Shubhashaya News

“ಬೆಳೆ ವಿಮೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಕೆಗೆ ರೈತರ ಪರದಾಟ 

ಆಳಂದ: ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಪಟ್ಟಣ ಸೇರಿ ಗ್ರಾಮೀಣ ಪ್ರದೇಶದ ರೈತರು ಬೆಳೆ ಹಾನಿಯಾದ ಕುರಿತು ಪ್ರತ್ಯೇಕ ಅರ್ಜಿ ಅಲ್ಲಿಕೆಗೆ ಮುಂದಾಗಿದ್ದರಿಂದ ಕಚೇರಿಯ ಆವರಣ ಜನಜಂಗುಳಿಯಿಂದ ತುಂಬಿಕೊಂಡಿದೆ.

 

ಆಳಂದ: ಖಜೂರಿ ವಲಯದ ರೈತರ ಸೋಯಾ ಬೆಳೆ ಅತಿಯಾದ ಮಳೆಯಿಂದ ಕಾಯಿ ಕಾಳು ತುಂಬದೆ ಟೊಳ್ಳಾದ ಬಗ್ಗೆ ತೋರಿಸಿದ್ದಾರೆ.

 

 

ಆಳಂದ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆ ವಿಮೆ ಪಾವತಿಸಿದ ರೈತರು ಈಗ ಮಳೆಯಿಂದಾಗಿ ಹಾನಿಗೊಳಗಾದ ಬೆಳೆಗಳಿಗೆ ಪರಿಹಾರ ಪಡೆಯಲು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈ ಹಿಂದೆ ಆನ್‍ಲೈನ್‍ನಲ್ಲಿ ಬೆಳೆ ಹಾನಿಯಾದ ಕುರಿತು ಸುಲಭವಾಗಿ ದೂರು ದಾಖಲಿಸುತ್ತಿದ್ದ ರೈತರು, ಈಗ ವಿಮಾ ಕಂಪನಿಯು ಆನ್‍ಲೈನ್ ವೆಬ್‍ಸೈಟ್ ತೆಗೆದುಹಾಕಿ, ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಲಿಖಿತ ಅರ್ಜಿಯೊಂದಿಗೆ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿರುವುದರಿಂದ ತೀವ್ರ ತೊಂದರೆಗೆ ಒಳಗಾಗಿದ್ದಾರೆ.

ದಾಖಲೆಗಳ ಜೆರಾಕ್ಸ್, ಓಡಾಟ ಮತ್ತು ಕೆಲಸ ಬಿಟ್ಟು ಕಚೇರಿಗಳಿಗೆ ಭೇಟಿ ನೀಡುವುದರಿಂದ ರೈತರ ಸಮಯ ಮತ್ತು ಹಣ ಎರಡೂ ವ್ಯರ್ಥವಾಗುತ್ತಿದೆ. ನಾವು ವಿಮೆ ಕಟ್ಟುವಾಗ ಆನ್‍ಲೈನ್ ಮತ್ತು ಬ್ಯಾಂಕ್‍ಗಳ ಮೂಲಕ ಸ್ಥಳೀಯವಾಗಿಯೇ ಪಾವತಿಸಿದ್ದೇವೆ. ಈಗ ನೋಡಿದರೆ ಹಾನಿಯಾದ ಬಗ್ಗೆ ಆನ್‍ಲೈನ್ ಬದಲು ಲಿಖಿತವಾಗಿ ದೂರದ ಕಂಪನಿಯವರು ತಾವಿದ್ದ ಸ್ಥಳಕ್ಕೆ ಬಂದು  ಅರ್ಜಿ ಕೊಡಿ ಎನ್ನುತ್ತಿದ್ದಾರೆ ಏಕೆ ಎಂದು ರೈತರು ಪ್ರಶ್ನಿಸಿದ್ದಾರೆ.

ತಾಲೂಕಿನಲ್ಲಿ 80,000ಕ್ಕೂ ಹೆಚ್ಚು ರೈತರು ಬೆಳೆ ವಿಮೆಗೆ ನೋಂದಾಯಿಸಿದ್ದರೂ, ವಾರದಿಂದ ಕೇವಲ 7,000 ಅರ್ಜಿಗಳು ಮಾತ್ರ ದಾಖಲಾಗಿವೆ ಎಂದು ಕೃಷಿ ಇಲಾಖೆಯ ಮೂಲಗಳು ತಿಳಿಸಿವೆ.

