ಆಳಂದ: ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಮುನ್ನಹಳ್ಳಿ ಗ್ರಾಪಂಗೆ ಸಂದ ಗಾಂಧಿ ಗ್ರಾಮ ಪುರಸ್ಕಾರವನ್ನು ಅಧ್ಯಕ್ಷ ರಾಜಕುಮಾರ್ ಡಿ. ಚಹ್ವಾಣ್‍ರಿಗೆ ಪ್ರದಾನಗೈದರು. ಪಂಚ ಗ್ಯಾರೆಂಟಿ ಅಧ್ಯಕ್ಷ ಶಿವುಪುತ್ರಪ್ಪ ಪಾಟೀಲ ಇತರರು ಇದ್ದರು.
ಆಳಂದ: ತಾಲೂಕಿನ ಮುನ್ನಹಳ್ಳಿ ಗ್ರಾಮ ಪಂಚಾಯಿತಿಗೆ ರಾಜ್ಯ ಮಟ್ಟದ ಅತ್ಯಂತ ಪ್ರತಿಷ್ಠಿತ ‘ಗಾಂಧಿ ಗ್ರಾಮ ಪುರಸ್ಕಾರ’ ಲಭಿಸಿ ಗೌರವಿಸಲ್ಪಟ್ಟಿದೆ.
ಸೋಮವಾರ ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ನಡೆದ ಸಮಾರಂಭದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು ಪುರಸ್ಕಾರವನ್ನು ನೀಡಿ ಗ್ರಾಮ ಪಂಚಾಯಿತಿ ಪ್ರತಿನಿಧಿಗಳನ್ನು ಗೌರವಿಸಿದರು.
ಗ್ರಾಮ ಸ್ವರಾಜ್ಯದ ಕನಸನ್ನು ಸಾಕಾರಗೊಳಿಸಿದ ಮಾದರಿ ಗ್ರಾಮ ಪಂಚಾಯಿತಿಗೆ ನೀಡಲಾಗುವ ಈ ಪುರಸ್ಕಾರವು ಮಿಗಿಲಾದ ಸ್ವಚ್ಛತೆ, ಘನ ತ್ಯಾಜ್ಯ ವ್ಯವಸ್ಥಾಪನೆ, ಪ್ಲಾಸ್ಟಿಕ್‍ಮುಕ್ತ ಗ್ರಾಮ, ತೆರಿಗೆ ಸಂಗ್ರಹದಲ್ಲಿ ಶೇ.100 ಯಶಸ್ವಿ, ಮಕ್ಕಳ ಶಾಲಾ ದಾಖಲಾತಿ ಶೇ.100, ಗ್ರಾಮ ಸಭೆಗಳ ನಿಯಮಿತ ಆಯೋಜನೆ, ಮಹಿಳಾ ಸಬಲೀಕರಣ, ಸ್ವ-ಸಹಾಯ ಸಂಘಗಳ ಸಕ್ರಿಯತೆ ಹಾಗೂ ಒಟ್ಟಾರೆ ಸಮಗ್ರ ಅಭಿವೃದ್ಧಿಯಲ್ಲಿ ಮುನ್ನಹಳ್ಳಿ ಗ್ರಾಮ ಪಂಚಾಯಿತಿ ಮಾದರಿಯಾದ ಕಾರಣಕ್ಕೆ ಈ ಪ್ರಶಸಿ ನೀಡಿ ಇಂದು ಗೌರವಿಸಲಾಯಿತು.
ಪುರಸ್ಕಾರದ ಹಿಂದಿನ ಮುಖ್ಯ ಕಾರಣಕರ್ತರು:
ಈ ಸಾಧನೆಗೆ ದಿಟ್ಟ ನಾಯಕತ್ವ ನೀಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜಕುಮಾರ್ ಡಿ. ಚಹ್ವಾಣ್, ಪಂಚಾಯತಿ ಅಭಿವೃದ್ಧಿ ಅಧಿಕಾರಿ ನಾಗೇಶ್ ಮೂರ್ತಿ ಮತ್ತು ಗ್ರೇಡ್-1 ಕಾರ್ಯದರ್ಶಿ ಭೀಮರಾವ್ ಕಟ್ಟೆ ಅವರ ಪ್ರಮುಖ ಪಾತ್ರವಿದೆ. ಉಪಾಧ್ಯಕ್ಷರು, ಎಲ್ಲ ಸದಸ್ಯರು ಹಾಗೂ ಪಂಚಾಯತಿ ಸಿಬ್ಬಂದಿ ವರ್ಗದವರ ಸತತ ಶ್ರಮ ಮತ್ತು ಗ್ರಾಮಸ್ಥರ ಸಂಪೂರ್ಣ ಸಹಕಾರವಿಲ್ಲದೆ ಇದು ಸಾಧ್ಯವಾಗುತ್ತಿರಲಿಲ್ಲ ಎಂದು ಅಧ್ಯಕ್ಷ ರಾಜಕುಮಾರ್ ಚಹ್ವಾಣ್ ಹೇಳಿದ್ದಾರೆ.
ಗ್ರಾಮಸ್ಥರಿಗೆ ಕೃತಜ್ಞತೆ ಸಲ್ಲಿಸಿ ಅಭಿನಂದನೆ:
ಬೆಂಗಳೂರಿನಲ್ಲಿ ಪುರಸ್ಕಾರ ದೊರೆಯುತ್ತಿದ್ದಂತೆ ಮುನ್ನಹಳ್ಳಿ ಗ್ರಾಮದಲ್ಲಿ ಸಿಹಿ ಹಂಚಿ ಸಂಭ್ರಮಾಚರಣೆ ನಡೆಯಿತು. ಅಲ್ಲದೆ ಪುರಸ್ಕಾರವನ್ನು ಸಚಿವರಿಂದ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜಕುಮಾರ್ ಡಿ. ಚಹ್ವಾಣ್, ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ಶಿವಪುತ್ರಪ್ಪ ಪಾಟೀಲ್, ನಂದ ಕಿಶೋರ್ ಬುಜರ್ಕೆ, ಪಿಕೆಪಿಎಸ್ ಉಪಾಧ್ಯಕ್ಷ ಮಹಾಂತಪ್ಪ ಬಿರಾದಾರ್, ಸಿದ್ದು ವೇದಶಟ್ಟಿ ಸೇರಿದಂತೆ ಗ್ರಾಮದ ಹಿರಿಯ-ಕಿರಿಯರೆಲ್ಲರೂ ಈ ಸಾಧನೆಯನ್ನು ತಮ್ಮದೇ ಎನ್ನುವಂತೆ ಸ್ವಾಗತಿಸಿ, ಒಬ್ಬರಿಗೊಬ್ಬರು ಅಭಿನಂದಿಸಿಕೊಂಡಿದ್ದಾರೆ.
“ಈ ಪುರಸ್ಕಾರ ಕೇವಲ ಪಂಚಾಯತಿಗಲ್ಲ, ಮುನ್ನಹಳ್ಳಿ ಗ್ರಾಮದ ಪ್ರತಿಯೊಬ್ಬ ನಾಗರಿಕನಿಗೂ ಸಂದಿದೆ. ನಮ್ಮ ಗ್ರಾಮವನ್ನು ಸ್ವಚ್ಛ, ಸುಂದರ ಮತ್ತು ಸಮೃದ್ಧಗೊಳಿಸಲು ಎಲ್ಲರೂ ಒಡನಾಡಿ ನಡೆದಿದ್ದೇ ಈ ಗೌರವಕ್ಕೆ ಕಾರಣ” ಗಾಂಧಿಜಿಯವರ ಗ್ರಾಮ ಸ್ವರಾಜ್ಯದ ಕನಸನ್ನು ಇಂದಿನ ಡಿಜಿಟಲ್ ಯುಗದಲ್ಲೂ ಸಾಕಾರಗೊಳಿಸುತ್ತಿರುವ ಮುನ್ನಹಳ್ಳಿ ಇನ್ನಷ್ಟು ಮಾದರಿಯಾಗಿ ಮುಂದುವರೆಯಲಿ ಎಂಬ ಹಾರೈಕೆ ನಮ್ಮದಾಗಿದೆ ಎಂದು ಗ್ರಾಮಸ್ಥರು ರೈತ ಸಂಘದ ತಾಲೂಕು ಕಾರ್ಯಾಧ್ಯಕ್ಷ ಗ್ರಾಮದ ಸಿದ್ಧು ವೇದಶೆಟ್ಟಿ ಅವರು ಪ್ರತಿಕ್ರಿಯೆಸಿದ್ದಾರೆ.
Comments are closed.