Shubhashaya News

ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್‌ರಿಂದ ಖ್ವಾಜಾ ಬಂದನವಾಜ್ ದರ್ಗಾಕ್ಕೆ ಭೇಟಿ

ದರ್ಗಾದ ಐತಿಹಾಸಿಕ ವಾಸ್ತುಶಿಲ್ಪ ವೀಕ್ಷಣೆ; ಸಂಶೋಧನಾ ಅಕಾಡೆಮಿಯ ಶಹಬಾಜ್ ಬುಕ್ ಸಂಗ್ರಹ ಉದ್ಘಾಟನೆ

ಕಲಬುರಗಿ: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧ್ಯಕ್ಷ ಹಾಗೂ ಶಾಂತಿನಗರ ಶಾಸಕ ಎನ್.ಎ. ಹ್ಯಾರಿಸ್ ಅವರು ಬುಧವಾರ ನಗರದ ಐತಿಹಾಸಿಕ ಖಾಜಾ ಬಂದನವಾಜ್ ದರ್ಗಾ ಶರೀಫ್‌ಗೆ ಭೇಟಿ ನೀಡಿ, ದರ್ಗಾ ಹಜರತ್ ಖ್ವಾಜಾ ಬಂದನವಾಜ್ (ರಹ.) ಅವರ ಸಜ್ಜಾದಾ ನಶೀನ್ ಹಜರತ್ ಡಾ. ಹಾಫಿಜ್ ಸಯ್ಯಿದ್ ಮುಹಮ್ಮದ್ ಅಲಿ ಅಲ್-ಹುಸೈನಿ ಸಾಹೇಬ್ ಅವರನ್ನು ಭೇಟಿಯಾದರು.

ಬಳಿಕ ದರ್ಗಾದ ಗುಂಬದ್-ಎ-ಮುಬಾರಕ್‌ನಲ್ಲಿ ಗುಲ್-ಎ-ಅಕೀದತ್ ಸಮರ್ಪಿಸಿ ವಿಶೇಷ ದುವಾ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಜ್ಜಾದಾ ನಶೀನ್ ಅವರು ಎನ್.ಎ. ಹ್ಯಾರಿಸ್ ಅವರಿಗೆ ತಬರ್ರುಕಾತ್ ನೀಡಿದರು. ಡಾ. ಸಯ್ಯಿದ್ ಮುಸ್ತಫಾ ಅಲ್-ಹುಸೈನಿ ಸಾಹೇಬ್ ಹಾಗೂ ವಿಧಾನ ಪರಿಷತ್ ಸದಸ್ಯೆ ಬಿಲ್ಕೀಸ್ ಬಾನು ಅವರಿಗೂ ತಬರ್ರುಕಾತ್ ನೀಡಲಾಯಿತು.

ಸಜ್ಜಾದಾ ನಶೀನ್ ಅವರು ಹ್ಯಾರಿಸ್ ಅವರಿಗೆ ದರ್ಗಾ ಶರೀಫ್‌ನ ವಿವಿಧ ಸ್ಥಳಗಳನ್ನು ಪರಿಚಯಿಸಿ, ದರ್ಗಾದ ಪುರಾತನ ವಾಸ್ತುಶಿಲ್ಪ, ಐತಿಹಾಸಿಕ ಮಹತ್ವ ಹಾಗೂ ವಿಶಿಷ್ಟ ವಿನ್ಯಾಸದ ಕುರಿತು ವಿವರಿಸಿದರು.

ನಂತರ ಹ್ಯಾರಿಸ್ ಅವರು ಸಯ್ಯಿದ್ ಮುಹಮ್ಮದ್ ಗೇಸುದರಾಜ್ ಸಂಶೋಧನಾ ಅಕಾಡೆಮಿಗೆ ಭೇಟಿ ನೀಡಿದರು. ಇಲ್ಲಿ 1960ರಿಂದ 2026ರವರೆಗೆ ಪ್ರಕಟವಾಗಿರುವ ‘ಶಹಬಾಜ್ ಬುಕ್’ಗಳ ಸಂಪೂರ್ಣ ಸಂಗ್ರಹವನ್ನು ಉದ್ಘಾಟಿಸಲಾಯಿತು.

ಸಂಶೋಧನಾ ಅಕಾಡೆಮಿಯಲ್ಲಿರುವ ಈ ಅಪರೂಪದ ಸಂಗ್ರಹದಲ್ಲಿ ಹಜರತ್ ಖಾಜಾ ಬಂದನವಾಜ್ (ರಹ.) ಅವರ ಉರ್ಸ್ ಮುಬಾರಕ್ ಸಂದರ್ಭದಲ್ಲಿ ಪ್ರತಿವರ್ಷ ಆಯೋಜಿಸಲಾಗುವ ಸೆಮಿನಾರ್‌ಗಳಲ್ಲಿ ಮಂಡಿಸಲಾದ ಸಂಶೋಧನಾ ಪ್ರಬಂಧಗಳು ಸೇರಿವೆ. ಈ ಸಂಶೋಧನಾ ಲೇಖನಗಳನ್ನು ನಂತರ ಪುಸ್ತಕಗಳ ರೂಪದಲ್ಲಿ ಪ್ರಕಟಿಸಲಾಗುತ್ತದೆ.

ಈ ಸಂದರ್ಭದಲ್ಲಿ ಸಯ್ಯಿದ್ ಮುರ್ತಜಾ ಹುಸೈನಿ, ಸಯ್ಯಿದ್ ಅಕೀಬ್ ಹುಸೈನಿ, ಸಯ್ಯಿದ್ ಹೈದರ್ ಪಾಷಾ, ಮಾಜಿ ಸಚಿವ ರಹೀಮ್ ಖಾನ್, ಕೆಡಿಯುಎ ಅಧ್ಯಕ್ಷ ಮಝರ್ ಆಲಂ ಖಾನ್, ಕೆಎಂಪಿ ಉಪಮೇಯರ್ ಖುಸ್ರೋ ಜಹಾಗಿರ್ದಾರ್, ಕೆಪಿಸಿಸಿ ಸದಸ್ಯ ಫರಾಝ್-ಉಲ್-ಇಸ್ಲಾಂ, ಇಲಿಯಾಸ್ ಸೇಠ್ ಬಾಗವಾನ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Leave A Reply

Your email address will not be published.