ಸುಸ್ಥಿರ ಅಭಿವೃದ್ಧಿಗೆ ಸಾಮೂಹಿಕ ಪ್ರಯತ್ನ ಅಗತ್ಯ | ಹಸಿರು ತಂತ್ರಜ್ಞಾನ, ಮರುಬಳಕೆಗೆ ಆದ್ಯತೆ ನೀಡಲು ಕರೆ
ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ: ಪ್ರೊ. ಪುರುಷೋತ್ತಮ್ ರೆಡ್ಡಿ
ಆಳಂದ: ಸಿಯುಕೆ ಆಯೋಜಿಸಿದ್ದ ‘ಸ್ವಚ್ಛತಾ ಹೀ ಸೇವಾ–೨೦೨೬’ ಅಭಿಯಾನದಲ್ಲಿ ಪ್ರಾಧ್ಯಾಪಕ ಪ್ರೊ. ಕೆ. ಪುರುಷೋತ್ತಮ್ ರೆಡ್ಡಿ ಮಾತನಾಡಿದರು. ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಇತರರು ಇದ್ದರು.
ಆಳಂದ: ಪರಿಸರ ಸಂರಕ್ಷಣೆ ಹಾಗೂ ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆಗೆ ಪ್ರತಿಯೊಬ್ಬರೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಮುಂದಿನ ಪೀಳಿಗೆಗಾಗಿ ಪರಿಸರವನ್ನು ಉಳಿಸಲು ಸಾಮೂಹಿಕ ಪ್ರಯತ್ನ ಅಗತ್ಯ ಎಂದು ಹೈದರಾಬಾದ್‌ನ ಉಸ್ಮಾನಿಯಾ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ. ಕೆ. ಪುರುಷೋತ್ತಮ್ ರೆಡ್ಡಿ ಹೇಳಿದರು.
ಕಡಗಂಚಿ ಬಳಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ (ಸಿಯುಕೆ) ಮಂಗಳವಾರ ‘ಸ್ವಚ್ಛತಾ ಹೀ ಸೇವಾ–೨೦೨೬’ ಅಭಿಯಾನದ ಅಂಗವಾಗಿ ಆಯೋಜಿಸಿದ್ದ ‘ಪರಿಸರ ಮತ್ತು ಸುಸ್ಥಿರ ಅಭಿವೃದ್ಧಿ’ ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡಿದರು.
ಹವಾಮಾನ ಬದಲಾವಣೆ, ಹೆಚ್ಚುತ್ತಿರುವ ತಾಪಮಾನ ಮತ್ತು ಆರ್ದ್ರತೆ, ಜೀವವೈವಿಧ್ಯದ ನಷ್ಟ ಹಾಗೂ ಹೆಚ್ಚುತ್ತಿರುವ ಮಾಲಿನ್ಯ ಗಂಭೀರ ಪರಿಸರ ಸವಾಲುಗಳಾಗಿವೆ. ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಪರಿಸರ ಮಾಲಿನ್ಯ ಹೆಚ್ಚುತ್ತಿದ್ದು, ತಾಪಮಾನ ಮತ್ತು ಆರ್ದ್ರತೆಯ ಏರಿಕೆ ಮಾನವನ ಆರೋಗ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಅವರು ಎಚ್ಚರಿಸಿದರು.
ಪರಿಸರ ಸಂರಕ್ಷಣೆ ಹಾಗೂ ಸುಸ್ಥಿರ ಅಭಿವೃದ್ಧಿಗಾಗಿ ಹಸಿರು ಕಟ್ಟಡ, ಹಸಿರು ವಾಸ್ತುಶಿಲ್ಪ, ಮರುಬಳಕೆ, ಪುನರ್ಬಳಕೆ ಮತ್ತು ಸುಸ್ಥಿರ ತಂತ್ರಜ್ಞಾನಗಳಿಗೆ ಆದ್ಯತೆ ನೀಡಬೇಕು. ತ್ಯಾಜ್ಯ ನಿರ್ವಹಣೆ, ಸಾವಯವ ಉತ್ಪನ್ನಗಳು, ಮರುಬಳಕೆ ಹಾಗೂ ಸ್ವಚ್ಛ ತಂತ್ರಜ್ಞಾನ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳು ಹೊಸ ಉದ್ಯಮಶೀಲತಾ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪರಿಸರ ಸಮಸ್ಯೆಗಳಿಗೆ ಪರಿಣಾಮಕಾರಿ ಪರಿಹಾರ ಕಂಡುಕೊಳ್ಳಲು ಉದಯೋನ್ಮುಖ ತಂತ್ರಜ್ಞಾನ ಹಾಗೂ ಡಿಜಿಟಲ್ ವೇದಿಕೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ರಾಷ್ಟಿçÃಯ ಶಿಕ್ಷಣ ನೀತಿ–೨೦೨೦ರ ಆಶಯದಂತೆ ಸಂಕೀರ್ಣ ಪರಿಸರ ಸಮಸ್ಯೆಗಳಿಗೆ ಅಂತರಶಿಸ್ತೀಯ ಹಾಗೂ ಬಹುಶಿಸ್ತೀಯ ವಿಧಾನದಲ್ಲಿ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.
