ಸ್ವಿಟ್ಜರ್ಲೆಂಡ್ ಎಂದರೆ ಹಿಮಚ್ಛಾದಿತ ಪರ್ವತಗಳು ಮತ್ತು ಪ್ರವಾಸಿ ತಾಣಗಳ ಚಿತ್ರಣ ಕಣ್ಮುಂದೆ ಬರುತ್ತದೆ. ಇಂದು ಆ ಚಿತ್ರಣ ಸಂಪೂರ್ಣವಾಗಿ ಬದಲಾಗಿದೆ. ಜಾಗತಿಕ ಆರ್ಥಿಕತೆಯ ಕೇಂದ್ರಬಿಂದು ದಿಕ್ಕು ಬದಲಿಸಿ ಭಾರತದತ್ತ ದೃಷ್ಟಿ ನೆಟ್ಟಿದೆ. ಸ್ವಿಟ್ಜರ್ಲೆಂಡ್ ಅಧ್ಯಕ್ಷ ಗೈ ಪರ್ಮೆಲಿನ್ ಅವರ ಭಾರತ ಭೇಟಿಯು ನವ ಭಾರತದ ಆರ್ಥಿಕ ಮತ್ತು ಭೌಗೋಳಿಕ ಕಾರ್ಯತಂತ್ರದ ಶಕ್ತಿಗೆ ಯುರೋಪ್ ಬರೆದುಕೊಟ್ಟ ಸ್ಪಷ್ಟ ಒಪ್ಪಿಗೆ ಪತ್ರವಾಗಿದೆ. ಜಗತ್ತಿನ ಬಲಿಷ್ಠ ಬಂಡವಾಳಶಾಹಿ ರಾಷ್ಟ್ರಗಳು ಭಾರತದ ಮಾರುಕಟ್ಟೆಯಲ್ಲಿ ತಮ್ಮ ಭವಿಷ್ಯದ ಅಸ್ತಿತ್ವವನ್ನು ಕಂಡುಕೊಳ್ಳುತ್ತಿವೆ.
ಸ್ವಿಟ್ಜರ್ಲೆಂಡ್ ಜಗತ್ತಿನ ಅತ್ಯಂತ ಪ್ರತಿಷ್ಠಿತ ತಟಸ್ಥ ರಾಷ್ಟ್ರ. ಯುದ್ಧ ಮತ್ತು ಸೇನಾ ಸಂಘರ್ಷಗಳಿಂದ ಸದಾ ಅಂತರ ಕಾಯ್ದುಕೊಳ್ಳುವ ಇತಿಹಾಸ ಆ ದೇಶಕ್ಕಿದೆ. ಅಂತಹ ರಾಷ್ಟ್ರವು ಇಂದು ಪ್ರಧಾನಿ ನರೇಂದ್ರ ಮೋದಿ ಅವರ ಜತೆಗಿನ ಮಾತುಕತೆಯ ನಂತರ, ಭಾರತದೊಂದಿಗೆ ರಕ್ಷಣಾ ಉಪಕರಣಗಳ ಉತ್ಪಾದನೆ ಮತ್ತು ಮಿಲಿಟರಿ ವಿನಿಮಯಕ್ಕೆ ಅಧಿಕೃತವಾಗಿ ಮುಂದಾಗಿದೆ. ಜೊತೆಗೆ, ಪರಮಾಣು ಶಕ್ತಿಯ ಕ್ಷೇತ್ರದಲ್ಲಿ ಭಾರತದೊಂದಿಗೆ ಸಹಕಾರವನ್ನು ಮತ್ತಷ್ಟು ಆಳವಾಗಿಸಲು ಒಪ್ಪಿಗೆ ಸೂಚಿಸಿದೆ. ಈ ನಿರ್ಧಾರದ ಹಿಂದಿರುವ ರಾಜತಾಂತ್ರಿಕ ವಿಶ್ಲೇಷಣೆ ಬಹಳ ಸ್ಪಷ್ಟವಾಗಿದೆ. ಏಷ್ಯಾದಲ್ಲಿ ಭದ್ರತೆ, ಸ್ಥಿರತೆ ಮತ್ತು ದೃಢವಾದ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಹೊಂದಿರುವ ಏಕೈಕ ಬಲಿಷ್ಠ ಶಕ್ತಿ ಭಾರತ. ಏಷ್ಯಾದ ಅನಿಶ್ಚಿತ ಭೌಗೋಳಿಕ ರಾಜಕಾರಣದ ನಡುವೆ, ಯುರೋಪಿನ ತಂತ್ರಜ್ಞಾನ ಮತ್ತು ಬಂಡವಾಳಕ್ಕೆ ಭಾರತವೇ ಅತ್ಯಂತ ಸುರಕ್ಷಿತ ಹಾಗೂ ವಿಶ್ವಾಸಾರ್ಹ ತಾಣ ಎನ್ನುವುದನ್ನು ಈ ರಕ್ಷಣಾ ಒಪ್ಪಂದಗಳು ಸಾಬೀತುಪಡಿಸಿವೆ.
