ಆಳಂದ: ಪಟ್ಟಣದ ಪ್ರಸಿದ್ಧ ಸೂಫಿ ಸಂತ ಹಜರತ್ ಲಾಡ್ಲೆ ಮಶಾಕ್ ಅನ್ಸಾರಿ ಅವರ 671ನೇ ಉರುಸ್ ಮಹೋತ್ಸವದ ಅಂಗವಾಗಿ ಗಂಧೋತ್ಸವ (ಸಂದಲ್) ಹಾಗೂ ದೀಪೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಅತ್ಯಂತ ಸಡಗರ, ಸಂಭ್ರಮದಿಂದ ಜರುಗಿದವು.
ಕರ್ನಾಟಕ, ಮಹಾರಾಷ್ಟ್ರ, ಸೋಲಾಪುರ, ಹೈದರಾಬಾದ್ ಸೇರಿದಂತೆ ವಿವಿಧ ರಾಜ್ಯಗಳಿಂದ ಸಾವಿರಾರು ಭಕ್ತರು ಆಳಂದ ಪಟ್ಟಣಕ್ಕೆ ಆಗಮಿಸಿ ಉರುಸ್ ಮಹೋತ್ಸವದಲ್ಲಿ ಪಾಲ್ಗೊಂಡರು. ಇದರಿಂದ ಪಟ್ಟಣದಾದ್ಯಂತ ಭಕ್ತಿ, ಸೌಹಾರ್ದತೆ ಹಾಗೂ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು.
ಮಂಗಳವಾರ ಗಂಧೋತ್ಸವದ ಮೆರವಣಿಗೆಗೆ ಚಾಲನೆ ದೊರೆಯುತ್ತಿದ್ದಂತೆಯೇ ಗುಡುಗು-ಸಿಡಿಲಿನೊಂದಿಗೆ ಧಾರಾಕಾರ ಮಳೆ ಸುರಿಯಿತು. ಆದರೆ ಮಳೆಯೂ ಭಕ್ತರ ಉತ್ಸಾಹವನ್ನು ಕುಗ್ಗಿಸಲಿಲ್ಲ. ಸುರಿಯುವ ಮಳೆಯನ್ನೂ ಲೆಕ್ಕಿಸದೆ ಯುವಕರು ಹಾಗೂ ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿ, ದರ್ಗಾದ ಜಯಘೋಷದೊಂದಿಗೆ ಕುಣಿದು ಕುಪ್ಪಳಿಸಿದರು.
ಮುಂಬೈ ತಂಡದಿಂದ ಮನಸೂರೆಗೊಂಡ ಕವ್ವಾಲಿ:
ಸಂದಲ್ ಉತ್ಸವದ ಆರಂಭಕ್ಕೂ ಮುನ್ನ ತಾಲೂಕು ಆಡಳಿತ ಭವನದ ಆವರಣದಲ್ಲಿ ಮುಂಬೈನ ಇಪ್ತಿಖಾರ್ ಹಾಗೂ ತಂಡದವರಿಂದ ಕವ್ವಾಲಿ ಕಾರ್ಯಕ್ರಮ ನಡೆಯಿತು. ಭಕ್ತರನ್ನು ಸಂಗೀತದ ಮೂಲಕ ರಂಜಿಸಿದ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಯಿತು.
ಇದರೊಂದಿಗೆ ದರ್ಗಾ ಸಮಿತಿಯ ಮೌಲಾನಾಗಳ ನೇತೃತ್ವದಲ್ಲಿ ಸಾಂಪ್ರದಾಯಿಕ ಸಮಾ ಕಾರ್ಯಕ್ರಮ, ಪವಿತ್ರ ಕುರಾನ್ ಪಠಣ ಹಾಗೂ ಫಾತೇಹಾ ಖಾನಿ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು.
ತಾಲೂಕು ಆಡಳಿತ ಸಭಾಂಗಣದಲ್ಲಿ ತಹಶೀಲ್ದಾರ್ ಅಣ್ಣಾರಾವ್ ಪಾಟೀಲ ಅವರು ಸಾಂಪ್ರದಾಯಿಕ ಪೂಜೆ ನೆರವೇರಿಸಿದರು. ಬಳಿಕ ಪವಿತ್ರ ಸಂದಲ್ ಅನ್ನು ಸರ್ಕಾರಿ ವಾಹನದಲ್ಲಿ ಪಟ್ಟಣದ ಹಳೆಯ ತಹಶೀಲ್ದಾರ್ ಕಚೇರಿಗೆ ತರಲಾಯಿತು.
