ಜೇವರ್ಗಿ: ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಆಡಳಿತಾವಧಿಯಲ್ಲಿ ಜಾರಿಗೆ ತಂದ ‘ಉಳುವವನೇ ಭೂಮಿಯ ಒಡೆಯ’ ಕಾಯ್ದೆ ಲಕ್ಷಾಂತರ ಬಡ ಕುಟುಂಬಗಳಿಗೆ ಭೂಮಿಯ ಒಡೆತನ ಕಲ್ಪಿಸಿ ಬದುಕಿಗೆ ಆಧಾರವಾಗಿದೆ. ಈ ಮಹತ್ವದ ಯೋಜನೆಯನ್ನು ಸರ್ಕಾರ, ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಸಮರ್ಪಕವಾಗಿ ಜಾರಿಗೊಳಿಸುವ ಮೂಲಕ ಅರ್ಹ ಫಲಾನುಭವಿಗಳಿಗೆ ನ್ಯಾಯ ಒದಗಿಸಬೇಕು ಎಂದು ಮಾಜಿ ಜಿಪಂ ಸದಸ್ಯ ಹಾಗೂ ಅಕ್ರಮ-ಸಕ್ರಮ ಸಮಿತಿ ಅಧ್ಯಕ್ಷ ಚಂದ್ರಶೇಖರ ಹರನಾಳ ಆಗ್ರಹಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ. ದೇವರಾಜ ಅರಸು ಅವರು ದೀನದಲಿತರು, ಹಿಂದುಳಿದ ವರ್ಗಗಳು ಹಾಗೂ ಬಡವರ ಪರವಾಗಿ ಸಮಾಜಮುಖಿ ಆಡಳಿತ ನಡೆಸಿದ್ದರು. ಅವರ ಅವಧಿಯಲ್ಲಿ ಜಾರಿಗೆ ಬಂದ ‘ಉಳುವವನೇ ಭೂಮಿಯ ಒಡೆಯ’ ಕಾಯ್ದೆಯಿಂದ ರಾಜ್ಯದಾದ್ಯಂತ ಲಕ್ಷಾಂತರ ಬಡ ರೈತರು ಭೂಮಿಯ ಮಾಲೀಕರಾಗಲು ಸಾಧ್ಯವಾಯಿತು ಎಂದು ಹೇಳಿದರು.
ಜೇವರ್ಗಿ ತಾಲೂಕಿನಲ್ಲಿ ಹಲವು ವರ್ಷಗಳಿಂದ ಅಕ್ರಮ-ಸಕ್ರಮಕ್ಕೆ ಸಂಬಂಧಿಸಿದ ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದಿವೆ. ಇಂತಹ ಅರ್ಜಿಗಳನ್ನು ಅಕ್ರಮ-ಸಕ್ರಮ ಸಮಿತಿ ಮೂಲಕ ಶೀಘ್ರ ಪರಿಶೀಲನೆ ನಡೆಸಿ, ಅರ್ಹ ಹಾಗೂ ನೈಜ ಫಲಾನುಭವಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲಾಗುವುದು ಎಂದು ಅವರು ತಿಳಿಸಿದರು.
ಈ ಹಿಂದೆ ತಾಲೂಕು ಆಡಳಿತದ ವತಿಯಿಂದ ಫಾರಂ ನಂ. 50, 53 ಹಾಗೂ 57ರಡಿ ಸಲ್ಲಿಕೆಯಾಗಿದ್ದ ಹಲವು ಅರ್ಜಿಗಳನ್ನು ಸಮರ್ಪಕವಾಗಿ ಪರಿಶೀಲಿಸದ ಕಾರಣ ಅನೇಕ ಬಡ ಅರ್ಜಿದಾರರಿಗೆ ಸಾಗುವಳಿ ಚೀಟಿ ನೀಡಿಲ್ಲ. ಅಲ್ಲದೆ, ಅರ್ಹರಿಗೆ ಪಹಣಿ ಮಾಡಿಸಿಕೊಡುವಲ್ಲಿಯೂ ವಿಳಂಬವಾಗಿದೆ. ಈ ಸಮಸ್ಯೆಯನ್ನು ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಕೂಡಲೇ ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ಬಡವರು ಹಾಗೂ ಭೂಹೀನರು ಹಲವು ವರ್ಷಗಳಿಂದ ತಮ್ಮ ಹಕ್ಕಿಗಾಗಿ ಕಾಯುತ್ತಿದ್ದಾರೆ. ಅವರ ಅರ್ಜಿಗಳನ್ನು ವಿಳಂಬ ಮಾಡದೆ ನಿಯಮಾನುಸಾರ ವಿಲೇವಾರಿ ಮಾಡುವ ಮೂಲಕ ಸರ್ಕಾರದ ಯೋಜನೆಯ ಉದ್ದೇಶವನ್ನು ಸಾಕಾರಗೊಳಿಸಬೇಕು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸುಭಾಷ ಚನ್ನೂರ, ಭೀಮರಾಯ ನಗನೂರ, ವಿಶ್ವರಾಧ್ಯ ಗಂವ್ಹಾರ, ರವಿ ಕುಳಗೇರಿ, ಶ್ರೀಹರಿ ಕರಕಳ್ಳಿ, ಮಹೇಶ ಕೊಕಿಲೆ, ಸಿದ್ದು ಕೇರೂರ, ಮಲ್ಲಿಕಾರ್ಜುನ ಸಾತಖೇಡ, ಮರೆಪ್ಪ ಜನಿವಾರ, ರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು.