Shubhashaya News

ಉಚಿತ ಆಯುರ್ವೇದ, ಪಂಚಕರ್ಮ ಆರೋಗ್ಯ ಶಿಬಿರ

ಕಲಬುರಗಿ: ಆಯುರ್ವೇದ ದಿನಾಚರಣೆ ಅಂಗವಾಗಿ ನಗರದ ಆನಂದ್ ಹೋಟೆಲ್‌ ಸಮೀಪದ ಎಸ್.ಬಿ. ಟೆಂಪಲ್ ರಸ್ತೆಯಲ್ಲಿರುವ ಡಾ. ಶೆಟ್ಟೀಸ್ ಆಯುರ್ ಕ್ಲಿನಿಕ್, ಆಯುರ್ವೇದ ಮತ್ತು ಪಂಚಕರ್ಮ ಕೇಂದ್ರದಲ್ಲಿ ಉಚಿತ ಆಯುರ್ವೇದ ಹಾಗೂ ಪಂಚಕರ್ಮ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿತ್ತು.

ಶಿಬಿರದಲ್ಲಿ ಮಾತನಾಡಿದ ಡಾ. ರಕ್ಷಾ ಎಸ್. ಶೆಟ್ಟಿ, “ರೋಗ ಬಂದ ನಂತರ ಚಿಕಿತ್ಸೆ ಪಡೆಯುವುದಕ್ಕಿಂತ, ರೋಗನಿರೋಧಕ ಜೀವನಶೈಲಿ ಹಾಗೂ ಆರೋಗ್ಯಕರ ದಿನಚರಿಯನ್ನು ಅಳವಡಿಸಿಕೊಳ್ಳುವ ಮೂಲಕ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ. ಈ ನಿಟ್ಟಿನಲ್ಲಿ ಆಯುರ್ವೇದ ಮಹತ್ವದ ಪಾತ್ರ ವಹಿಸುತ್ತದೆ” ಎಂದು ತಿಳಿಸಿದರು.

ಶಿಬಿರದಲ್ಲಿ ಸಾರ್ವಜನಿಕರಿಗೆ ಉಚಿತ ಪ್ರಕೃತಿ ವಿಶ್ಲೇಷಣೆ ಹಾಗೂ ನಾಡಿ ಪರೀಕ್ಷೆ ನಡೆಸಲಾಯಿತು. ಮಧುಮೇಹ, ರಕ್ತದೊತ್ತಡ, ಸ್ಥೂಲಕಾಯ, ಸಂಧಿನೋವು, ಆತಂಕ, ಚರ್ಮರೋಗ ಸೇರಿದಂತೆ ವಿವಿಧ ಜೀವನಶೈಲಿ ಸಂಬಂಧಿತ ಸಮಸ್ಯೆಗಳ ಕುರಿತು ಆಯುರ್ವೇದ ವೈದ್ಯಕೀಯ ಸಲಹೆ ಹಾಗೂ ಮಾರ್ಗದರ್ಶನ ನೀಡಲಾಯಿತು.

ಅಭ್ಯಾಂಗ, ಶಿರೋಧಾರಾ, ನಸ್ಯ, ಕಟಿಬಸ್ತಿ ಸೇರಿದಂತೆ ವಿವಿಧ ಪಂಚಕರ್ಮ ಚಿಕಿತ್ಸೆಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು. ಅಲ್ಲದೆ, ಫ್ಯಾಟಿ ಲಿವರ್, ಕಾಮಾಲೆ ಹಾಗೂ ಇತರ ಯಕೃತ್‌ ಸಂಬಂಧಿತ ಸಮಸ್ಯೆಗಳಿಗೆ ಆಯುರ್ವೇದದಲ್ಲಿ ಲಭ್ಯವಿರುವ ಚಿಕಿತ್ಸಾ ವಿಧಾನಗಳು ಮತ್ತು ಲಿವರ್ ಡಿಟಾಕ್ಸ್ ಕುರಿತು ಜಾಗೃತಿ ಮೂಡಿಸಲಾಯಿತು.

6 ತಿಂಗಳಿಂದ 16 ವರ್ಷದೊಳಗಿನ ಮಕ್ಕಳಿಗೆ ನೀಡಲಾಗುವ ಸುವರ್ಣ ಬಿಂದು ಪ್ರಾಶನದ ಕುರಿತು ಪೋಷಕರಿಗೆ ಮಾಹಿತಿ ನೀಡಲಾಯಿತು. ಚರ್ಮದ ಕಪ್ಪುಕಲೆ, ಹೈಪರ್‌ಪಿಗ್ಮೆಂಟೇಶನ್ ಸೇರಿದಂತೆ ಸೌಂದರ್ಯ ಸಂಬಂಧಿತ ಸಮಸ್ಯೆಗಳು, ಅಜೀರ್ಣ, ಮಲಬದ್ಧತೆ ಹಾಗೂ ಮನೋವಿಕಾರಗಳಿಗೆ ಸಂಬಂಧಿಸಿದ ಆಯುರ್ವೇದ ಚಿಕಿತ್ಸಾ ವಿಧಾನಗಳ ಬಗ್ಗೆಯೂ ತಜ್ಞರಿಂದ ಮಾರ್ಗದರ್ಶನ ನೀಡಲಾಯಿತು.

ಶಿಬಿರದಲ್ಲಿ ಸತ್ಯನಾಥ ಶೆಟ್ಟಿ, ವನಿತಾ ಚಂದ್ರಕಾಂತ ಗುತೇದಾರ್, ಜ್ಯೋತಿ ಅರುಣಕುಮಾರ ಪಾಟೀಲ್, ಸ್ವಾತಿ ಮಾಲು ಹಾಗೂ ಡಾ. ಪಾರ್ವತಿ ಉಪಸ್ಥಿತರಿದ್ದರು.

Leave A Reply

Your email address will not be published.