ಇಂದು ಮೋದಿಯಿಂದ ಬೆಂಗಳೂರಿನ ಮೆಟ್ರೋ ಪಿಂಕ್ ಲೈನ್ ಉದ್ಘಾಟನೆ; ಎಲ್ಲಿಂದ ಎಲ್ಲಿಗೆ ಪ್ರಯಾಣ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
ಸಿಲಿಕಾನ್ ಸಿಟಿ ಬೆಂಗಳೂರಿನ ಸಾರಿಗೆ ವ್ಯವಸ್ಥೆಗೆ ಮತ್ತೊಂದು ಗರಿ ಸೇರ್ಪಡೆಯಾಗುತ್ತಿದ್ದು, ‘ನಮ್ಮ ಮೆಟ್ರೋ’ದ ನೂತನ ತಾವರೆಕೆರೆ-ಕಾಳೇನ ಅಗ್ರಹಾರ ನಡುವಣ ಗುಲಾಬಿ ಮಾರ್ಗದ (Pink Line) ಎಲಿವೇಟೆಡ್ ಕಾರಿಡಾರ್ ಲೋಕಾರ್ಪಣೆಗೆ ಸಜ್ಜಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಮಧ್ಯಾಹ್ನ 12:45ಕ್ಕೆ ಸುದ್ದಗುಂಟೆಪಾಳ್ಯ (ತಾವರೆಕೆರೆ) ಮೆಟ್ರೋ ನಿಲ್ದಾಣದಲ್ಲಿ ನೂತನ ರೈಲಿಗೆ ಹಸಿರು ನಿಶಾನೆ ತೋರಲಿದ್ದು, ಬಳಿಕ ಐಐಎಂಬಿವರೆಗೆ (IIMB) ಮೆಟ್ರೋದಲ್ಲಿ ಪ್ರಯಾಣಿಸಲಿದ್ದಾರೆ. ಉದ್ಘಾಟನಾ ಸಮಾರಂಭಕ್ಕಾಗಿ ಈ ಮಾರ್ಗದ ಎಲ್ಲಾ ಆರು ನಿಲ್ದಾಣಗಳು ಮತ್ತು ಹೊಸ ರೈಲನ್ನು ತಳಿರು ತೋರಣಗಳಿಂದ ವಿಶೇಷವಾಗಿ ಅಲಂಕರಿಸಲಾಗಿದೆ. ಪ್ರಧಾನಿಗಳೊಂದಿಗೆ ರಾಜ್ಯಪಾಲರಾದ ಸುಧಾ ಯಾದವ್, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಮತ್ತು ಮೆಟ್ರೋ ಮಹಿಳಾ ಅಧಿಕಾರಿಗಳು ಮೊದಲ ಸಂಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ.
ಮೊದಲ ಹಂತದಲ್ಲಿ ಉದ್ಘಾಟನೆಯಾಗುತ್ತಿರುವ 7.5 ಕಿ.ಮೀ. ಉದ್ದದ ಈ ಎಲಿವೇಟೆಡ್ ಕಾರಿಡಾರ್ನಲ್ಲಿ ಶನಿವಾರದಿಂದ ಸಾರ್ವಜನಿಕರಿಗೆ ವಾಣಿಜ್ಯ ಸಂಚಾರ ಆರಂಭವಾಗಲಿದೆ. ಈಗಾಗಲೇ ಚಾಲ್ತಿಯಲ್ಲಿರುವ ನೇರಳೆ, ಹಸಿರು ಮತ್ತು ಹಳದಿ ಮಾರ್ಗಗಳ ಸಾಲಿಗೆ ಹೊಸದಾಗಿ ಗುಲಾಬಿ ಮಾರ್ಗ ಸೇರುತ್ತಿದ್ದು, ಸದ್ಯಕ್ಕೆ ಇದು ಜಯದೇವ ಆಸ್ಪತ್ರೆ ನಿಲ್ದಾಣದಲ್ಲಿ ಹಳದಿ ಮಾರ್ಗಕ್ಕೆ (ಆರ್.ವಿ. ರಸ್ತೆ-ಬೊಮ್ಮಸಂದ್ರ) ಸಂಪರ್ಕ ಕಲ್ಪಿಸಲಿದೆ. ಬೆಂಗಳೂರಿನ ದಕ್ಷಿಣ ಮತ್ತು ಉತ್ತರ ದಿಕ್ಕುಗಳನ್ನು ಬೆಸೆಯುವ ಈ ಮಾರ್ಗದ ಬಾಕಿ ಇರುವ 13.75 ಕಿ.ಮೀ. ಸುರಂಗ ಮಾರ್ಗವು 2027ರ ಮೇ ಅಂತ್ಯದೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದ್ದು, ಆ ಬಳಿಕ ಎಂ.ಜಿ. ರಸ್ತೆ ನಿಲ್ದಾಣವೂ ಪ್ರಮುಖ ಇಂಟರ್ಚೇಂಜ್ ಆಗಿ ಕಾರ್ಯನಿರ್ವಹಿಸಲಿದೆ.
ಮೆಟ್ರೋ ಉದ್ಘಾಟನೆಯ ಬಳಿಕ ಮಧ್ಯಾಹ್ನ 1:15ಕ್ಕೆ ಐಐಎಂಬಿ ಆವರಣದಲ್ಲಿ ನಡೆಯುವ ಬೃಹತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು 15,600 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಇದಕ್ಕೂ ಮುನ್ನ ಬೆಳಗ್ಗೆ 10:45ಕ್ಕೆ ಆನೇಕಲ್ ಬಳಿಯ ಪ್ರಶಾಂತಿ ಕುಟೀರದ ಸ್ವರ್ಣ ಜಯಂತಿ ಆಚರಣೆ ಸಮಾರಂಭದಲ್ಲಿ ಅವರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಿಲ್ದಾಣಗಳ ಸುತ್ತಮುತ್ತಲಿನ ರಸ್ತೆಗಳಿಗೆ ಡಾಂಬರೀಕರಣ ಹಾಗೂ ಗುಂಡಿ ಮುಚ್ಚುವ ಕಾಮಗಾರಿಗಳನ್ನು ಜಿಬಿಎ ವತಿಯಿಂದ ಈಗಾಗಲೇ ಪೂರ್ಣಗೊಳಿಸಲಾಗಿದೆ.
ಇದೇ ವೇಳೆ, ರಾಜ್ಯದ ಕರಾವಳಿ ಹಾಗೂ ರಾಜಧಾನಿ ನಡುವಿನ ರೈಲು ಸಂಪರ್ಕಕ್ಕೆ ವೇಗ ನೀಡುವ ನಿಟ್ಟಿನಲ್ಲಿ ಬಹುನಿರೀಕ್ಷಿತ ಬೆಂಗಳೂರು-ಮಂಗಳೂರು-ಮಡಗಾಂವ್ ನಡುವಿನ ನೂತನ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೂ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ. ಐಐಎಂಬಿ ಆಡಿಟೋರಿಯಂನಿಂದಲೇ ವರ್ಚುವಲ್ ಮೂಲಕ ಪ್ರಧಾನಿಗಳು ಈ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ. ಈ ಐತಿಹಾಸಿಕ ಕ್ಷಣಕ್ಕೆ ಬೈಯಪ್ಪನಹಳ್ಳಿಯ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ನಲ್ಲಿ ನೈಋತ್ಯ ರೈಲ್ವೆ ವತಿಯಿಂದ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದ್ದು, ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ.