ಆಳಂದ: ತಾಲೂಕಿನ ತಡಕಲ್ ಗ್ರಾಮದಲ್ಲಿ ಅಂಬಾಭವಾನಿ ದೇವಿಯ ಜಾತ್ರಾ ಮಹೋತ್ಸವ ಹಾಗೂ ದಸರಾ ಉತ್ಸವ ಭಕ್ತಿ ಮತ್ತು ಸಂಭ್ರಮದಿಂದ ಜರುಗಿತು. ಈ ಸಂದರ್ಭದಲ್ಲಿ ಸಾಹಿತಿಗಳು, ಕಲಾವಿದರು ಹಾಗೂ ಭಜನಾ ತಂಡಗಳಿಗೆ ‘ಅಂಬವ್ವಾ ಮಾತೃರತ್ನ’ ಗೌರವ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಸುಭಾಷ್ ಗುತ್ತೇದಾರ ಮಾತನಾಡಿ, ತಮ್ಮ ತಾಯಿಯ ಸ್ಮರಣಾರ್ಥ ಅಂಬಾಭವಾನಿ ದೇವಿಯ ಮಂದಿರ ನಿರ್ಮಿಸಿ, ದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಇನ್ನು ಮುಂದೆ ಪ್ರತಿವರ್ಷ ಜಾತ್ರೆ ಹಾಗೂ ದಸರಾ ಉತ್ಸವವನ್ನು ನಡೆಸುವ ಸಂಕಲ್ಪ ಮಾಡಲಾಗಿದ್ದು, ಅದರ ಅಂಗವಾಗಿ ಈ ವರ್ಷ ಮೊದಲ ಬಾರಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಸಾಹಿತ್ಯ ಮತ್ತು ಕಲೆಯನ್ನು ಪ್ರೋತ್ಸಾಹಿಸುವುದು ಹಾಗೂ ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಸಮಾಜದಲ್ಲಿ ಸೌಹಾರ್ದತೆ ಮತ್ತು ಉತ್ತಮ ಮೌಲ್ಯಗಳನ್ನು ಬೆಳೆಸುವುದು ಈ ಉತ್ಸವದ ಪ್ರಮುಖ ಉದ್ದೇಶವಾಗಿದೆ. ಇಂತಹ ಕಾರ್ಯಕ್ರಮಗಳು ಸಮಾಜವನ್ನು ಸಕಾರಾತ್ಮಕವಾಗಿ ರೂಪಿಸಲು ಸಹಕಾರಿಯಾಗುತ್ತವೆ ಎಂದು ಹೇಳಿದರು.
ಅಂಬಾಭವಾನಿ ದೇವಿ ಹಾಗೂ ಶ್ರೀಶೈಲ ಮಲ್ಲಿಕಾರ್ಜುನ ದೇವರ ಕೃಪೆಯಿಂದ ಜನಸೇವೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಸ್ಮರಿಸಿದ ಸುಭಾಷ್ ಗುತ್ತೇದಾರ, ಗ್ರಾಮಸ್ಥರ ಸಹಕಾರದಿಂದ ದೇವಿಯ ಮಂದಿರ ನಿರ್ಮಾಣ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿಯೂ ಜನಸೇವೆಯನ್ನು ಮುಂದುವರಿಸುವುದಾಗಿ ತಿಳಿಸಿದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಹಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದ ಅವರು, ಜನಸೇವೆಯ ಉದ್ದೇಶದಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತಾವೇ ಸ್ಪರ್ಧಿಸುವುದಾಗಿ ಘೋಷಿಸಿದರು.
*ಸಾನಿಧ್ಯ ಮತ್ತು ಆಶೀರ್ವಚನ:* ನಂದಗಾವ ಮಠದ ಶ್ರೀ ರಾಜಶೇಖರ ಮಹಾಸ್ವಾಮಿಗಳು, ಮಾಡಿಯಾಳ ಒಪ್ಪತ್ತೇಶ್ವರ ಮಠದ ಶ್ರೀ ಒಪ್ಪತ್ತೇಶ್ವರ ಮಹಾಸ್ವಾಮಿಗಳು ಹಾಗೂ ಆಳಂದ ಹಿರೇಮಠದ ಶ್ರೀ ಸಿದ್ದೇಶ್ವರ ಶಿವಾಚಾರ್ಯರು ಸಾನಿಧ್ಯ ವಹಿಸಿ, ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಶಿವಪುತ್ರಪ್ಪ ಬೆಳೆ ಮಾತನಾಡಿ, ಸುಭಾಷ್ ಗುತ್ತೇದಾರ ಅವರು ತಮ್ಮ ತಾಯಿಯ ಸ್ಮರಣಾರ್ಥ ದೇವಿಯ ಮಂದಿರ ನಿರ್ಮಿಸಿ ಧಾರ್ಮಿಕ ಕಾರ್ಯಗಳಿಗೆ ಮುಂದಾಗಿರುವುದನ್ನು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಕುಪೇಂದ್ರ ಗುತ್ತೇದಾರ, ಅಶೋಕ ಗುತ್ತೇದಾರ, ತಿಪ್ಪಯ್ಯ ಗುತ್ತೇದಾರ, ಗೋವಿಂದ ಮಂಡ್ಲೆ, ವಿನೋದ ಮಡಿವಾಳ, ನಾಗೇಂದ್ರಪ್ಪ ರೆಡ್ಡಿ ನಾವಡಗಿ, ಧರ್ಮರಾಜ ಕೋರೆ, ಪುಂಡಲಿಕ್ ದಂಗಾಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಮುಖಂಡರು, ದೇವಿಯ ಭಕ್ತರು, ಸಾಹಿತಿಗಳು ಹಾಗೂ ಕಲಾವಿದರು ಉಪಸ್ಥಿತರಿದ್ದರು.
ಅಪ್ಪಾಸಾಹೇಬ ಗುಂಡೆ ಸ್ವಾಗತಿಸಿದರು. ಹನಮಂತ ಶೇರಿ ಹಾಗೂ ಶರಣಬಸಪ್ಪ ವಡಗಾಂವ ಕಾರ್ಯಕ್ರಮ ನಿರೂಪಿಸಿದರು