Shubhashaya News

ನ್ಯಾಯಾಲಯದಲ್ಲಿ ವಿಶ್ವ ಏಡ್ಸ್ ದಿನಾಚರಣೆ

ಏಡ್ಸ್‍ಗೆ ಭಯ ಬೇಡ, ಚಿಕಿತ್ಸೆ-ಗೌಪ್ಯತೆ ಖಾತರಿ: ನ್ಯಾಯಾಧೀಶೆ ಚಿತ್ತರಗಿ

ಆಳಂದ: ಪಟ್ಟಣದ ನ್ಯಾಯಾಲಯದಲ್ಲಿ ಹಮ್ಮಿಕೊಂಡ ವಿಶ್ವ ಏಡ್ಸ್ ತಡೆ ದಿನಾಚರಣೆ ಕಾರ್ಯಕ್ರಮ ನ್ಯಾಯಾಧೀಶೆ ಕುಮಾರಿ ಸುಮನ್ ಚಿತ್ತರಗಿ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಕಮಲ ರಾಠೋಡ, ಡಾ. ಸುಶೀಲಕುಮಾರ್ ಅಂಬೂರೆ, ಡಾ. ಉಮಾಕಾಂತ ರಾಜಗಿರಿ, ಇಸ್ಮಾಯಿಲ್ ಪಟೇಲ್, ಸಿದ್ಧಣ್ಣ ವಾಲಿ ಇದ್ದರು.

ಆಳಂದ: ವಿಶ್ವ ಏಡ್ಸ್ ನಿರ್ಮೂಲನೆ ಜಾಗೃತಿ ದಿನಾಚರಣೆಯ ಅಂಗವಾಗಿ ಪಟ್ಟಣದ ನ್ಯಾಯಾಲಯದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಆರೋಗ್ಯ ಇಲಾಖೆ ಆಶ್ರಯದಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮ ನಡೆಯಿತು.
ಪ್ರಧಾನ ಸಿವಿಲ್ ನ್ಯಾಯಾಧೀಶೆ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶೆ ಕು. ಸುಮನ್ ಚಿತ್ತರಗಿ ಅವರು ಉದ್ಘಾಟಿಸಿ ಮಾತನಾಡಿ,
“ಕೆಲವು ವರ್ಷಗಳ ಹಿಂದೆ ಏಡ್ಸ್ ಕಂಡರೆ ಸಾವೇ ಸಮೀಪಿಸಿತು ಎಂಬ ಭಯವಿತ್ತು. ಆದರೆ ಇಂದು ವೈದ್ಯಕೀಯ ಕ್ಷೇತ್ರದಲ್ಲಿ ಸಾಧಿಸಿರುವ ಪ್ರಗತಿಯಿಂದ ಏಡ್ಸ್ ಸಂಪೂರ್ಣ ನಿಯಂತ್ರಣಕ್ಕೆ ಒಳಪಡುವ ರೋಗವಾಗಿ ಬದಲಾಗಿದೆ. ಸರಕಾರಿ ಆಸ್ಪತ್ರೆಗಳಲ್ಲಿ ಆಪ್ತ ಸಮಾಲೋಚನೆ ಮತ್ತು ಪರೀಕ್ಷಾ ಕೇಂದ್ರಗಳು ಐಸಿಟಿಸಿ ಲಭ್ಯವಿವೆ. ಈ ಸೌಲಭ್ಯಗಳನ್ನು ಜನರು ಧೈರ್ಯವಾಗಿ ಬಳಸಿಕೊಳ್ಳಬೇಕು. ರೋಗಿಗಳ ಮಾಹಿತಿ ಶೇ 100ರಷ್ಟು ಗೌಪ್ಯವಾಗಿರುತ್ತದೆ” ಎಂದು ಭರವಸೆ ನೀಡಿದರು.
ತಾಲೂಕಾ ಆರೋಗ್ಯ ಅಧಿಕಾರಿ ಡಾ. ಸುಶೀಲಕುಮಾರ್ ಅಂಬೂರೆ ಅವರು ಮಾತನಾಡಿ, “ಏಡ್ಸ್ ಅಂದರೆ ಜೀವನ ಮುಗಿಯಿತು ಎಂಬ ತಪ್ಪು ಕಲ್ಪನೆಯಿಂದಾಗಿ ಅನೇಕರು ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ. ಇದೇ ದೊಡ್ಡ ಸಮಸ್ಯೆ. ಆದರೆ ಇಂದು ಏಡ್ಸ್ ರೋಗಿಗಳು ಸಾಮಾನ್ಯವಾಗಿ ದೀರ್ಘಕಾಲ ಬದುಕಬಹುದು ಮತ್ತು ಸಾಮಾನ್ಯ ಜೀವನ ನಡೆಸಬಹುದು. ಸರಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ, ಔಷಧಗಳು ದೊರೆಯುತ್ತವೆ. ಯಾರ ಮಾಹಿತಿಯೂ ಬಹಿರಂಗವಾಗುವುದಿಲ್ಲ. ಆದ್ದರಿಂದ ಭಯ ಬೇಡ, ಧೈರ್ಯವಾಗಿ ಪರೀಕ್ಷೆ ಮಾಡಿಸಿಕೊಳ್ಳಿ” ಎಂದು ಕರೆ ನೀಡಿದರು.
ಅಸುರಕ್ಷತೆ ಲೈಂಗಿಕ್‍ತೆ ವಿಷಯದಲ್ಲಿ ನ್ಯಾಯವಾದಿ ಎಂ.ವಿ. ಏಕಬೋಟೆ ಉಪನ್ಯಾಸ ನೀಡಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ಆಡಳಿತಾಧಿಕಾರಿ ಡಾ.ಉಮಾಕಾಂತ ರಾಜಗಿರಿ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಕಮಲ ರಾಠೋಡ. ಐಸಿಟಿಸಿ ಕೌನ್ಸಲ್‍ರ ಸಿದ್ಧಣ್ಣಾ ವಾಲಿ, ಸರ್ಕಾರಿ ವಕೀಲ ಇಸ್ಲಾಯಿಲ್ ಪಟೇಲ್ ಮತ್ತು ಕಾರ್ಯಕ್ರಮದಲ್ಲಿ ನ್ಯಾಯವಾದಿಗಳು ಕಕ್ಷಿದಾರರು ಸಿಬ್ಬಂದಿಗಳಿದ್ದರು. ನ್ಯಾಯವಾದಿ ಸುಧೀರ ಪಡಶೆಟ್ಟಿ ನಿರೂಪಿಸಿದರು.

Comments are closed.

Don`t copy text!