ಯಾರೋ ಬರೆದುಕೊಟ್ಟ ಹೇಳಿಕೆಗೆ ಸಹಿ ಮಾಡಿ, ಯಾರದೋ ಹೆಸರಿನ ಮೇಲೆ ಪತ್ರ ಬರೆದು ಪ್ರಚಾರ ಪಡೆಯುವ ಉದ್ದೇಶ ತಮಗಿಲ್ಲ ಎಂದು ಜಿ.ಪಂ ಮಾಜಿ ಸದಸ್ಯ ಹರ್ಷಾನಂದ ಗುತ್ತೇದಾರ ತಿರುಗೇಟು ನೀಡಿದ್ದಾರೆ.
ಪದೇ ಪದೇ ಸರ್ಕಾರಗಳಿಗೆ, ಸಚಿವರುಗಳಿಗೆ ಪತ್ರ ಬರೆದು ಅದನ್ನು ಮಾಧ್ಯಮದಲ್ಲಿ ಪ್ರಕಟಿಸಿ ಪ್ರಚಾರ ಪಡೆಯುವ ಪ್ರವೃತ್ತಿ ಬಿಆರ್ ಪಾಟೀಲರಿಗೆ ಇದೆ ಎಂದು ಆಪಾದಿಸಿದ್ದಾರೆ.
ಕಾಂಗ್ರೆಸ್ ಮುಖಂಡರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು, ಕಳೆದ 15 ವರ್ಷಗಳಿಂದ ಸಕ್ರೀಯ ರಾಜಕೀಯ ಕ್ಷೇತ್ರದಲ್ಲಿದ್ದೇನೆ ಇನ್ನೊಬ್ಬರಿಂದ ಪ್ರತಿಕ್ರಿಯೆ ಪಡೆದು ಹೇಳಿಕೆ ಕೊಡುವಷ್ಟು ಕೊರತೆ ತಮಗೆ ಬಂದಿಲ್ಲ. ರಾಜಕೀಯ ಜೀವನದಲ್ಲಿ ಹಲವು ಏಳು ಬೀಳುಗಳನ್ನು ಕಂಡಿದ್ದೇವೆ. ಜಿ.ಪಂ ನಲ್ಲಿ ವಿರೋಧ ಪಕ್ಷದಲ್ಲಿಯೂ ಕುಳಿತುಕೊಂಡು ಕೆಲಸ ಮಾಡಿದ್ದೇನೆ ಮೇಲಾಗಿ ಸತ್ಯಾಗ್ರಹ, ಚಳುವಳಿಯ ಬಗ್ಗೆ ನಮಗೂ ಅರಿವಿದೆ ಎಂದು ಹೇಳಿದ್ದಾರೆ.
ಬಿ ಆರ್ ಪಾಟೀಲರ ವಯಸ್ಸು, ಅನುಭವಕ್ಕೆ ಗೌರವವಿದೆ ಅವರ ವಯಸ್ಸಿನ ಮುಂದೆ ನಾನು ಸಣ್ಣವನೇ ಇರಬಹುದು ಆದರೆ ಅವರು ತಮ್ಮ ರಾಜಕೀಯ ಅನೂಕೂಲಕ್ಕಾಗಿ ಎತ್ತುವ ಸಿದ್ಧಾಂತದ ವಿಷಯಗಳಿಗೆ ನಮ್ಮ ವಿರೋಧವಿದೆ. ರಾಜಕೀಯ ಕಾರಣಕ್ಕೆ ಸಿದ್ಧಾಂತ, ಧರ್ಮ, ಜಾತಿಯನ್ನು ಎಳೆದು ತರುವುದು ಕಾಂಗ್ರೆಸ್ ಮುಖಂಡರ ಖಯಾಲಿ. ನಾವು ಯಾವತ್ತಿಗೂ ಜಾತಿಯ ಟ್ರಂಪ್ ಕಾರ್ಡ್ ಹಿಡಿದು ರಾಜಕೀಯ ಮಾಡಿಲ್ಲ ಅದರ ಅವಶ್ಯಕತೆಯೂ ನಮಗೆ ಇಲ್ಲ. ನಮ್ಮದೇನಿದ್ದರೂ ಜನಸೇವೆ, ಕ್ಷೇತ್ರದ ಜನರ ಕಲ್ಯಾಣದ ವಿಷಯಗಳನ್ನು ಇಟ್ಟುಕೊಂಡು ರಾಜಕಾರಣ ಮಾಡಿಕೊಂಡು ಬಂದಿದ್ದೇವೆ ಎಂದು ತಿಳಿಸಿದ್ದಾರೆ.
