ಸಿದ್ದರಾಮಯ್ಯ ಮೂರ್ತಿ ತೆರವು ಖಂಡಿಸಿ ‘ಕಲಬುರಗಿ ಚಲೋ’ ಪ್ರತಿಭಟನೆ
ಮಹಾನಗರ ಪಾಲಿಕೆ, ಜಿಲ್ಲಾಡಳಿತದ ವಿರುದ್ಧ ಕುರುಬ ಸಮಾಜದ ಆಕ್ರೋಶ
ಕಲಬುರಗಿ:ಇತ್ತೀಚೆಗೆ ಹೈಕೋರ್ಟ್ ಕ್ರಾಸ್ ಸಮೀಪ ಸ್ಥಾಪಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೂರ್ತಿ ತೆರವುಗೊಳಿಸಿರುವುದನ್ನು ಖಂಡಿಸಿ ಕರ್ನಾಟಕ ಪ್ರದೇಶ ಕುರುಬರ ಸಂಘದ ವತಿಯಿಂದ ಮಂಗಳವಾರ ನಗರದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಯಿತು. ‘ಕಲಬುರಗಿ ಚಲೋ’ ಹೆಸರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಬೀದರ್, ಯಾದಗಿರಿ ಹಾಗೂ ಕಲಬುರಗಿ ಜಿಲ್ಲೆಯ ವಿವಿಧ ತಾಲೂಕುಗಳಿಂದ ಸಹಸ್ರಾರು ಮಂದಿ ಪಾಲ್ಗೊಂಡು ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಸೂಪರ್ ಮಾರ್ಕೆಟ್ ಪ್ರದೇಶದಲ್ಲಿರುವ ಸಂಗೊಳ್ಳಿ ರಾಯಣ್ಣ ಪ್ರತಿಮೆಯಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿವರೆಗೆ ನಡೆಯಿತು. ಮೆರವಣಿಗೆಯುದ್ದಕ್ಕೂ ಡೊಳ್ಳು, ತಮಟೆ, ತಾಳ ಸೇರಿದಂತೆ ವಿವಿಧ ವಾದ್ಯಗಳೊಂದಿಗೆ ಪ್ರತಿಭಟನಾಕಾರರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಪ್ರತಿಭಟನಾಕಾರರು ಮಾತನಾಡಿ, ಸಿದ್ದರಾಮಯ್ಯ ಅವರ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ಕೋರಿ ಮಹಾನಗರ ಪಾಲಿಕೆಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಅನುಮತಿ ನೀಡಿಲ್ಲ. ಮೂರ್ತಿ ಸ್ಥಾಪಿಸಲಾಗಿದ್ದ ಸ್ಥಳದಲ್ಲಿ ‘ಸಿದ್ದರಾಮಯ್ಯ ಸರ್ಕಲ್’ ಎಂಬ ಬ್ಯಾನರ್ ಅಳವಡಿಸಲಾಗಿತ್ತು. ಆದರೆ ಇತ್ತೀಚೆಗೆ ಪಾಲಿಕೆ ಅಧಿಕಾರಿಗಳು ಬ್ಯಾನರ್ ಹಾಗೂ ಮೂರ್ತಿಯನ್ನು ತೆರವುಗೊಳಿಸಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಘದ ರಾಜ್ಯ ನಿರ್ದೇಶಕ ಬಿ.ಟಿ. ಜಗದೀಶ್ ಮಾತನಾಡಿ, ಮೂರ್ತಿ ಸ್ಥಾಪನೆ ಕಾನೂನುಬಾಹಿರವಾಗಿದ್ದರೆ ಕೂಡಲೇ ಗೌರವಯುತವಾಗಿ ತೆರವುಗೊಳಿಸಬೇಕಿತ್ತು. ಆದರೆ ಪಾಲಿಕೆ ಅಧಿಕಾರಿಗಳು ಅಗೌರವದ ರೀತಿಯಲ್ಲಿ ಮೂರ್ತಿ ತೆರವುಗೊಳಿಸಿದ್ದಾರೆ ಎಂದು ಆರೋಪಿಸಿದರು. ತೆರವುಗೊಳಿಸಿದ ಸ್ಥಳದಲ್ಲೇ 15 ದಿನಗಳೊಳಗೆ ಮೂರ್ತಿಯನ್ನು ಪುನಃ ಪ್ರತಿಷ್ಠಾಪಿಸಬೇಕು. ಇಲ್ಲವಾದರೆ ಮುಂದಿನ ಹಂತದಲ್ಲಿ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸಂಘದ ಖಜಾಂಚಿ ಕೃಷ್ಣಮೂರ್ತಿ ಮಾತನಾಡಿ, ಮೂರ್ತಿ ತೆರವುಗೊಳಿಸಿದ ಬಳಿಕ ಸಮುದಾಯದ ಮುಖಂಡರನ್ನು ಕರೆದು ಚರ್ಚಿಸಿ ಸಮಸ್ಯೆ ಬಗೆಹರಿಸಬೇಕಿತ್ತು. ಆದರೆ ಸರ್ಕಾರ ಈ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. ನಗರದಲ್ಲಿ ಹಲವು ಪ್ರತಿಮೆಗಳು ಅನಾವರಣಗೊಂಡಿದ್ದು, ಅವುಗಳಿಗೆ ಅಗತ್ಯ ಅನುಮತಿ ಇದೆಯೇ ಎಂಬುದನ್ನು ಅಧಿಕಾರಿಗಳು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ಅಮೃತರಾವ್ ಚಿನಕೋಡ ಸೇರಿದಂತೆ ಹಲವರು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು. ಕನಕ ಗುರುಪೀಠದ ಶ್ರೀಗಳು, ಸಂಘದ ರಾಜ್ಯ ಅಧ್ಯಕ್ಷ ಎಂ.ಈರಣ್ಣ, ಸೋಮಣ್ಣ, ಬಸವರಾಜ ಮುದ್ರಿಕಿ, ರಾಜು ನಾಗೂರ, ಫಸಲಗುಂದಿ, ಮಹಾಂತೇಶ ಕೌಲಗಿ, ಗಣಪತಿ, ಮಲ್ಲಣ್ಣ ಕುರುಡಗಿ, ರಾಯಗೊಂಡ, ನಾಗೇಶ್ ಮುಚ್ಚಕೇಡ, ಅಮೋಘಸಿದ್ದ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಸಹಸ್ರಾರು ಸಂಖ್ಯೆಯ ಕುರುಬ ಸಮುದಾಯದ ಜನರು, ಸಿದ್ದರಾಮಯ್ಯನವರ ಅಭಿಮಾನಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.