ಭಾರತ ಮತ್ತು ಐರೋಪ್ಯ ಮುಕ್ತ ವ್ಯಾಪಾರ ಸಂಘಟನೆಯ (EFTA) ನಡುವಿನ ಮಹತ್ವದ ಒಪ್ಪಂದ (TEPA) ಜಾರಿಗೆ ಬಂದು ಯಶಸ್ವಿ ಒಂದು ವರ್ಷ ಕಳೆದಿದೆ. ಈ ಒಪ್ಪಂದದ ಅಡಿಯಲ್ಲಿ ಮುಂದಿನ ಹದಿನೈದು ವರ್ಷಗಳಲ್ಲಿ ಭಾರತಕ್ಕೆ ೧೦೦ ಶತಕೋಟಿ ಡಾಲರ್ (ಅಂದಾಜು ಎಂಟು ಲಕ್ಷ ಕೋಟಿ ರೂಪಾಯಿ) ಹೂಡಿಕೆ ಹರಿದುಬರಲಿದೆ. ಹತ್ತು ಲಕ್ಷ ನೇರ ಉದ್ಯೋಗಗಳ ಸೃಷ್ಟಿಯ ಭರವಸೆಯು ನೂರಾರು ಯುವ ಕುಟುಂಬಗಳಿಗೆ ಆರ್ಥಿಕ ಸ್ವಾತಂತ್ರ್ಯವನ್ನು ನೀಡಲಿದೆ. ಯುರೋಪ್ ಬಳಿ ಅಗಾಧವಾದ ಆರ್ಥಿಕ ಬಂಡವಾಳ ಮತ್ತು ಅತ್ಯಾಧುನಿಕ ತಂತ್ರಜ್ಞಾನವಿದೆ. ಭಾರತದ ಬಳಿ ಜಗತ್ತಿನ ಅತ್ಯಂತ ಬೃಹತ್ ಯುವಶಕ್ತಿ ಮತ್ತು ಬೇಡಿಕೆಯ ಮಾರುಕಟ್ಟೆಯಿದೆ. ಈ ಭೌತಿಕ ಮತ್ತು ಬೌದ್ಧಿಕ ಸಂಪನ್ಮೂಲಗಳ ಸಮೀಕರಣವೇ ಭಾರತವನ್ನು ಮುಂದಿನ ದಶಕದ ಆರ್ಥಿಕ ಮಹಾಶಕ್ತಿಯನ್ನಾಗಿ ರೂಪಿಸುವ ಪ್ರಮುಖ ಅಸ್ತ್ರವಾಗಿದೆ.
ಸಾರಿಗೆ, ಚಲನಶೀಲತೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗಾಗಿ ಉಭಯ ರಾಷ್ಟ್ರಗಳು ಮಾಡಿಕೊಂಡಿರುವ ಒಪ್ಪಂದಗಳು ನಗರೀಕರಣದ ವೇಗವನ್ನು ಹೆಚ್ಚಿಸಲಿವೆ. ಭಾರತದ ಮೂಲಸೌಕರ್ಯ ನಿರ್ಮಾಣ ಮತ್ತು ವಿನ್ಯಾಸದಲ್ಲಿ ಬೃಹತ್ ಹೂಡಿಕೆ ಮಾಡುವಂತೆ ಸ್ವಿಸ್ ಕಂಪನಿಗಳಿಗೆ ಮೋದಿಯವರು ಮುಕ್ತ ಆಹ್ವಾನ ನೀಡಿದ್ದಾರೆ.
