Shubhashaya News

ಮನೆಗೆ ನುಗ್ಗಿದ ಪೊಲೀಸರ ವಿರುದ್ಧ ವಕೀಲರ ಆಕ್ರೋಶ

ಏಕಾಂಗಿ ಮಹಿಳೆ ಇದ್ದಾಗ ತಪಾಸಣೆ: ಕಾನೂನು ಉಲ್ಲಂಘನೆ ಆರೋಪ, ಅಮಾನತು ಬೇಡಿಕೆ

ಆಳಂದ: ಮಾದನಹಿಪ್ಪರಗಾ ಪೊಲೀಸ್ ಠಾಣೆ ವ್ಯಾಪ್ತಿಯ ಕಿಣ್ಣಿ ಅಬ್ಬಾಸ್‌ನ ತಮ್ಮ ಮನೆಗೆ ವಕೀಲರು ಗೈರಾಗಿದ್ದ ವೇಳೆ ವ್ಯಾಪ್ತಿಯ ಠಾಣೆಯ ಪೊಲೀಸರು ನುಗ್ಗಿ, ಮನೆಯಲ್ಲಿದ್ದ ಏಕಾಂಗಿ ಮಹಿಳೆಗೆ ಆತಂಕ ಉಂಟುಮಾಡಿದ ಘಟನೆಗೆ ಆಕ್ರೋಶ ಹೊರಹಾಕಿದ ವಕೀಲ ಪಂಡಿತ ಸಲಗರ ಅವರು ತಪ್ಪಿತಸ್ಥ ಪೊಲೀಸರ ಅಮಾನು ಕೈಗೊಂಡು ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಕುರಿತು ರಾಜ್ಯದ ಗೃಹ ಸಚಿವರಿಗೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ, ಜಿಲ್ಲಾಧಿಕಾರಿ ಸೇರಿದಂತೆ ಸಂಬAಧಿತರಿಗೆ ರವಾನಿಸಿದ ದೂರಿನಲ್ಲಿ ಆರೋಪಿಸಿದ್ದಾರೆ.
ಮಹಿಳಾ ಸಿಬ್ಬಂದಿಯಿಲ್ಲದೆ ಪುರುಷ ಪೊಲೀಸರು ತಪಾಸಣೆ ನಡೆಸಿರುವುದನ್ನು ಪ್ರಶ್ನಿಸಿ, ವಕೀಲ ಪಂಡಿತ ಸಲಗರ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆಯ ವಿವರಗಳ ಪ್ರಕಾರ, ಯಾವುದೇ ನ್ಯಾಯಾಲಯದ ಆದೇಶವಿಲ್ಲದೆ ಅಥವಾ ಕಾನೂನುಬಾಹಿರ ವಸ್ತುಗಳ ಜಪ್ತಿ ನಡೆದಿಲ್ಲದಿದ್ದರೂ, ಮುನ್ಸೂಚನೆ ನೀಡದೆ ಪೊಲೀಸರು ಮನೆಗೆ ಪ್ರವೇಶಿಸಿ ನಾಲ್ಕು ಬಾರಿ ತಪಾಸಣೆ ನಡೆಸಿದ್ದಾರೆ. ಈ ವೇಳೆ ಪೊಲೀಸರ ವರ್ತನೆ ಗೂಂಡಾಗಳAತೆ ಇದ್ದು, ಏಕಾಂಗಿ ಮಹಿಳೆ ಮನೆಯಲ್ಲಿದ್ದ ಸಂದರ್ಭದಲ್ಲೇ ಭಯ ಹುಟ್ಟಿಸುವ ರೀತಿಯಲ್ಲಿ ನಡೆದುಕೊಂಡಿದ್ದಾರೆ ಎಂದು ವಕೀಲ ಪಂಡಿತ ಸಲಗರ ಅವರು ಪೊಲೀಸರು ಮನೆಯ ತಪಾಸಣೆ ವೇಳೆ ಸ್ಥಳಕ್ಕೆ ಬಂದ ವಕೀಲ ಪಂಡಿತ ಸಲಗರ ಅವರು, ಪೊಲೀಸರ ಕ್ರಮವನ್ನು ಪ್ರಶ್ನಿಸಿದಾಗ, “ನೋಡಿಕೊಳ್ಳುತ್ತೇವೆ, ರೌಡಿಶೀಟ್ ಓಪನ್ ಮಾಡುತ್ತೇವೆ” ಎಂದು ಜೀವ ಬೆದರಿಕೆ ಹಾಕಲಾಗಿದೆ. ಈ ಸಂಬAಧವಾಗಿ ಮಾದನಹಿಪ್ಪರಗಾ ಪೊಲೀಸ್ ಠಾಣೆಯ ಸಿಬ್ಬಂದಿ ಮತ್ತು ಪಿ.