ಬಿ ಆರ್ ಪಾಟೀಲರು ನಂಬಿಕೊಂಡು ಬಂದಿರುವ ಸಿದ್ಧಾಂತದಿಂದ ತಾಲೂಕಿನ ಜನತೆಗೆ ಯಾವ ಅನೂಕೂಲ ಮಾಡಿಕೊಟ್ಟಿದ್ದಾರೆ?. ಅವರಿಗೆ ಸಿದ್ಧಾಂತ ಎನ್ನುವುದು ಕೇವಲ ಅಧಿಕಾರ ಪಡೆಯುವ ವಸ್ತುವಾಗಿದೆಯಾ?. ತಾಲೂಕಿನಲ್ಲಿ ಸಿದ್ಧಾಂತ, ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ರಾಜಕಾರಣ ಮಾಡುತ್ತಿರುವುದು ಯಾರು? ದೇಶದಲ್ಲಿ ಒಡೆದು ಆಳುವ ಪದ್ಧತಿ ಯಾರು ಆರಂಭಿಸಿದರು ಎನ್ನುವುದು ಎಲ್ಲರಿಗೂ ತಿಳಿದಿದೆ ಎಂದು ಹೇಳಿದ್ದಾರೆ.
ಆರ್‍ಎಸ್‍ಎಸ್ ಬಗ್ಗೆ ಟೀಕಿಸುವವರಿಗೆ ಅದರ ಬಗ್ಗೆ ಮಾತನಾಡುವುದಕ್ಕೆ ನೈತಿಕತೆ ಇದೆಯಾ?. ಸಾಹಿತಿಗಳ ಹೆಸರಿನ ಮೇಲೆ ಇವರು ಪ್ರಶ್ನೆ ಕೇಳಿರುವುದಕ್ಕೆ ಬಿ ಆರ್ ಪಾಟೀಲರಿಗೆ ಪ್ರಶ್ನೆ ಮಾಡಲಾಗಿದೆ ಹಾಗಾದರೇ ಬಿ ಆರ್ ಪಾಟೀಲರು ಪ್ರಶ್ನಾತೀತರೇ ಎಂದು ಪ್ರಶ್ನಿಸಿದ್ದಾರೆ.
ಕೋವಿಡ್ ಸಂಕಷ್ಟದ ಸಮಯದಲ್ಲಿ ಶಾಸಕರು ಮತ್ತು ನಾವು ನಿರಂತರ ತಾಲೂಕಿನಲ್ಲಿ ಸಂಚಾರ ಮಾಡಿ ಜನರ ಸಂಕಷ್ಟಕ್ಕೆ ಪರಿಹಾರ ಕೊಡಿಸುವ ಕೆಲಸ ಮಾಡಿದ್ದೇವೆ. ಸಾವಿರಾರು ಜನರಿಗೆ ಔಷದೋಪಚಾರ ಮಾಡಿ ಚಿಕಿತ್ಸೆ ಕೊಡಿಸಿದ್ದೇವೆ. ಕೋರೋನಾ 2ನೇ ಅಲೆ ತಾಲೂಕಿನಲ್ಲಿ ವ್ಯಾಪಕವಾಗಿ ಹಬ್ಬಿ ನೂರಾರು ಸಾವು ನೋವುಗಳಾದರೂ ತಾಲೂಕಿಗೆ ನಿಮ್ಮ ವೈಯಕ್ತಿಕ ಕೊಡುಗೆ ಏನು?. ಆವಾಗ ಎಲ್ಲಿ ಹೋಗಿತ್ತು ನಿಮ್ಮ ತಾಲೂಕಿನ ಕಾಳಜಿ?. ಕೇವಲ ಕಲಬುರಗಿಯಲ್ಲಿ ಕುಳಿತು ಮಾಧ್ಯಮಗಳಿಗೆ ಹೇಳಿಕೆ ನೀಡುವುದನ್ನು ಬಿಟ್ಟು ತಾವು ತಾಲೂಕಿಗೆ ಏನೂ ಮಾಡಿದ್ದೀರಿ ಎಂದು ನಿಮ್ಮನ್ನು ನೀವೆ ಪ್ರಶ್ನಿಸಿಕೊಳ್ಳಿ ಎಂದು ಕೇಳಿದ್ದಾರೆ.