Shubhashaya News

ರಿಂಗ್ ರಸ್ತೆ ಕಾರ್ಯ ವಿಳಂಬ: ಎನ್.ಎಚ್.ಎ.ಐ ಅಧಿಕಾರಿಗೆ ತಹಶೀಲ್ದಾರ ನೋಟಿಸ್

ಕಲಬುರಗಿ: ಕಲಬುರಗಿ ನಗರದ ಸುತ್ತ ಮುತ್ತಲಿನ ರಿಂಗ್ ರಸ್ತೆಯ ಸರ್ವಿಸ್ ರಸ್ತೆ ಕಾಮಗಾರಿಯು ಒಂದು ವರ್ಷದಿಂದ ಅಪೂರ್ಣವಾಗಿಯೇ ಉಳಿದಿದ್ದರಿಂದ ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ತೊಂದರೆ ಉಂಟು ಮಾಡುತ್ತಿದ್ದು, ಕೂಡಲೆ ಕಾಮಗಾರಿ ಪೂರ್ಣಗೊಳಿಸುವಂತೆ ಕಲಬುರಗಿ ತಹಶೀಲ್ದಾರ ಕೆ.
ಆನಂದಶೀಲ ಅವರು ಎನ್.ಎಚ್.ಎ.ಐ. ಕಲಬುರಗಿ ಯೋಜನಾ ನಿರ್ದೇಶಕರಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಪಕ್ಕದ ಸೇವಾ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸುವಲ್ಲಿನ ದೀರ್ಘಕಾಲದಿಂದ ವಿಳಂಬದಿಂದ ವಾಹನಗಳು ಮತ್ತು ಸಾರ್ವಜನಿಕರ ಸಂಚಾರಕ್ಕೆ ಗಂಭೀರ ಅಡಚಣೆಯನ್ನುಂಟು ಮಾಡಿದಲ್ಲದೆ ಕಳೆದ ವರ್ಷದಲ್ಲಿ ಹಲವಾರು ಅಪಘಾತಗಳಿಗೆ ಕಾರಣವಾಗಿದ್ದರಿಂದ‌ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಎನ್.ಎಚ್.ಎ.ಐ. ಅಧಿಕಾರಿಗೆ ತಹಶೀಲ್ದಾರರು ನೋಟಿಸ್ ಜಾರಿಗೊಳಿಸಿದ್ದಾರೆ.

ವಿಶೇಷವಾಗಿ ಹಾಗರ್ಗಾ ರಿಂಗ್ ರಸ್ತೆ ಕ್ರಾಸ್, ಹುಮನಾಬಾದ್ ರಿಂಗ್ ರಸ್ತೆ ಕ್ರಾಸ್, ಆಜಾದಾಪುರ ರಿಂಗ್ ರಸ್ತೆ ಕ್ರಾಸ್ ಮತ್ತು ಸೇಡಂ ರಿಂಗ್ ರಸ್ತೆ ಕ್ರಾಸ್‌ಗಳಲ್ಲಿ ಸಮರ್ಪಕ ಸರ್ವಿಸ್ ರಸ್ತೆ ಇಲ್ಲದ ಕಾರಣಕ್ಕಾಗಿ ಸಾರ್ವಜನಿಕರ ಸುರಕ್ಷತೆಗೆ ಗಂಭೀರ ಅಪಾಯವನ್ನುಂಟು ಮಾಡುತ್ತಿದೆ ಎಂದು ನೋಟಿಸ್ ನಲ್ಲಿ ತಹಶೀಲ್ದಾರರು ತಿಳಿಸಿದ್ದಾರೆ.

ಸುಗಮ‌ ಸಂಚಾರಕ್ಕೆ ಸರ್ವಿಸ್ ರಸ್ತೆಯಲ್ಲಿನ ಅಡಚಣೆ ಮತ್ತು ತೊಡಕುಗಳನ್ನು ನಿವಾರಿಸಿ ಬಾಕಿ ಇರುವ ರಸ್ತೆ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಸಾರ್ವಜನಿಕರ ಮುಕ್ತ‌ ಸಂಚಾರ ಖಚಿತಪಡಿಸಿಕೊಳ್ಳುವಂತೆ ಸೂಚಿಸಿದಲ್ಲದೆ ಕೈಗೊಂಡ ಕ್ರಮದ ಕುರಿತು ಅಕ್ಟೋಬರ್ 3ರ ಮಧ್ಯಾಹ್ನ 3 ಗಂಟೆ ಒಳಗಾಗಿ ಅನುಸರಣಾ ವರದಿ ಸಲ್ಲಿಸುವಂತೆ ನೋಟಿಸ್ ನಲ್ಲಿ ಸೂಚಿಸಲಾಗಿದೆ.

Leave A Reply

Your email address will not be published.