ವಿಮಾ ಕಂಪನಿಯು ಶೇ.20ರಷ್ಟು ದೂರುಗಳು ಬಂದರೆ ಹಾನಿಯ  ರಾಂಡಮ್ ಆಯ್ಕೆಯ ಮೂಲಕ ಪರಿಹಾರ ವಿತರಿಸಬಹುದಾಗಿದೆ ಎಂದು ಹೇಳಿರುವುದರಿಂದ, ರೈತರಲ್ಲಿ ಗೊಂದಲ ಮತ್ತು ಆತಂಕ ಹೆಚ್ಚಾಗಿದೆ. ಉದ್ದು, ಸೋಯಾ ಮತ್ತು ಹೆಸರು ಬೆಳೆಗಳು ರಾಶಿ ಹಂತದಲ್ಲಿ ಮಳೆಯಿಂದ ನಾಶವಾಗಿದ್ದು, ಮುಂದಿನ ಕೃಷಿ ಚಟುವಟಿಕೆಗೆ ಹಣವಿಲ್ಲದೆ ನಾವು ಸಂಕಷ್ಟದಲ್ಲಿದ್ದೇವೆ ಎಂದು ಪಟ್ಟಣಕ್ಕೆ ಅರ್ಜಿ ಸಲ್ಲಿಸಲು ಬಂದಿದ್ದ ಅನೇಕ ರೈತರು ಅಳಲು ತೋಡಿಕೊಂಡಿದ್ದಾರೆ.

ರೈತರು ಆನ್‍ಲೈನ್ ದೂರು ಸೌಲಭ್ಯವನ್ನು ಕೂಡಲೇ ಮರುಸ್ಥಾಪಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಇದರಿಂದ ಗ್ರಾಮೀಣ ಆನ್‍ಲೈನ್ ಕೇಂದ್ರಗಳ ಮೂಲಕವೇ ದೂರು ದಾಖಲಿಸಲು ಅನುಕೂಲವಾಗುತ್ತದೆ. ತಾಲೂಕು ಕಚೇರಿಗೆ ಭೇಟಿ ನೀಡುವುದು ಆರ್ಥಿಕ ಹೊರೆಯ ಜೊತೆಗೆ ಸಮಯದ ಅಪವ್ಯಯಕ್ಕೆ ಕಾರಣವಾಗುತ್ತಿದೆ. ಕೂಡಲೇ ವಿಮಾ ಕಂಪನಿಯು ರೈತರಿಗೆ ಅನುಕೂಲವಾಗುವಂತೆ ಆನ್‍ಲೈನ್ ಸೌಲಭ್ಯವನ್ನು ಒದಗಿಸಬೇಕೆಂದು ರೈತ ಸಂಘಟನೆಗಳು ಹಾಗೂ ರೈತ ಮುಖಂಡರುಗಳು ಆಗ್ರಹಿಸಿದ್ದಾರೆ.

77985 ರೈತರಿಂದ ವಿಮೆ ಪಾವತಿ:

ಮುಂಗಾರು ಹಂಗಾಮಿನಲ್ಲಿ ಆಳಂದ ತಾಲೂಕಿನ ರೈತರು ಹಲವು ಬೆಳೆಗಳಿಗೆ ಬೆಳೆ ವಿಮೆ ಯೋಜನೆಯಡಿ ಭರ್ತಿ ಮಾಡಿಕೊಂಡಿರುವ ವಿವರಗಳು ಲಭ್ಯವಾಗಿವೆ. ತಾಲೂಕಿನಲ್ಲಿ ಒಟ್ಟು 77,985 ರೈತರು ವಿಮೆಗೆ ನೋಂದಾಯಿಸಿಕೊಂಡಿದ್ದು, ಒಟ್ಟು ರೂಪಾಯಿ 89,009.88 ಲಕ್ಷ ಮೌಲ್ಯದ ಬೆಳೆ ವಿಮೆ ಮಾಡಲಾಗಿದೆ. ಪ್ರೀಮಿಯಂ ಮೊತ್ತ 2,320.87 ಲಕ್ಷ ಆಗಿದ್ದು, ವಿಮೆಗೆ ಒಳಪಟ್ಟ ಬೆಳೆಗಳ ಅಂದಾಜು ಮೌಲ್ಯ 42,436.50 ಲಕ್ಷ ಆಗಿದೆ.