೧೯೭೨ರ ಸ್ಟಾಕ್‌ಹೋಮ್ ವಿಶ್ವಸಂಸ್ಥೆಯ ಮಾನವ ಪರಿಸರ ಸಮ್ಮೇಳನ, ವಿಶ್ವ ಪರಿಸರ ದಿನ, ೧೯೯೨ರ ರಿಯೊ ಭೂ ಶೃಂಗಸಭೆ ಸೇರಿದಂತೆ ಜಾಗತಿಕ ಪರಿಸರ ಸಂರಕ್ಷಣಾ ಚಳವಳಿಯ ಪ್ರಮುಖ ಮೈಲಿಗಲ್ಲುಗಳನ್ನು ಅವರು ವಿವರಿಸಿದರು. ಹವಾಮಾನ ಬದಲಾವಣೆ ಎದುರಿಸುವಲ್ಲಿ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಚೌಕಟ್ಟು ಸಮಾವೇಶ ಪಕ್ಷಗಳ ಸಮ್ಮೇಳನ ಹಾಗೂ ಹವಾಮಾನ ಬದಲಾವಣೆ ಕುರಿತ ಅಂತರಸರ್ಕಾರಿ ಸಮಿತಿ ಯ ಪಾತ್ರವನ್ನು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಿಯುಕೆ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಗಳಿಗೆ ಸೀಮಿತವಾಗದೆ ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಗೆ ಸಕ್ರಿಯವಾಗಿ ಕೊಡುಗೆ ನೀಡಬೇಕು. ನೈಸರ್ಗಿಕ ಸಂಪನ್ಮೂಲಗಳನ್ನು ಜವಾಬ್ದಾರಿಯುತವಾಗಿ ಬಳsi ಪರಿಸರ ಸಂರಕ್ಷಣೆಯ ಕುರಿತು ಜನರಲ್ಲಿ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.
ಡಾ. ಗಣಪತಿ ಬಿ. ಸಿನ್ನೂರು ಸ್ವಾಗತಿಸಿದರು. ಡಾ. ವೈಷ್ಣವಿ ನಾರಾಯಣಿ ನಿರೂಪಿಸಿ ವಂದಿಸಿದರು.
ಪ್ರೊ. ಬಸವರಾಜ ಕುಬಕಡ್ಡಿ, ಪ್ರೊ. ಪಾಂಡುರAಗ ಪತ್ತಿ, ಪ್ರೊ. ಮಹಮ್ಮದ್ ಅಸ್ಲಂ, ಪ್ರೊ. ಪ್ರಶಾಂತ್, ಪ್ರೊ. ದೇವರಾಜಪ್ಪ, ಡಾ. ರಂಗನಾಥ್ ಜಿ., ಡಾ. ಗೋವಿನಲ್ಲು ಮಹೇಂದ್ರ ರೆಡ್ಡಿ, ಡಾ. ಅರ್ಚನಾ ಕುಜೂರು, ಡಾ. ಅಶೋಕ್ ಕುಮಾರ್, ಡಾ. ಬಾಬು ನಲ್ಲಸ್ವಾಮಿ, ಡಾ. ತೇಜಸ್ವಿ ಲಕ್ಕುಂಡಿ, ಡಾ. ಅನಂತ ಚಿಂಚುರೆ, ಡಾ. ಶಶಿರೇಖಾ ಮಾಳಗಿ, ಡಾ. ಜಗದೀಶ್ ಚಂದ್ರ ಸೇರಿದಂತೆ ವಿವಿಧ ವಿಭಾಗಗಳ ಡೀನ್‌ಗಳು, ವಿಭಾಗ ಮುಖ್ಯಸ್ಥರು, ಬೋಧಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.