ಎಸ್.ಐ ವಿರುದ್ಧ ರಾಜ್ಯದ ಗೃಹ ಸಚಿವರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದ್ದು, ತಪ್ಪಿತಸ್ಥರನ್ನು ತಕ್ಷಣ ಅಮಾನತು ಮಾಡಿ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ.
ವಕೀಲರು ನೀಡಿದ ದೂರಿನಲ್ಲಿ, ಏಪ್ರಿಲ್ ೨೦, ೨೦೨೬ರಂದು ಕಿಣ್ಣಿ ಅಬ್ಬಾಸ್ ಅವರ ಮನೆಗೆ ಅಕ್ರಮವಾಗಿ ನುಗ್ಗಿ ತಪಾಸಣೆ ನಡೆಸಿ, ಅಂಗಡಿಯ ಸಾಮಾನುಗಳನ್ನು ಚಲ್ಲಾಪಿಲ್ಲಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಕಳೆದ ಒಂದು ತಿಂಗಳಲ್ಲೇ ನಾಲ್ಕು ಬಾರಿ ಮನೆಗೆ ತಪಾಸಣೆ ನಡೆಸಿದ್ದು, ಪ್ರತೀ ಬಾರಿ ಮನೆಯಲ್ಲಿ ಮಹಿಳೆಯರು ಮಾತ್ರ ಇದ್ದ ಸಂದರ್ಭದಲ್ಲೇ ಪೊಲೀಸರು ಬಂದಿದ್ದಾರೆ ಎಂದು ಅವರು ಹೇಳಿದ್ದಾರೆ.
ಭಾರತೀಯ ಕಾನೂನುಗಳ ಪ್ರಕಾರ, ಏಕಾಂಗಿ ಮಹಿಳೆ ಇದ್ದ ಮನೆಗೆ ತಪಾಸಣೆ ನಡೆಸುವಾಗ ಮಹಿಳಾ ಸಿಬ್ಬಂದಿಯ ಹಾಜರಾತಿ ಅಗತ್ಯವಾಗಿದ್ದು, ಈ ನಿಯಮವನ್ನು ಉಲ್ಲಂಘಿಸಲಾಗಿದೆ ಎಂದು ವಕೀಲರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದೇ ವೇಳೆ, ಮಾದನಹಿಪ್ಪರಗಾ ಪೊಲೀಸ್ ಠಾಣೆಯ ವ್ಯಾಪ್ತಿಯ ೨೨ ಗ್ರಾಮಗಳಲ್ಲಿ ಅಕ್ರಮ ಸಾರಾಯಿ ಮಾರಾಟ ಹಾಗೂ ಮಟಕಾ ಅಡ್ಡೆಗಳು ನಿರಂತರವಾಗಿ ನಡೆಯುತ್ತಿದ್ದು, ಇದಕ್ಕೆ ಪೊಲೀಸ್ ಇಲಾಖೆ ಪರೋಕ್ಷ ಹೊಣೆಗಾರಿಕೆ ಹೊಂದಿದೆ. ತಪ್ಪಿತಸ್ಥರ ಮೇಲೆ ಯಾವುದೇ ಕ್ರಮ ಜರುಗಿಸದೇ ಹೋದಲ್ಲಿ ನ್ಯಾಯಾಲಯ ಮೋರೆ ಹೋಗಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಈ ಪ್ರಕರಣ ಇದೀಗ ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಪೊಲೀಸ್ ಇಲಾಖೆಯ ಕ್ರಮಗಳ ಬಗ್ಗೆ ಪ್ರಶ್ನೆಗಳು ಉದ್ಭವಿಸುತ್ತಿವೆ.

Comments are closed.

Don`t copy text!