದ್ಧಿಯಲ್ಲಿ ಕಾರ್ಮಿಕರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಕಟ್ಟಡ ಮತ್ತು ಕಲ್ಲು ಕ್ವಾರಿ ಕಾರ್ಮಿಕರು ಕಠಿಣ ಪರಿಸ್ಥಿತಿಯಲ್ಲಿಯೂ ದುಡಿಯುತ್ತಾ ಸಮಾಜದ ನಿರ್ಮಾಣದಲ್ಲಿ ಪ್ರಮುಖ ಕೊಡುಗೆ ನೀಡುತ್ತಿದ್ದಾರೆ. ಸರ್ಕಾರದ ವಿವಿಧ ಕಾರ್ಮಿಕ ಕಲ್ಯಾಣ ಯೋಜನೆಗಳನ್ನು ಪ್ರತಿಯೊಬ್ಬ ಕಾರ್ಮಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಿರಿಯ ಕಾರ್ಮಿಕ ನಿರೀಕ್ಷಕ ರವಿಂದ್ರಕುಮಾರ್ ಎನ್. ಬೆಳ್ಳೂರ ಮಾತನಾಡಿ, ಅಸಂಘಟಿತ ಕಾರ್ಮಿಕರು ಸರ್ಕಾರದ ಸೌಲಭ್ಯಗಳ ಕುರಿತು ಹೆಚ್ಚಿನ ಅರಿವು ಹೊಂದಬೇಕಾಗಿದೆ. ಕಾರ್ಮಿಕ ಇಲಾಖೆ ಮೂಲಕ ದೊರೆಯುವ ಆರೋಗ್ಯ, ಶಿಕ್ಷಣ, ವಿಮೆ ಹಾಗೂ ನಿವೃತ್ತಿ ಸೌಲಭ್ಯಗಳ ಬಗ್ಗೆ ಜಾಗೃತಿ ಅಗತ್ಯವಿದೆ. ಅರ್ಹರ ಅರ್ಜಿ ಸಲ್ಲಿಸಿ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಪ್ರಭುದೇವ ಯಳಸಂಗಿ ಮಾತನಾಡಿ, ಕಾರ್ಮಿಕ ವರ್ಗದ ಏಕತೆ ದೇಶದ ಪ್ರಗತಿಗೆ ಮೂಲಶಕ್ತಿ. ಕಾರ್ಮಿಕರ ಶ್ರಮಕ್ಕೆ ಸಮರ್ಪಕ ಗೌರವ ಮತ್ತು ನ್ಯಾಯಯುತ ವೇತನ ದೊರಕುವಂತಾಗಬೇಕು. ದುಡಿಯುವ ವರ್ಗದ ಹಿತಾಸಕ್ತಿಗಾಗಿ ಸಂಘಟನೆಗಳು ನಿರಂತರ ಹೋರಾಟ ನಡೆಸುತ್ತಿವೆ ಎಂದು ಹೇಳಿದರು.
ಎಐಕೆಎಸ್ ರಾಜ್ಯ ಕಾರ್ಯಾಧ್ಯಕ್ಷ ಮೌಲಾ ಮುಲ್ಲಾ ಮಾತನಾಡಿ, ಗ್ರಾಮೀಣ ಭಾಗದ ಕಾರ್ಮಿಕರು ಇನ್ನೂ ಅನೇಕ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಕಾರ್ಮಿಕರ ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಸಾಮಾಜಿಕ ಭದ್ರತೆ ಕಲ್ಪಿಸುವುದು ಸಮಾಜದ ಹಾಗೂ ಕಾರ್ಮಿಕ ಇಲಾಖೆಯ ಜವಾಬ್ದಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಕಿಸಾನಸಭಾ ಜಿಲ್ಲಾಧ್ಯಕ್ಷ ಭೀಮಾಶಂಕರ ಮಾಡಿಯಾಳ ಮಾತನಾಡಿ, ಕಾರ್ಮಿಕರು ಸಂಘಟಿತರಾಗಿ ಇಲಾಖೆಯ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಯಲ್ಲಪ್ಪ ಎಸ್. ಕಟ್ಟಿಮನಿ ಮಾತನಾಡಿ, ನಿಂಬರಗಾ ಪ್ರದೇಶದ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೇಶದಿಂದ ಸೇವಾ ಕೇಂದ್ರ ಆರಂಭಿಸಲಾಗಿದೆ. ಕಾರ್ಮಿಕರ ಹಕ್ಕುಗಳಿಗಾಗಿ ಸಂಘವು ಸದಾ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮೃತ ಕಾರ್ಮಿಕರ ಕುಟುಂಬಗಳಿಗೆ ಸರ್ಕಾರದ ಪರಿಹಾರ ಧನ ವಿತರಿಸಲಾಯಿತು. ಜೊತೆಗೆ ಕಾರ್ಮಿಕರ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಇದರಿಂದ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ಬಂದಿತು.
ಕಾರ್ಮಿಕ ಇಲಾಖೆ ಡಿಒ ಲಕ್ಷ್ಮೀಕಾಂತ ರಂಜೇರಿ, ಸಂತೋಷ ಕುಲಕರ್ಣಿ, ರೇಖಾ ರಂಗನ, ಶಿವಪ್ಪ ಸನ್ಯಾಸಿ, ದೇಸು ಚವ್ಹಾಣ, ಸಿದ್ಧು ಗಾಣಗಾಪೂರ, ಗ್ರಾಪಂ ಮಾಜಿ ಅಧ್ಯಕ್ಷ ಸಾತಣ್ಣಾ ಮಂಟಕಿ, ದಿಲೀಪ ಕುಡಕಿ ಪಾಟೀಲ, ಗ್ರಾಮದ ರವಿ ದೊಡ್ಡಮನಿ, ಶರಣಪ್ಪ ಕಟ್ಟಿಮನಿ, ಧರ್ಮರಾಯ ಕಟ್ಟಿಮನಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಜಗನಾಥ ಎಂ. ಗುಂಡಗುರತಿ ನಿರೂಪಿಸಿದರು. ಸೌಂದರ್ಯ ಆರ್. ಜವಳಿ ಸ್ವಾಗತಿಸಿದರು. ಮಂಜುಳಾಬಾಯಿ ಅಫಜಲಪೂರ ವಂದಿಸಿದರು.

Comments are closed.

Don`t copy text!