ಬೆಳೆಗಳಾದ ಉದ್ದು 3,144 ರೈತರು, ರೂಪಾಯಿ 1,851.37 ಲಕ್ಷ ವಿಮೆ, 40.38 ಲಕ್ಷ ಪ್ರೀಮಿಯಂ, ಹತ್ತಿ 61 ರೈತರು, ರೂಪಾಯಿ 41.51 ಲಕ್ಷ ವಿಮೆ, ಹೆಸರು ಬೆಳೆ– 680 ರೈತರು, ರೂಪಾಯಿ 363.76 ಲಕ್ಷ ವಿಮೆ, ಮೆಕ್ಕೆ  ಜೋಳ 18 ರೈತರು, ರೂಪಾಯಿ 12.82 ಲಕ್ಷ ವಿಮೆ, ಈರುಳ್ಳಿ 749 ರೈತರು, 368.52 ಲಕ್ಷ ವಿಮೆ, ಸಜ್ಜೆ 8 ರೈತರು, 4.44 ಲಕ್ಷ ವಿಮೆ,  ತೊಗರಿ– 71,736 ರೈತರು, 82,502.91 ಲಕ್ಷ ರೂಪಾಯಿ ವಿಮೆ, ಎಳ್ಳು 66 ರೈತರು, ರೂಪಾಯಿ 44.54 ಲಕ್ಷ ವಿಮೆ,  ಸೋಯಾಬೀನ್– 1,485 ರೈತರು, 879.93 ಲಕ್ಷ ವಿಮೆ, ಸೂರ್ಯಕಾಂತಿ– 38 ರೈತರು, 24.05 ಲಕ್ಷ ವಿಮೆ, ಆಳಂದ ತಾಲೂಕಿನ ರೈತರು ಮುಖ್ಯವಾಗಿ ತೊಗರಿ ಬೆಳೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ವಿಮೆ ಮಾಡಿಸಿದ್ದು, ಒಟ್ಟು ರೂಪಾಯಿ 82,502.91 ಲಕ್ಷ ವಿಮೆ ಮೊತ್ತ ಹೊಂದಿದೆ.

ಸೋಮವಾರಿಂದ ಜಂಟಿ ಸರ್ವೆ

ಆಳಂದ ತಾಲೂಕಿನಾದ್ಯಂತ ಬೆಳೆಹಾನಿಯಾದ ಕುರಿತು ಈಗಲೇ ಎಲ್ಲವನ್ನು ಹೇಳಲು ಸಾಧ್ಯವಿಲ್ಲ. ಸೋಮವಾರದಿಂದ ಕೃಷಿ, ಕಂದಾಯ ಮತ್ತು ತೋಟಗಾರಿಕೆ ಇಲಾಖೆಯ ಜಂಟಿ ಸರ್ವೆ ಮೂಲಕ ಸಮಗ್ರವಾಗಿ ಹಾನಿಯ ಅಂದಾಜಿಸಿ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು. ಹೊಲಗಳಲ್ಲಿ ಸರ್ವೆ ತಂಡವು ಬಂದಾಗ ರೈತರು ಸರಿಯಾದ ಮಾಹಿತಿ ನೀಡಬೇಕು.

ಈಗಾಗಲೇ ಬೆಳೆ ವಿಮೆಪಾವತಿಸಿದ ರೈತರ ಬೆಳೆಹಾಳಾಗಿದ್ದರೆ ನಮ್ಮ ಕಚೇರಿಯಲ್ಲಿ ಬೆಳೆ ವಿಮಾ ಕಂಪನಿಯ ಸಿಬ್ಬಂದಿಗಳು ಅರ್ಜಿಗಳನ್ನು ಸ್ವೀಕರಿಸುತ್ತಿದ್ದು, ಅಗತ್ಯ ದಾಖಲೆ ನೀಡಿ ಕಡ್ಡಾಯವಾಗಿ ಅರ್ಜಿ ಸ್ವೀಕೃತಿಯನ್ನು ಪಡೆಯಬೇಕು.

ಬನಸಿದ್ಧ ಬಿರಾದಾರ

ಸಹಾಯಕ ಪ್ರಬಾರಿ ಕೃಷಿ ನಿರ್ದೇಶಕರು ಆಳಂದ.

Comments are closed.

Don`t copy text!