ಕಲ್ಯಾಣ ಭಾಗದ ಅಭ್ಯರ್ಥಿಗಳಿಗೆ ಆರ್.ಪಿ.ಸಿ ಹುದ್ದೆಗೂ ಅರ್ಜಿ ಸಲ್ಲಿಸಲು ಅವಕಾಶ ನೀಡಿ:
ನೇಮಕಾತಿ ನಿಯಮದಲ್ಲಿ ತಿದ್ದುಪಡಿ ಮಾಡುವಂತೆ ಉಪನ್ಯಾಸಕರ ಸಂಘದ ಆಗ್ರಹ
ಕಲಬುರಗಿ: ಕಲ್ಯಾಣ ಕರ್ನಾಟಕದ ಅರ್ಹ ಅಭ್ಯರ್ಥಿಗಳಿಗೆ ಪದವಿಪೂರ್ವ ಶಿಕ್ಷಣ ಇಲಾಖೆಯ ಗ್ರೂಪ್-ಎ ಪ್ರಾಂಶುಪಾಲರ ಹುದ್ದೆಗಳ ನೇರ ನೇಮಕಾತಿಯಲ್ಲಿ ಕಲ್ಯಾಣ ಕರ್ನಾಟಕ (KK) ಹುದ್ದೆಗಳ ಜೊತೆಗೆ, ನಿಯಮಾನುಸಾರ RPC (Residual Parent Cadre) ಹುದ್ದೆಗಳಿಗೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಬೇಕು ಎಂದು ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಎನ್.ಟಿ. ರಂಗೋಲಿ ಆಗ್ರಹಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಸೆ.7ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವತಿಯಿಂದ ಶಾಲಾ ಶಿಕ್ಷಣ ಇಲಾಖೆಯ (ಪದವಿಪೂರ್ವ) ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಅರ್ಹ ಉಪನ್ಯಾಸಕರಿಗೆ ಗ್ರೂಪ್-ಎ ಪ್ರಾಂಶುಪಾಲರ ವೃಂದದ ಹುದ್ದೆಗಳ ನೇರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆದರೆ, ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ (KK) ಅಭ್ಯರ್ಥಿಗಳು KK ಹುದ್ದೆಗಳಿಗೆ ಮಾತ್ರ ಅರ್ಜಿ ಸಲ್ಲಿಸಬೇಕು ಹಾಗೂ Non-HK/RPC ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿಲ್ಲ. ಇದರಿಂದ ಕಲ್ಯಾಣ ಕರ್ನಾಟಕದ ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಪ್ರದೇಶದ ಅಭ್ಯರ್ಥಿಗಳು ಸಂವಿಧಾನದ 371(ಜೆ) ಅಡಿಯಲ್ಲಿ ವಿಶೇಷ ಸ್ಥಾನಮಾನ ಹಾಗೂ ಮೀಸಲಾತಿಯ ಸಾಂವಿಧಾನಿಕ ಸೌಲಭ್ಯವನ್ನು ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ಅಭ್ಯರ್ಥಿಗಳಿಗೆ ಈ ಭಾಗದ ಹುದ್ದೆಗಳ ಜೊತೆಗೆ, ತಮ್ಮ ಅರ್ಹತೆ, ಸೇವಾ ಹಿರಿತನ ಹಾಗೂ ನೇಮಕಾತಿ ನಿಯಮಗಳಿಗೆ ಅನುಗುಣವಾಗಿ ಲಭ್ಯವಿರುವ ಆರ್.ಪಿ.ಸಿ ಹುದ್ದೆಗಳಿಗೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದರು.
371(ಜೆ) ಅಡಿಯಲ್ಲಿ ಕಲ್ಯಾಣ ಕರ್ನಾಟಕ ಮೀಸಲಾತಿಯ ಸೌಲಭ್ಯ ಪಡೆಯುವ ಹಕ್ಕು ಹೊಂದಿದ್ದರೂ, ಮತ್ತೊಂದೆಡೆ ರಾಜ್ಯಮಟ್ಟದ ಆರ್.ಪಿ.ಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅವಕಾಶವನ್ನು ನಿರ್ಬಂಧಿಸಿರುವುದು ಅರ್ಹ ಅಭ್ಯರ್ಥಿಗಳಿಗೆ ಅನಾನುಕೂಲ ಉಂಟುಮಾಡಿದೆ ಎಂದು ರಂಗೋಲಿ ತಿಳಿಸಿದರು.
ಕಲ್ಯಾಣ ಕರ್ನಾಟಕ ನಿವಾಸಿ ಪ್ರಮಾಣಪತ್ರ ಹಾಗೂ ಆದಾಯ ಪ್ರಮಾಣಪತ್ರ (ನಮೂನೆ-ಹೆಚ್) ಪಡೆಯಲು ಕಂದಾಯ ಇಲಾಖೆಯಲ್ಲಿ ಸಾಮಾನ್ಯವಾಗಿ 15ರಿಂದ 20 ದಿನಗಳ ಕಾಲಾವಕಾಶ ಬೇಕಾಗುವುದರಿಂದ, ನೇಮಕಾತಿಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ವಿಸ್ತರಿಸಬೇಕು. ಅರ್ಹ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅವಕಾಶ ವಂಚನೆಯಾಗದಂತೆ KEA ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳ್ಳುಂಡಗಿ, ಧರ್ಮರಾಜ ಜವಳಿ, ಸವಿತಾ ನಾಸಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.