ಆಳಂದ: ಸುಪ್ರೀಂ ಕೋರ್ಟ್ನ ಆದೇಶ ಮತ್ತು ಕರ್ನಾಟಕ ರಾಜ್ಯ ಸರ್ಕಾರದ ನಿರ್ದೇಶನದಂತೆ, ನಿವೃತ್ತ ನ್ಯಾಯಮೂರ್ತಿ ಹೆಚ್. ಎನ್. ನಾಗಮೋಹನದಾಸ್ ರವರ ನೇತೃತ್ವದ ಏಕ ಸದಸ್ಯ ಆಯೋಗವು ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿಗಾಗಿ ದತ್ತಾಂಶ ಸಂಗ್ರಹ ಕಾರ್ಯವನ್ನು ಆರಂಭಿಸಿದೆ. ಈ ಸಂಬಂಧ ಆಳಂದ ತಾಲೂಕಿನ ಮಾದಿಗ ಸಮಾಜದ ಅಧ್ಯಕ್ಷ ಲಕ್ಕಪ್ಪ ಎಸ್. ಜವಳಿ ನೇತೃತ್ವದಲ್ಲಿ ಸಮಾಜದ ಮುಖಂಡರು ಜನರಿಗೆ ಮನವಿ ಮಾಡಿದ್ದಾರೆ.
ಮಾದಿಗ ಸಮಾಜದ ಯುವ ಪೀಳಿಗೆಯ ಶಿಕ್ಷಣ, ಉದ್ಯೋಗ, ಮತ್ತು ಆರ್ಥಿಕ ಸಬಲೀಕರಣಕ್ಕಾಗಿ 30 ವರ್ಷಗಳಿಂದ ನಡೆದ ಹೋರಾಟದ ಫಲವಾಗಿ ಈ ಅವಕಾಶ ದೊರೆತಿದೆ. ಒಳಮೀಸಲಾತಿ ಜಾರಿಗೆ ನಿಖರ ದತ್ತಾಂಶ ಸಂಗ್ರಹಣೆ ಅಗತ್ಯವಾಗಿದ್ದು, ಈ ಕಾರ್ಯವನ್ನು ಮೂರು ಹಂತಗಳಲ್ಲಿ ನಡೆಸಲಾಗುವುದು:
ಮೊದಲ ಹಂತ ಏ.5ರಿಂದ 17ರವರೆಗೆ ಸಮೀಕ್ಷಾದಾರರು ಮನೆ-ಮನೆಗೆ ಭೇಟಿ ನೀಡಿ ಪರಿಶಿಷ್ಟ ಜಾತಿಯೊಳಗಿನ ಎಲ್ಲಾ ಜಾತಿಗಳ ದತ್ತಾಂಶ ಸಂಗ್ರಹಿಸುವರು.
ಎರಡನೇ ಹಂತ ಏ.19ರಿಂದ 21ರವರೆಗೆ ಮತಗಟ್ಟೆ ಪ್ರದೇಶವಾರು (ಗ್ರಾಮ ಪಂಚಾಯತಿವಾರು) ವಿಶೇಷ ಶಿಬಿರಗಳನ್ನು ಏರ್ಪಡಿಸಿ ಮಾಹಿತಿ ನೀಡಲು ಅವಕಾಶ ಕಲ್ಪಿಸಲಾಗುವುದು. ಮೂರನೇ ಹಂತ ಏ.19ರಿಂದ 23ರವರೆಗೆ ಈ ಹಂತದಲ್ಲಿ ಭಾಗವಹಿಸಲಾಗದವರು ಆನ್ಲೈನ್ನಲ್ಲಿ ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರದ ಆರ್ಡಿ ಸಂಖ್ಯೆ, ಮತ್ತು ರೇಷನ್ ಕಾರ್ಡ್ ಸಂಖ್ಯೆಯನ್ನು ಬಳಸಿ ಸ್ವಯಂ ಘೋಷಣೆ ಮಾಡಬಹುದು.
ಈ ಸಂದರ್ಭದಲ್ಲಿ, ಕರ್ನಾಟಕದ 101 ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಮಾದಿಗ ಜಾತಿಯ ಕ್ರಮ ಸಂಖ್ಯೆ 61 ಆಗಿದ್ದು, ಸಮೀಕ್ಷೆಯಲ್ಲಿ ‘ಮಾಂಗ್’, ‘ಮಾದರ’, ‘ಮಾತಂಗ’, ಅಥವಾ ‘ಹರಿಜನ’ ಎಂದು ನೋಂದಾಯಿಸದೆ, ಕಡ್ಡಾಯವಾಗಿ ‘ಮಾದಿಗ’ ಎಂದೇ ಬರೆಸಬೇಕೆಂದು ಮಾದಿಗ ಸಮಾಜದ ಮುಖಂಡರು ಕೋರಿದ್ದಾರೆ. ಇದು ಯುವ ಪೀಳಿಗೆಗೆ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಮತ್ತು ಆರ್ಥಿಕ ಸದೃಢತೆಗೆ ನೆರವಾಗಲಿದೆ ಮಾದಿಗ ಸಮಾಜದ ಪರವಾಗಿ ಹಿರಿಯ ಮುಖಂಡ ಮಹಂತಪ್ಪ ಸಾಲೆಗಾವ್, ಅಂಬರಾಯ ಚಲಿಗೇರಾ, ಬಸವರಾಜ ಜವಳಿ, ರಾಜು ಕಟ್ಟಿಮನಿ, ಸಂಜು ಸಾಲೆಗಾವ್, ಅಮೃತ್ ಕಟ್ಟಿಮನಿ, ಶ್ಯಾಮರಾವ್ ತಂಬಾಕವಾಡಿ, ಯಲ್ಲಪ್ಪ ಆಲೂರು, ಶಿವಲಿಂಗಪ್ಪ ಮಾತಂಗಿ, ಸಂಜಯ್ ಕುಮಾರ್ ಗಾಯಕ್ವಾಡ್, ಹರಿದಾಸ್ ಹಜಾರೆ, ರಾಜೇಂದ್ರ ಹತ್ತಾಗಳೆ, ಚಂದ್ರಕಾಂತ್ ಹುಲೆ ಮತ್ತಿತರ ಮುಖಂಡರು ಈ ಕರೆಯ ಜೊತೆಗೆ ಸಮಾಜದವರಿಗೆ ಸಹಕಾರ ನೀಡುವಂತೆ ವಿನಂತಿಸಿದ್ದಾರೆ.