Shubhashaya News

ಪರಸ್ಪರ ಪ್ರೀತಿ, ಗೌರವದ ಸಂಕೇತ ದಸರಾ ಹಬ್ಬ: ಶಾಸಕ ಎಂ.ವೈ. ಪಾಟೀಲ್

ಅಫಜಲಪುರ: ದಸರಾ ಹಬ್ಬವು ಕೇವಲ ಆಚರಣೆಯಲ್ಲ; ಅದು ಸಮಾಜದಲ್ಲಿ ಪರಸ್ಪರ ಪ್ರೀತಿ, ವಿಶ್ವಾಸ ಹಾಗೂ ಗೌರವವನ್ನು ಬೆಳೆಸುವ ಪವಿತ್ರ ಹಬ್ಬವಾಗಿದೆ. ಹೀಗಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಈ ಹಬ್ಬವನ್ನು ಆಚರಿಸೋಣ ಎಂದು ಶಾಸಕ ಎಂ.ವೈ. ಪಾಟೀಲ್ ಹೇಳಿದರು.

ಪಟ್ಟಣದ ಮಹಾಂತೇಶ್ವರ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಪಾಟೀಲ್ ಕುಟುಂಬದ ವತಿಯಿಂದ ಆಯೋಜಿಸಿದ್ದ ಬನ್ನಿ ವಿನಿಮಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದಸರಾ ಹಬ್ಬಕ್ಕೆ ತನ್ನದೇ ಆದ ಪೌರಾಣಿಕ ಹಿನ್ನೆಲೆಯಿದೆ. ಮಹಾಭಾರತದ ಪ್ರಕಾರ, ಪಾಂಡವರು ವನವಾಸ ಮತ್ತು ಅಜ್ಞಾತವಾಸವನ್ನು ಮುಗಿಸಿ, ಕೌರವರ ವಿರುದ್ಧ ವಿಜಯ ಸಾಧಿಸಿದ ಸಂದರ್ಭವನ್ನು ವಿಜಯದ ಸಂಕೇತವಾಗಿ ಆಚರಿಸಲಾಗುತ್ತದೆ. ಹೀಗಾಗಿ ವಿಜಯದಶಮಿ ಹಬ್ಬವು ಧರ್ಮದ ವಿಜಯವನ್ನು ಸಾರುವ ಮಹತ್ವದ ಹಬ್ಬವಾಗಿದೆ ಎಂದು ತಿಳಿಸಿದರು.

ಪ್ರಸ್ತುತ ರಾಜ್ಯದಾದ್ಯಂತ ಬರಗಾಲದ ಪರಿಸ್ಥಿತಿ ಎದುರಾಗಿದ್ದು, ನಮ್ಮ ಭಾಗದಲ್ಲಿಯೂ ಮುಂಗಾರು ಮತ್ತು ಹಿಂಗಾರು ಮಳೆಯ ಕೊರತೆಯಿಂದ ಬೆಳೆಗಳು ಒಣಗುತ್ತಿವೆ. ಇದರಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಾರಿಯ ದಸರಾ ಹಬ್ಬದ ಸಂದರ್ಭದಲ್ಲಿ ನಾವೆಲ್ಲರೂ ಒಟ್ಟಾಗಿ ಪ್ರಕೃತಿ ಮಾತೆ ಕರುಣೆ ತೋರಿ, ರೈತರು ಹಾಗೂ ಸಾರ್ವಜನಿಕರ ಸಂಕಷ್ಟಗಳನ್ನು ಶೀಘ್ರವಾಗಿ ದೂರ ಮಾಡಲಿ ಎಂದು ಭಗವಂತನಲ್ಲಿ ಶ್ರದ್ಧೆಯಿಂದ ಪ್ರಾರ್ಥಿಸೋಣ ಎಂದು ಕರೆ ನೀಡಿದರು.