ಬುದ್ಧಿವಂತ ಯುವಜನತೆಗೆ ಹಾಗೂ ವೃತ್ತಿಪರರಿಗೆ ಇದೊಂದು ಅತ್ಯಮೂಲ್ಯವಾದ ಕಾಲಘಟ್ಟ. ಉಭಯ ದೇಶಗಳು ವಲಸೆ ಮತ್ತು ಚಲನಶೀಲತೆಯ ಪಾಲುದಾರಿಕೆಯನ್ನು ಸಮಾನತೆಯ ಆಧಾರದ ಮೇಲೆ ಅಭಿವೃದ್ಧಿಪಡಿಸುವ ದೃಢವಾದ ಒಪ್ಪಂದಗಳಿಗೆ ಸಹಿ ಹಾಕಿವೆ. ಭಾರತೀಯ ವೃತ್ತಿಪರರಿಗೆ ಐದು ವರ್ಷಗಳವರೆಗಿನ ಮಲ್ಟಿಪಲ್-ಎಂಟ್ರಿ ವೀಸಾಗಳನ್ನು ಒದಗಿಸುವ ತೀರ್ಮಾನವು ವಲಸೆ ನಿಯಮಗಳ ಇತಿಹಾಸದಲ್ಲೇ ಒಂದು ದಿಟ್ಟ ಹೆಜ್ಜೆ. ಈ ವೀಸಾ ಮೂಲಕ ಪ್ರತಿಯೊಂದು ಭೇಟಿಯಲ್ಲೂ ಆರು ತಿಂಗಳ ಸುದೀರ್ಘ ವಾಸ್ತವ್ಯದ ಅವಕಾಶ ಲಭ್ಯವಿದೆ. ಉನ್ನತ ವ್ಯಾಸಂಗದ ಕನಸು ಹೊತ್ತ ವಿದ್ಯಾರ್ಥಿಗಳಿಗೆ ನವೀಕರಿಸಬಹುದಾದ ಒಂದು ವರ್ಷದ ವಿದ್ಯಾರ್ಥಿ ಪರವಾನಗಿಗಳು ಲಭಿಸಲಿವೆ. ಇವೆಲ್ಲವೂ ನಮ್ಮ ಯುವಕರಿಗೆ ಯುರೋಪಿನ ಅತ್ಯುತ್ತಮ ಶಿಕ್ಷಣ ಮತ್ತು ಸಂಶೋಧನಾ ಅವಕಾಶಗಳನ್ನು ನೇರವಾಗಿ ತೆರೆದಿಡಲಿವೆ.
