Shubhashaya News

ಎಲ್ಲದರಲ್ಲೂ ಧರ್ಮ ಹುಡುಕುವುದೇ ಬಿ ಆರ್ ಪಾಟೀಲ ಚಾಳಿ

ಈ ದೇಶದಲ್ಲಿ ರಾಜ್ಯದಲ್ಲಿ ನಡೆಯುವ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ಧರ್ಮ ಹುಡುಕುವುದು ಮಾಜಿ ಶಾಸಕ ಬಿ ಆರ್ ಪಾಟೀಲರ ಚಾಳಿಯಾಗಿದ ಎಂದು ಜಿ.ಪಂ ಮಾಜಿ ಸದಸ್ಯ ಹರ್ಷಾನಂದ ಎಸ್ ಗುತ್ತೇದಾರ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಮಾಜಿ ಶಾಸಕ ಬಿ ಆರ್ ಪಾಟೀಲ ರೈತ ಚಳವಳಿ ಮತ್ತು ಇತರೆ ವಿಷಯಗಳ ಕುರಿತು ಆರ್‍ಎಸ್‍ಎಸ್ ಮುಖ್ಯಸ್ಥ ಮೋಹನ ಭಾಗವತಗೆ ಪತ್ರ ಬರೆದಿರುವ ಕುರಿತು ಹೇಳಿಕೆ ನೀಡಿರುವ ಮಾಜಿ ಜಿ.ಪಂ ಸದಸ್ಯ ಹರ್ಷಾನಂದ ಗುತ್ತೇದಾರ ಅವರು, ಕೋರೋನಾ 2ನೇ ಅಲೆ ಹಬ್ಬಲು ಕಾಂಗ್ರೆಸ್ ಮತ್ತು ಅದರ ಮುಖಂಡರುಗಳೇ ಕಾರಣ. ಲಸಿಕೆ ಬಗ್ಗೆ ಅಪಪ್ರಚಾರ ಮಾಡಿದ್ದೇ ಇವತ್ತು ಕೋರೋನಾ ವ್ಯಾಪಕವಾಗಿ ಹಬ್ಬಲು ಕಾರಣವಾಗಿದೆ ಈ ಕುರಿತು ಕಾಂಗ್ರೆಸ್ ಮತ್ತು ಅದರ ನಾಯಕರು ದೇಶದ ಜನರೆದುರು ಬಹಿರಂಗ ಕ್ಷಮೆಯಾಚಿಸಬೇಕು ಎಂದಿದ್ದಾರೆ.
ಜೀವನಪೂರ್ತಿ ಆರ್‍ಎಸ್‍ಎಸ್‍ನ್ನು ಟೀಕಿಸಿ, ವಿರೋಧಿಸಿ ರಾಜಕೀಯ ಮಾಡಿಕೊಂಡು ಬಂದಿರುವ ನಿಮಗೆ ಈಗ ಆರ್‍ಎಸ್‍ಎಸ್ ಮುಖ್ಯಸ್ಥರಿಗೆ ಪತ್ರ ಬರೆಯುವ ನೈತಿಕತೆ ಇದೆಯಾ ಎಂದು ಪ್ರಶ್ನಿಸಿದ್ದಾರೆ.
ರೈತ ಚಳುವಳಿಯಲ್ಲಿ ಧರ್ಮವನ್ನು ಹುಡುಕುತ್ತಿರುವುದು ಅವರ ಮನಸ್ಥಿತಿಯನ್ನು ತೋರಿಸುತ್ತದೆ ಕೇಂದ್ರ ಸರ್ಕಾರದ ನೂತನ ಕೃಷಿ ಕಾಯಿದೆಯಲ್ಲಿ ರೈತರಿಗೆ ಅನೂಕೂಲವಾಗುವ ಅಂಶಗಳಿದ್ದರೂ ಉದ್ದೇಶಪೂರ್ವಕವಾಗಿ ವಿರೋಧಕ್ಕಾಗಿ ವಿರೋಧ ಮಾಡುತ್ತಿದ್ದಾರೆ ಇದರ ಹಿಂದೆ ರಾಜಕೀಯ ಷಡ್ಯಂತ್ರ ಅಡಗಿದೆ ಎಂದು ಹೇಳಿದ್ದಾರೆ.
ಒಂದು ಕಡೆ ಚಳುವಳಿಯಲ್ಲಿ ಹಿಂದೂಗಳೇ ಅಧಿಕವಾಗಿದ್ದರು ಎಂದು ಹೇಳಿ ಧರ್ಮವನ್ನು ಮುನ್ನೆಲೆಗೆ ತರುತ್ತಾ ಹಿಂದೂಗಳನ್ನು ಒಲೈಸುವ ಕೆಲಸ ಮಾಡುತ್ತಾರೆ ಮತ್ತೊಂದು ಕಡೆ ಹಿಂದೂ ಧರ್ಮ ತನ್ನ ಸಿದ್ಧಾಂತಗಳನ್ನು ಮರೆತಿದೆ ಎಂದು ಹೇಳುತ್ತಾರೆ ಇದು ಅವರ ದ್ವಂದ್ವ ನಿಲುವಿಗೆ ಸಾಕ್ಷಿಯಾಗಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರಮಕೈಗೊಂಡಿರುವುದಿಂದಲೇ ಕೋರೋನಾ ಇಂದು ನಿಯಂತ್ರಣಕ್ಕೆ ಬರುತ್ತಿದೆ 3ನೇ ಸ್ಥಾನದಲ್ಲಿದ್ದ ಕಲಬುರಗಿ ಜಿಲ್ಲೆ ಇಂದು 30ನೇ ಸ್ಥಾನಕ್ಕೆ ಬಂದಿರುವುದು ನಿಮಗೆ ಕಾಣಿಸುತ್ತಿಲ್ಲವೇ?. ಆರ್‍ಎಸ್‍ಎಸ್ ಮತ್ತು ಅದರ ಸೇವಕರಿಗೆ ನಿಮ್ಮಿಂದ ರಾಷ್ಟ್ರಭಕ್ತಿಯ ಪಾಠ ಕಲಿಸಿಕೊಳ್ಳುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
ಬಿಜೆಪಿ ಸಿದ್ಧಾಂತದ ವಿಷಯದಲ್ಲಿ ಯಾವ ಸಂದರ್ಭದಲ್ಲಿಯೂ ರಾಜಕೀಯ ಮಾಡಿಕೊಂಡಿಲ್ಲ. ಕಾಂಗ್ರೆಸ್ ತನ್ನ ಸಿದ್ಧಾಂತವನ್ನು ಮರೆತಿದ್ದರಿಂದಲೇ ಇಂದು ದೇಶದಿಂದಲೇ ನಿರ್ನಾಮವಾಗುವ ಹಂತ ತಲುಪಿದೆ ಎಂದು ಛೇಡಿಸಿದ್ದಾರೆ.
ಭಯದಲ್ಲಿ ಬದುಕುತ್ತಿರುವುದು ದೇಶದ ಜನತೆಯಲ್ಲ ಕಾಂಗ್ರೆಸ್ ಮತ್ತು ಅದರ ಮುಖಂಡರು. ಕೋರೋನಾ 2ನೇ ಅಲೆ ತಾಲೂಕಿನಲ್ಲಿ ವ್ಯಾಪಕವಾಗಿ ಹಬ್ಬಿದ್ದರೂ ತಾಲೂಕಿಗೆ ನಿಮ್ಮ ವೈಯಕ್ತಿಕ ಕೊಡುಗೆ ಏನು?. ಕೇವಲ ಕಲಬುರಗಿಯಲ್ಲಿ ಕುಳಿತು ಮಾಧ್ಯಮಗಳಿಗೆ ಹೇಳಿಕೆ ನೀಡುವುದನ್ನು ಬಿಟ್ಟು ತಾವು ತಾಲೂಕಿಗೆ ಏನೂ ಮಾಡಿದ್ದೀರಿ ಎಂದು ನಿಮ್ಮನ್ನು ನೀವೆ ಪ್ರಶ್ನಿಸಿಕೊಳ್ಳಿ ಎಂದು ಕೇಳಿದ್ದಾರೆ.
ಹೊಸ ಸಂಸತ ಭವನದ ಕಟ್ಟಡ, ಪ್ರಧಾನ ಮಂತ್ರಿ ನಿವಾಸದ ಬಗ್ಗೆ ಸುಪ್ರೀಂಕೋರ್ಟ ಮೆಟ್ಟಿಲೆರಿದವರಿಗೆ ನ್ಯಾಯಾಂಗ ಚಾಟಿ ಬೀಸಿರುವುದು ನಿಮ್ಮ ಗಮನಕ್ಕಿಲ್ಲವೇ. ಪ್ರಧಾನಿ ನರೇಂದ್ರ ಮೋದಿಯವರು ಬಳಸುತ್ತಿರುವ ವಿಮಾನ ತಮ್ಮ ವೈಯಕ್ತಿಕ ಜೀವನಕ್ಕೆ ಬಳಸುತ್ತಿಲ್ಲ ಮುಂದೆ ಅದು ಯಾರೇ ಈ ದೇಶದ ಪ್ರಧಾನಮಂತ್ರಿಯಾದವರೂ ಬಳಸಬಹುದು ಎಂಬ ಕನಿಷ್ಟ ಜ್ಞಾನ ನಿಮಗಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಬಿ ಆರ್ ಪಾಟೀಲರಿಗೆ ತಮ್ಮ ಹೈಕಮಾಂಡನ್ನು ಖುಷಿ ಪಡಿಸುವುದು ಹಾಗೂ ಜಾತಿ, ಧರ್ಮಗಳ ವಿಷಯ ತಂದು ಜನರಲ್ಲಿ ಗೊಂದಲ ಮೂಡಿಸುವುದು ಪ್ರವೃತ್ತಿಯಾಗಿದೆ. ಈ ರೀತಿಯ ವಿಚಾರಗಳನ್ನು ಪ್ರಸ್ತಾಪ ಮಾಡುವುದರಿಂದ ಜನ ಬಿ ಆರ್ ಪಾಟೀಲರ ಮಾತಿಗೆ ಮರಳಾಗುವುದೂ ಇಲ್ಲ ಮನ್ನಣೆಯೂ ನೀಡುವುದಿಲ್ಲ ಹೀಗಾಗಿ ಅವರ ಪತ್ರಕ್ಕೆ ಮಹತ್ವವಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Leave A Reply

Your email address will not be published.