Shubhashaya News

ಮುದ್ರಣ ದೋಷದಿಂದ ಅಬಕಾರಿ ರಕ್ಷಕ ಹುದ್ದೆ ವಂಚಿತ: ಅಭ್ಯರ್ಥಿಗೆ 8 ವಾರಗಳಲ್ಲಿ ನೇಮಕಾತಿ ನೀಡಲು ಹೈಕೋರ್ಟ್ ನಿರ್ದೇಶನ

ಎಸ್‌ಎಸ್‌ಎಲ್‌ಸಿ ಅಂಕಪಟ್ಟಿಯಲ್ಲಿ ಅಧಿಕಾರಿಗಳಿಂದ ಆದ ಮುದ್ರಣ ದೋಷದಿಂದಾಗಿ ಅಬಕಾರಿ ರಕ್ಷಕ ಹುದ್ದೆಯಿಂದ ವಂಚಿತರಾಗಿದ್ದ ಅಭ್ಯರ್ಥಿಗೆ ಕರ್ನಾಟಕ ಹೈಕೋರ್ಟ್ ಮಹತ್ವದ ನೆರವು ನೀಡಿದೆ. ತುಮಕೂರು ತಾಲೂಕಿನ ಕಳ್ಳಿಪಾಳ್ಯದ ಕೆ. ಮಂಜುನಾಥ್ ಅವರಿಗೆ 8 ವಾರಗಳ ಒಳಗಾಗಿ ಅಬಕಾರಿ ರಕ್ಷಕ ಹುದ್ದೆ ಕಲ್ಪಿಸುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಮೂರ್ತಿ ಎಸ್.ಜಿ. ಪಂಡಿತ್ ಅವರ ನೇತೃತ್ವದ ವಿಭಾಗೀಯ ಪೀಠ ನಿರ್ದೇಶನ ನೀಡಿದೆ. ಈ ಹಿಂದೆ 2018ರಲ್ಲಿ ಮಂಜುನಾಥ್ ಅವರಿಗೆ ಉದ್ಯೋಗ ನೀಡುವಂತೆ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಪೀಠ ವಜಾಗೊಳಿಸಿದೆ.

ಪ್ರಕರಣದ ಹಿನ್ನೆಲೆ: 2008ರಲ್ಲಿ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸಿದ್ದ ಅಬಕಾರಿ ರಕ್ಷಕ (ಪುರುಷ) ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಕೆ. ಮಂಜುನಾಥ್ 231 ಅಂಕಗಳನ್ನು ಗಳಿಸಿ ಉತ್ತೀರ್ಣರಾಗಿದ್ದರು. ಆದರೆ, 2010ರಲ್ಲಿ ನಡೆದ ಮೂಲ ದಾಖಲೆಗಳ ಪರಿಶೀಲನೆ ವೇಳೆ ತಾಂತ್ರಿಕ ತೊಡಕು ಎದುರಾಗಿತ್ತು. ಶಾಲಾ ವರ್ಗಾವಣೆ ಪತ್ರ ಮತ್ತು ಇತರ ದಾಖಲೆಗಳಲ್ಲಿ ಅವರ ಜನ್ಮ ದಿನಾಂಕ 1982ರ ಜೂನ್ 15 ಎಂದಿದ್ದರೆ, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿಯಲ್ಲಿ ಮುದ್ರಣ ದೋಷದಿಂದ 1980ರ ಜೂನ್ 15 ಎಂದು ನಮೂದಾಗಿತ್ತು. ಇದರಿಂದ ವಯೋಮಿತಿ ಮೀರಿದೆ ಎಂಬ ಕಾರಣ ನೀಡಿ, ತಿದ್ದುಪಡಿ ಮಾಡಿದ ಅಂಕಪಟ್ಟಿ ಸಲ್ಲಿಸಲು ಕೆಪಿಎಸ್‌ಸಿ ಅಲ್ಪ ಕಾಲಾವಕಾಶ ನೀಡಿತ್ತು.

ನಿಗದಿತ ಸಮಯದಲ್ಲಿ ತಿದ್ದುಪಡಿಯಾದ ದಾಖಲೆ ಸಲ್ಲಿಸಲು ಸಾಧ್ಯವಾಗದ ಕಾರಣ, ಮಂಜುನಾಥ್ ಅವರಿಗಿಂತ ಕಡಿಮೆ ಅಂಕ ಪಡೆದ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಕೆಪಿಎಸ್‌ಸಿ ಅಂತಿಮ ಪಟ್ಟಿ ಪ್ರಕಟಿಸಿತ್ತು. ಇದನ್ನು ಪ್ರಶ್ನಿಸಿ ಮಂಜುನಾಥ್ ಕೆಎಟಿ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಕೆಎಟಿ, ಮಂಜುನಾಥ್ ಅವರಿಗೆ ಹುದ್ದೆ ನೀಡುವಂತೆ 2018ರಲ್ಲಿ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಸರ್ಕಾರ, ಜನ್ಮ ದಿನಾಂಕ ತಿದ್ದುಪಡಿಗೆ ಸಿವಿಲ್ ನ್ಯಾಯಾಲಯದ ಡಿಕ್ರಿ ಕಡ್ಡಾಯವಾಗಿದ್ದರೂ, ಡಿಕ್ರಿ ಇಲ್ಲದೆಯೇ ಶಿಕ್ಷಣ ಇಲಾಖೆ ಅಧಿಕಾರಿಗಳು 2011ರಲ್ಲಿ ಅಂಕಪಟ್ಟಿ ತಿದ್ದುಪಡಿ ಮಾಡಿದ್ದಾರೆ ಎಂದು ವಾದಿಸಿತ್ತು.

ನ್ಯಾಯಪೀಠದ ಮಹತ್ವದ ಅಭಿಪ್ರಾಯ: ಸರ್ಕಾರದ ವಾದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ಅಭ್ಯರ್ಥಿಯು ತಿದ್ದುಪಡಿಗಾಗಿ ಸಿವಿಲ್ ನ್ಯಾಯಾಲಯದ ಮೊರೆ ಹೋಗಿದ್ದರೂ, ವಿಚಾರಣೆ ಬಾಕಿ ಇರುವಾಗಲೇ ಸರ್ಕಾರಿ ಅಧಿಕಾರಿಯೇ ತಮ್ಮ ತಪ್ಪನ್ನು ಸರಿಪಡಿಸಿ ಹೊಸ ಅಂಕಪಟ್ಟಿ ನೀಡಿದ್ದಾರೆ. ಹೀಗಿರುವಾಗ, ತನ್ನದೇ ಅಧಿಕಾರಿ ಮಾಡಿದ ತಪ್ಪನ್ನು ಮುಂದಿಟ್ಟುಕೊಂಡು ಸರ್ಕಾರವು ಅರ್ಹ ಅಭ್ಯರ್ಥಿಯ ಉದ್ಯೋಗದ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಚಾಟಿ ಬೀಸಿದೆ.

 

Leave A Reply

Your email address will not be published.