Shubhashaya News

ವಿದ್ಯೆ ಜೊತೆಗೆ ಸಂಸ್ಕಾರ ಕಲಿಕೆ ಬಹಳ ಅಗತ್ಯ: ಬಿ.ಆರ್.ಪಾಟೀಲ

ಕಲಬುರಗಿ : ವಿದ್ಯಾರ್ಥಿಗಳು ವಿದ್ಯೆ ಕಲಿಯುವುದರ ಜೊತೆಗೆ ಸಂಸ್ಕಾರ ಕಲಿಯುವುದು ಬಹಳ ಮುಖ್ಯವಾಗಿದೆ ಎಂದು ಆಳಂದ ಮತಕ್ಷೇತ್ರದ ಶಾಸಕ ಬಿ.ಆರ್.ಪಾಟೀಲ ಹೇಳಿದರು.

ನಗರದ ಶರಣಬಸವೇಶ್ವರ ಕಲಾ ಪದವಿ ಮಹಾವಿದ್ಯಾಲಯದಲ್ಲಿ ಮಂಗಳವಾರ ವಿದ್ಯಾರ್ಥಿ ಕಲಾನಿಕಾಯ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಗಳು ಶಿಸ್ತು, ಶ್ರಮ, ಸಂಸ್ಕಾರ ಬೆಳೆಸಿಕೊಳ್ಳವುದು ಅವಶ್ಯಕವಾಗಿದೆ ಅದನ್ನು ಶರಣಬಸವೇಶ್ವರರ ಕಲಾ ಮಹಾವಿದ್ಯಾಲಯ ಕಲಿಸಿಕೊಡುತ್ತದೆ ಎಂದರು.

ವಿದ್ಯಾರ್ಥಿ ದೆಸೆಯಿಂದಲೇ ನಾಯಕತ್ವದ ಗುಣಗಳನ್ನು ಬೆಳಿಸಿಕೊಂಡು ಅನ್ಯಾಯವನ್ನು ಖಂಡಿಸುವ ಹೋರಾಟದ ಮನೋಭಾವನೆಯನ್ನು ಮೈಗೂಡಿಸಿಕೊಳ್ಳಬೇಕು. ಪ್ರತಿಯೊಬ್ಬ ಯುವ ಜನತೆ ಜಲ, ಜಮೀನ, ಜೀವನದ ಬಗ್ಗೆ ತಿಳಿದುಕೊಂಡು ಪರಿಸರದ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಗೌರವ ಅತಿಥಿಗಳಾದ ಶರಣಬಸವೇಶ್ವರರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಗಳು ಉನ್ನತ ಗುರಿಯನ್ನು ಹೊಂದಿರಬೇಕು. ಆ ಗುರಿಯನ್ನು ಮುಟ್ಟಲು ನಿರಂತರ ಶ್ರಮಿಸಬೇಕು. ವಿದ್ಯೆ ಎಂಬುವುದು ಕೇವಲ ಪಠ್ಯವಲ್ಲ, ಅದು ಸಂಸ್ಕಾರ ಕಲಿಸುವ ರಾಜಮಾರ್ಗವಾಗಿದೆ ಹಾಗಾಗಿ ವಿದ್ಯಾರ್ಥಿಗಳು ನಿರಂತರ ಅಭ್ಯಾಸದಲ್ಲಿ ತೊಡಗಿಸಿಕೊಳ್ಳಿ ಎಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಡಾ.ಸುರೇಶಕುಮಾರ ನಂದಗಾoವ ಮಾತನಾಡಿದರು.

ಪ್ರಾಧ್ಯಾಪಕ ಡಾ.ಶಿವರಾಜ ಶಾಸ್ತ್ರಿ ಹೇರೂರ್ ಪ್ರಾಸ್ತಾವಿಕ ಮಾತನಾಡಿದರೆ, ಕು.ಸಾಯಿರಾಜ ಸ್ವಾಗತಿಸಿದರು. ಫಾಯಿಜಾ ಖಾನುಂ ಮತ್ತು ಪ್ರೇಮರಂಗನ ನಿರೂಪಿಸಿದರೆ, ವಿದ್ಯಾರ್ಥಿ ಸಂಘದ ಸಲಹೆಗಾರ್ತಿ ಡಾ.ಆರತಿ ರಾಮಚಂದ್ರ ವಂದಿಸಿದರು. ಸಂಗೀತ ವಿಭಾಗದ ಮುಖ್ಯಸ್ಥರು, ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

Leave A Reply

Your email address will not be published.