Shubhashaya News

ಕೆಬಿಎನ್ ವಿವಿಯಲ್ಲಿ ಫೋಲ್ಡ್‌ಸ್ಕೋಪ್ ತಂತ್ರಜ್ಞಾನ ಕಾರ್ಯಾಗಾರ

ಕಲಬುರಗಿ: ಇಲ್ಲಿನ ಖ್ವಾಜಾ ಬಂದಾನವಾಜ್ (ಕೆಬಿಎನ್) ವಿಶ್ವವಿದ್ಯಾಲಯದ ವಿಜ್ಞಾನ ನಿಕಾಯದ ಪ್ರಾಣಿಶಾಸ್ತ್ರ ಹಾಗೂ ಸಸ್ಯಶಾಸ್ತ್ರ ವಿಭಾಗಗಳ ಜಂಟಿ ಆಶ್ರಯದಲ್ಲಿ “ಫೋಲ್ಡ್‌ಸ್ಕೋಪ್: ಸೂಕ್ಷ್ಮಜಗತ್ತಿನ ಅನ್ವೇಷಣೆಗೆ ಕೈಗೆಟುಕುವ ಸಾಧನ” ಕುರಿತು ಬುಧವಾರ ವಿಶೇಷ ಕಾರ್ಯಾಗಾರ ಆಯೋಜಿಸಲಾಗಿತ್ತು.
ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಕುತೂಹಲ ಮೂಡಿಸುವುದು ಮತ್ತು ಕಡಿಮೆ ವೆಚ್ಚದ ಸೂಕ್ಷ್ಮದರ್ಶಕ ತಂತ್ರಜ್ಞಾನದ ಪ್ರಾಯೋಗಿಕ ಬಳಕೆಯ ಅರಿವು ಮೂಡಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ವಿವಿಯ ಗೌರವಾನ್ವಿತ ಉಪಕುಲಪತಿ ಪ್ರೊ. ಸೈಯದ್ ಅಶ್ಫಾಕ್ ಅಹ್ಮದ್, “ಪ್ರಾಯೋಗಿಕ ಕಲಿಕೆ ಹಾಗೂ ಸೂಕ್ಷ್ಮ ಜಗತ್ತಿನ ಅನ್ವೇಷಣೆ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಚಿಂತನೆ ಬೆಳೆಸಲು ಪೂರಕ. ಇಂತಹ ಕೈಗೆಟುಕುವ ತಂತ್ರಜ್ಞಾನವನ್ನು ಪರಿಚಯಿಸುತ್ತಿರುವುದು ಅಭಿನಂದನೀಯ,” ಎಂದರು.
ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಡಾ. ಸುದರ್ಶನ್ ಅವರು ಫೋಲ್ಡ್‌ಸ್ಕೋಪ್‌ನ ತತ್ವ, ಕಾರ್ಯನಿರ್ವಹಣೆ ಮತ್ತು ಮಹತ್ವದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಸಸ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಸೈಯದ್ ಅಬ್ರಾರ್ ಉಪನ್ಯಾಸದ ಅಧ್ಯಕ್ಷತೆ ವಹಿಸಿದ್ದರು.
ವಿಶೇಷ ಉಪನ್ಯಾಸದ ನಂತರ ನಡೆದ ಪ್ರಾಯೋಗಿಕ ತರಬೇತಿಯಲ್ಲಿ ಡಾ. ಸುದರ್ಶನ್ ಅವರು ಫೋಲ್ಡ್‌ಸ್ಕೋಪ್ ಜೋಡಣೆ, ನಿರ್ವಹಣೆ ಹಾಗೂ ಸೂಕ್ಷ್ಮ ವೀಕ್ಷಣೆಯ ವಿಧಾನಗಳನ್ನು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು. ವಿದ್ಯಾರ್ಥಿಗಳು ಸ್ವತಃ ಸಾಧನ ಜೋಡಿಸಿ ವೀಕ್ಷಣೆ ಮಾಡುವ ಮೂಲಕ ನೇರ ಅನುಭವ ಪಡೆದುಕೊಂಡರು. ವಿಜ್ಞಾನ ವಿಭಾಗದ ಬೋಧಕರು ಹಾಗೂ ವಿದ್ಯಾರ್ಥಿಗಳು ಸೇರಿ ಒಟ್ಟು 105 ಜನರು ಸಕ್ರಿಯವಾಗಿ ಪಾಲ್ಗೊಂಡಿದ್ದರು.
ಆಮೀನಾ ಮೆಹ್ರೀನ್ ಮತ್ತು ಜೈನಬ್ ಫಾತಿಮಾ ನಿರೂಪಿಸಿದರು. ಖಿರಾಅತ್‌ನೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ರೊಮಾನಾ ಮಿರ್ಧೆ ಸ್ವಾಗತಿಸಿದರು. ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಹೀನಾ ಮುಬೀನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಸಾದಾತ್ ಅಲಿ ವಂದಿಸಿದರು.

Leave A Reply

Your email address will not be published.