ರಾಷ್ಟ್ರೀಯ ಕಾನೂನುಗಳಿಗೆ ಅನುಗುಣವಾಗಿ ಅಕ್ರಮ ವಲಸೆ ಮತ್ತು ಮಾನವ ಕಳ್ಳಸಾಗಣೆಯನ್ನು ತಡೆಯುವ ಕಟ್ಟುನಿಟ್ಟಿನ ಉದ್ದೇಶವನ್ನು ಈ ವಲಸೆ ಒಪ್ಪಂದ ಹೊಂದಿದೆ. ಅರ್ಹತೆಗೆ ಮತ್ತು ಪ್ರತಿಭೆಗೆ ಮಣೆಹಾಕುವ ಪಾರದರ್ಶಕ ವ್ಯವಸ್ಥೆ ಇಲ್ಲಿದೆ. ಯುವಜನರು ಪರಸ್ಪರರ ದೇಶಗಳಲ್ಲಿ ತಾತ್ಕಾಲಿಕ ಉದ್ಯೋಗವನ್ನು ಕೈಗೊಳ್ಳಲು ಯುವ ವೃತ್ತಿಪರರ ವಿನಿಮಯ ಒಪ್ಪಂದವು ಮುಕ್ತ ಅವಕಾಶ ಕಲ್ಪಿಸಿದೆ. ವಾರ್ಷಿಕವಾಗಿ ೩೦೦ ಯುವಜನರ ವಿನಿಮಯದೊಂದಿಗೆ ಆರಂಭವಾಗುವ ಈ ಯೋಜನೆ ಭವಿಷ್ಯದಲ್ಲಿ ೫೦೦ಕ್ಕೆ ಏರಿಕೆಯಾಗುವ ಸ್ಪಷ್ಟ ಅವಕಾಶವನ್ನು ಒಳಗೊಂಡಿದೆ. ಭಾರತೀಯ ಯುವಕರು ಜಾಗತಿಕ ಕಾರ್ಯಸಂಸ್ಕೃತಿಯನ್ನು ಅರಿಯಲು ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಭಾರತೀಯ ಬುದ್ಧಿಮತ್ತೆಯನ್ನು ಪಸರಿಸಲು ಈ ಒಪ್ಪಂದಗಳು ಬೃಹತ್ ಸೇತುವೆಯಾಗಿ ಕಾರ್ಯನಿರ್ವಹಿಸಲಿವೆ.
ಭಾರತೀಯ ಮತ್ತು ಸ್ವಿಸ್ ಸಂಶೋಧನಾ ಸಮುದಾಯಗಳ ನಡುವೆ ದೀರ್ಘಾವಧಿಯ ಸಹಕಾರವನ್ನು ಉತ್ತೇಜಿಸಲು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (DST) ಹಾಗೂ ಸ್ವಿಸ್ ನ್ಯಾಷನಲ್ ಸೈನ್ಸ್ ಫೌಂಡೇಶನ್ ನಡುವೆ ಮಹತ್ವದ ಒಪ್ಪಂದವೇರ್ಪಟ್ಟಿದೆ. ಬೌದ್ಧಿಕ ಆಸ್ತಿ ಹಕ್ಕುಗಳ ರಕ್ಷಣೆ ಮತ್ತು ಹೂಡಿಕೆ ಸಂರಕ್ಷಣಾ ಒಪ್ಪಂದವನ್ನು ಶೀಘ್ರವಾಗಿ ಮುಕ್ತಾಯಗೊಳಿಸುವ ಸ್ವಿಸ್ ಅಧ್ಯಕ್ಷರ ಒಲವು ಭಾರತದ ಪಾರದರ್ಶಕ ಆಡಳಿತ ವ್ಯವಸ್ಥೆಯ ಮೇಲಿರುವ ನಂಬಿಕೆಯ ದ್ಯೋತಕವಾಗಿದೆ.
ಭಾರತವು ಇಂದು ಜಾಗತಿಕ ನಿಯಮಗಳನ್ನು ಬರೆಯುವ ಮತ್ತು ಜಗತ್ತಿನ ಬಂಡವಾಳವನ್ನು ತನ್ನತ್ತ ಆಕರ್ಷಿಸುವ ಪ್ರಬಲ ಶಕ್ತಿ ಕೇಂದ್ರವಾಗಿದೆ. ನೂರು ಶತಕೋಟಿ ಡಾಲರ್ ಬಂಡವಾಳವು ಭಾರತದ ಉಜ್ವಲ ಭವಿಷ್ಯದ, ಸುಭದ್ರ ಆರ್ಥಿಕತೆಯ ಬಲಿಷ್ಠ ಅಡಿಪಾಯವಾಗಿದೆ. ನವದೆಹಲಿಯು ಜಾಗತಿಕ ರಾಜಕಾರಣ ಮತ್ತು ಆರ್ಥಿಕತೆಯ ಹೊಸ ಭವಿಷ್ಯವನ್ನು ಬರೆಯಲು ಸಂಪೂರ್ಣವಾಗಿ ಸಜ್ಜಾಗಿದೆ.

ಶಿವರಾಜ ಸೂ. ಸಣಮನಿ, ಮದಗುಣಕಿ