Shubhashaya News

ರಾಯಚೂರಲ್ಲಿ ಭೀಕರ ಅಪಘಾತ : ಬೈಕ್ ಗೆ ಟಿಪ್ಪರ್ ಡಿಕ್ಕಿಯಾಗಿ ಇಬ್ಬರು ಸಾವು, ಯುವತಿಯ ಕಾಲು ಕಟ್!

ರಾಜ್ಯದಲ್ಲಿ ಮತ್ತೊಂದು ಭೀಕರವಾದ ಅಪಘಾತ ಸಂಭವಿಸಿದ್ದು ಜಾತ್ರೆಗೆ ತೆರಳಿದವರು ಇದೀಗ ಮಸಣಕ್ಕೆ ತೆರಳಿದ್ದಾರೆ. ಹೌದು ಜಾತ್ರೆಗೆ ತೆರಳಿದವರು ಅಪಘಾತಕ್ಕೆ ಬಲಿಯಾದಂತಹ ದಾರುಣ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ಅತ್ತನೂರು ದಿಡ್ಡಿ ಬಸವೇಶ್ವರ ಜಾತ್ರೆ ನೋಡುವುದಕ್ಕೆಂದು ಬಂದು ವಾಪಸ್ ಹೋಗುವ ವೇಳೆ ನಾಲ್ವರು ಪ್ರಯಾಣಿಸುತ್ತಿದ್ದ ಬೈಕ್‌ಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿ ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಅಪಘಾತದಲ್ಲಿ ಮೃತಪಟ್ಟವರು ಹಾಗೂ ಗಾಯಾಳುಗಳು ನಿನ್ನೆ ಸಂಜೆ ಅತ್ತನೂರು ದಿಡ್ಡಿ ಬಸವೇಶ್ವರ ಜಾತ್ರೆಗೆ ಬಂದಿದ್ದರು. ಬಳಿಕ ರಾತ್ರಿ ಶಾಖಾಪುರಕ್ಕೆ ಒಂದೇ ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ಮಾರ್ಗಮಧ್ಯೆ ಇವರು ಸಾಗುತ್ತಿದ್ದ ಬೈಕ್‌ಗೆ ಟಿಪ್ಪರ್ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ. ಬಸವೇಶ್ವರ ಜಾತ್ರೆಯ ರಥೋತ್ಸವ ಮುಗಿಸಿ ವಾಪಸ್ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ಟಿಪ್ಪರ್ ಡಿಕ್ಕಿ ಹೊಡೆದ ರಭಸಕ್ಕೆ ಮೃತರ ದೇಹ ನಜ್ಜುಗುಜ್ಜಾಗಿದ್ದು, ದೇಹದ ಭಾಗಗಳು ಛಿದ್ರ ಛಿದ್ರವಾಗಿವೆ.

ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ. ಶಾಖಾಪುರ ಮುಖ್ಯರಸ್ತೆಯಲ್ಲಿ ಈ ದುರಂತ ನಡೆದಿದೆ. ಮೃತರನ್ನು ಬೈಕ್ ಓಡಿಸುತ್ತಿದ್ದ 37 ವರ್ಷದ ಅಂಜಿನಯ್ಯ ನಾಯಕ ಹಾಗೂ 10 ವರ್ಷದ ಬಾಲಕಿ ಅರ್ಚನಾ ಎಂದು ಗುರುತಿಸಲಾಗಿದೆ.
ಗಾಯಾಳುಗಳಲ್ಲಿ 19 ಶ್ವೇತಾ ಅವರ ಕಾಲು ಕಟ್ ಆಗಿದೆ ಹಾಗೂ 22 ವರ್ಷದ ಲಕ್ಷ್ಮಿ ಎಂಬುವವರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳಿಬ್ಬರನ್ನು ರಾಯಚೂರು ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಘಟನೆಗೆ ಸಂಬಂಧಿಸಿದಂತೆ ಸಿರವಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.