ಅಲ್ಲಿ ದರ್ಗಾ ಕಮಿಟಿ ಅಧ್ಯಕ್ಷ ಆಫಿಜ್ ಇದ್ರೀಸ್ ಅನ್ಸಾರಿ, ಸಾದತ್ ಅನ್ಸಾರಿ ಹಾಗೂ ಮೋಹಿಜ್ ಕಾರಬಾರಿ ಅವರಿಗೆ ಪವಿತ್ರ ಗಂಧವನ್ನು ಹಸ್ತಾಂತರಿಸುವ ಮೂಲಕ ಗಂಧೋತ್ಸವದ ಅಧಿಕೃತ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಹಳೆಯ ತಹಶೀಲ್ದಾರ್ ಕಚೇರಿಯಿಂದ ಆರಂಭವಾದ ಪವಿತ್ರ ಸಂದಲ್ ಮೆರವಣಿಗೆಯು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಹಜರತ್ ಲಾಡ್ಲೆ ಮಶಾಕ್ ದರ್ಗಾವನ್ನು ತಲುಪಿತು.
ಮೆರವಣಿಗೆಯ ವೈಭವ ಹೆಚ್ಚಿಸಲು ಸೋಲಾಪುರ ಹಾಗೂ ಹೈದರಾಬಾದ್‌ನಿಂದ ವಿಶೇಷ ಕಲಾ ತಂಡಗಳನ್ನು ಕರೆಸಲಾಗಿತ್ತು. ತೆರೆದ ವಾಹನಗಳಲ್ಲಿ ಕಲಾವಿದರು ಕವ್ವಾಲಿ ಹಾಡಿ ಭಕ್ತರನ್ನು ರಂಜಿಸಿದರೆ, ಡೋಲಕ್ ಸೇರಿದಂತೆ ವಿವಿಧ ವಾದ್ಯಗಳ ನಾದ ಮೆರವಣಿಗೆಗೆ ಮತ್ತಷ್ಟು ಮೆರುಗು ನೀಡಿತು.
ಉರುಸ್ ಹಿನ್ನೆಲೆಯಲ್ಲಿ ದರ್ಗಾ ಆವರಣ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ವರ್ಣರಂಜಿತ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ರಾತ್ರಿ ವೇಳೆಯಲ್ಲಿ ದರ್ಗಾ ಆವರಣವು ದೀಪಗಳ ಬೆಳಕಿನಲ್ಲಿ ಕಂಗೊಳಿಸಿತು.
ಇದೇ ಸಂದರ್ಭದಲ್ಲಿ ಪಟ್ಟಣದಲ್ಲಿ ಬೃಹತ್ ಬಜಾರ್ (ಉರುಸ್ ಮೇಳ) ಕೂಡ ಕಳೆಗಟ್ಟಿತ್ತು. ವಿವಿಧ ವಸ್ತುಗಳ ಮಳಿಗೆಗಳು, ವ್ಯಾಪಾರ ಮಳಿಗೆಗಳು ಹಾಗೂ ಮನರಂಜನಾ ವ್ಯವಸ್ಥೆಗಳು ಭಕ್ತರನ್ನು ಆಕರ್ಷಿಸಿದವು.
ಉರುಸ್ ಮಹೋತ್ಸವವನ್ನು ದರ್ಗಾ ಕಮಿಟಿ ಅಧ್ಯಕ್ಷ ಆಫಿಜ್ ಇದ್ರೀಸ್ ಅನ್ಸಾರಿ, ಉಪಾಧ್ಯಕ್ಷ ನೋಹಿದ್ ಅನ್ಸಾರಿ, ಯುನೂಸ್ ಅನ್ಸಾರಿ, ಖಮುರೋದ್ದೀನ್ ಅನ್ಸಾರಿ, ಕಾರ್ಯದರ್ಶಿ ರಬ್ಬಾನಿ ಅನ್ಸಾರಿ, ಖಜಾಂಚಿ ಮಜರ್ ಅನ್ಸಾರಿ ಸೇರಿದಂತೆ ಸಮಿತಿಯ ಪದಾಧಿಕಾರಿಗಳು, ವಿವಿಧ ಗಣ್ಯರು ಹಾಗೂ ಭಕ್ತರು ಒಗ್ಗೂಡಿ ಯಶಸ್ವಿಗೊಳಿಸಿದರು.