*ಆಶೀರ್ವಚನ:* ಸಾನಿಧ್ಯ ವಹಿಸಿದ್ದ ಶ್ರೀ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ಆಶೀರ್ವಚನ ನೀಡಿ, ಮಹಾಭಾರತದ ಪ್ರಕಾರ ಪಾಂಡವರು ತಮ್ಮ ಅಜ್ಞಾತವಾಸದ ಸಂದರ್ಭದಲ್ಲಿ ದಿವ್ಯಾಸ್ತ್ರಗಳನ್ನು ಶಮಿ ವೃಕ್ಷದಲ್ಲಿ ಅಡಗಿಸಿಟ್ಟಿದ್ದರು. ವಿಜಯದಶಮಿಯ ದಿನ ಅವುಗಳನ್ನು ಮರಳಿ ಪಡೆದು ಕೌರವರ ವಿರುದ್ಧ ವಿಜಯ ಸಾಧಿಸಿದರು. ಹೀಗಾಗಿ ಬನ್ನಿ ವಿನಿಮಯವು ವಿಜಯದ ಸಂಕೇತವಾಗಿದೆ ಎಂದು ವಿವರಿಸಿದರು.

ಇಂತಹ ಪವಿತ್ರ ಕಾರ್ಯಕ್ರಮವನ್ನು ಆಯೋಜಿಸಿರುವ ಶಾಸಕ ಎಂ.ವೈ. ಪಾಟೀಲ್ ಅವರ ಕಾರ್ಯ ಶ್ಲಾಘನೀಯವಾಗಿದೆ. ಇಳಿ ವಯಸ್ಸಿನಲ್ಲಿಯೂ ಯುವಕರಂತೆ ಇಡೀ ತಾಲೂಕಿನಲ್ಲಿ ಸಂಚರಿಸಿ, ಸಂಕಷ್ಟದಲ್ಲಿರುವ ಜನರಿಗೆ ಸ್ಪಂದಿಸುವ ಕಾರ್ಯವನ್ನು ಅವರು ನಿರಂತರವಾಗಿ ಮಾಡುತ್ತಿದ್ದಾರೆ. ಅಲ್ಲದೆ, ಕೆಕೆಆರ್‌ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ್ ಅವರೂ ಸರಳ ಸ್ವಭಾವದೊಂದಿಗೆ ಜನಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಕೆಕೆಆರ್‌ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ್, ಮಂಜೂರ ಅಹ್ಮದ್ ಪಟೇಲ್, ಸಿದ್ದಯ್ಯ ಹಿರೇಮಠ, ಸಂಗ್ರಾಮಗೌಡ ಪಾಟೀಲ್, ಪಪ್ಪು ಪಟೇಲ್, ಪ್ರಕಾಶ್ ಜಮಾದಾರ, ಮತೀನ ಪಟೇಲ್, ಸಿದ್ದಾರ್ಥ್ ಬಸರಗಿಡ, ಸಿದ್ದು ಸಿರಸಗಿ, ರವಿ ಶೆಟ್ಟಿ, ಶರಣು ಕುಂಬಾರ, ಸುಭಾಷ್ ರೂಗಿ, ರೇಣುಕಾ ಸಿಂಗೆ, ರಮೇಶ್ ಪೂಜಾರಿ, ಎಸ್.ಎಸ್. ಪಾಟೀಲ್, ಮಹಾಂತಯ್ಯ ಹಿರೇಮಠ, ಶಿವಾನಂದ ಗಾಡಿ ಸಾಹುಕಾರ, ಕಲ್ಯಾಣಿ ಸಿಂದಗೇರಿ, ಶೀವು ಪದಕಿ, ಮಹಾಲಿಂಗ ಅಂಗಡಿ, ರಾಜು ಪಾಟೀಲ್, ಸುರೇಶಗೌಡ ಶೀರನಾಳ, ಕರೇಪ್ಪ ಪೂಜಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave A Reply

Your email address will not be published.