Shubhashaya News

ಆರೋಗ್ಯ ತಪಾಸಣಾ ಶಿಬಿರಕ್ಕೆ ಎಂಎಲ್‌ಸಿ ತಿಪ್ಪಣ್ಣಪ್ಪ ಕಮಕನೂರ್ ಚಾಲನೆ

ಕಲಬುರಗಿ: ನಗರದ ಸೂಪರ್ ಮಾರ್ಕೆಟ್ ರಸ್ತೆಯ ಜವಳಿ ಕಾಂಪ್ಲೆಕ್ಸ್‌ನಲ್ಲಿರುವ ಹರಿದಾಸ್ ಹಾರ್ಟ್ ಆಸ್ಪತ್ರೆಯ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ್ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಉತ್ತಮ ಆರೋಗ್ಯವೇ ಪ್ರತಿಯೊಬ್ಬರ ಜೀವನದ ಅಮೂಲ್ಯ ಸಂಪತ್ತಾಗಿದ್ದು, ಉಚಿತ ಆರೋಗ್ಯ ತಪಾಸಣಾ ಶಿಬಿರಗಳು ಸಾರ್ವಜನಿಕರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ಆರಂಭಿಕ ಹಂತದಲ್ಲಿಯೇ ವಿವಿಧ ಕಾಯಿಲೆಗಳನ್ನು ಪತ್ತೆಹಚ್ಚಲು ಸಹಕಾರಿಯಾಗುತ್ತವೆ ಎಂದು ಹೇಳಿದರು. ಇಂತಹ ಸಮಾಜಮುಖಿ ಸೇವಾ ಕಾರ್ಯಕ್ರಮಗಳನ್ನು ಆಸ್ಪತ್ರೆಗಳು ನಿರಂತರವಾಗಿ ಆಯೋಜಿಸಬೇಕು ಎಂದು ಕರೆ ನೀಡಿದರು.

ಹಿರಿಯ ಹೃದಯ, ಶ್ವಾಸಕೋಶ ಹಾಗೂ ನಾಳೀಯ ತಜ್ಞ ಡಾ. ಅರುಣಕುಮಾರ ಹರಿದಾಸ್ ಮಾತನಾಡಿ, ಹೃದಯ ಮತ್ತು ಶ್ವಾಸಕೋಶ ಸಂಬಂಧಿತ ಕಾಯಿಲೆಗಳ ಬಗ್ಗೆ ನಿರ್ಲಕ್ಷ್ಯ ವಹಿಸದೆ, ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ. ಈ ಶಿಬಿರದಲ್ಲಿ ತಜ್ಞ ವೈದ್ಯರಿಂದ ಸಮಾಲೋಚನೆ ಹಾಗೂ ವಿವಿಧ ಆರೋಗ್ಯ ಪರೀಕ್ಷೆಗಳ ಸೌಲಭ್ಯವನ್ನು ಸಾರ್ವಜನಿಕರಿಗೆ ಉಚಿತವಾಗಿ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಶಿಬಿರದಲ್ಲಿ ತಜ್ಞ ವೈದ್ಯರಿಂದ ಎಲ್ಲಾ ಕಾಯಿಲೆಗಳಿಗೆ ಉಚಿತ ಸಮಾಲೋಚನೆ, ರಕ್ತದೊತ್ತಡ (ಬಿಪಿ) ಪರೀಕ್ಷೆ, ರಕ್ತದಲ್ಲಿನ ಸಕ್ಕರೆ ಪರೀಕ್ಷೆ, ಇಸಿಜಿ (ECG), ಎಕೋ (ಹೃದಯ ಸ್ಕ್ಯಾನ್) ಸೇರಿದಂತೆ ವಿವಿಧ ಆರೋಗ್ಯ ತಪಾಸಣೆಗಳನ್ನು ಉಚಿತವಾಗಿ ನಡೆಸಲಾಯಿತು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರದ ಪ್ರಯೋಜನ ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕಿ ಕೋಮಲೇಶ್ವರಿ ಹರಿದಾಸ್, ಯುವ ಮುಖಂಡ ಸಂದೇಶ್ ಕಮಕನೂರ್, ಡಾ. ಶಾರದಾ ಹರಿದಾಸ್, ಹಿರಿಯ ಶ್ವಾಸಕೋಶ ತಜ್ಞ ಡಾ. ಹರ್ಷ ಮೂರ್ತಿ, ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಆಸ್ಪತ್ರೆಯ ವತಿಯಿಂದ ಸಾರ್ವಜನಿಕರು ಇಂತಹ ಉಚಿತ ಆರೋಗ್ಯ ತಪಾಸಣಾ ಶಿಬಿರಗಳ ಸದುಪಯೋಗ ಪಡೆದು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ಮನವಿ ಮಾಡಲಾಯಿತು

Leave A Reply

Your email address will not be published.