ಯಡ್ರಾಮಿ: ಪಟ್ಟಣದಲ್ಲಿ ಬುಧವಾರ ಸಂಜೆ ಸುರಿದ ಕೇವಲ ಅರ್ಧ ಗಂಟೆಯ ಮಳೆಗೆ ಹಲವು ರಸ್ತೆಗಳು ಜಲಾವೃತಗೊಂಡು, ಪಟ್ಟಣದ ಅವ್ಯವಸ್ಥಿತ ಚರಂಡಿ ವ್ಯವಸ್ಥೆ ಮತ್ತೊಮ್ಮೆ ಬಯಲಾಗಿದೆ.
ಪಟ್ಟಣದಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದಿರುವುದು ಹಾಗೂ ಇರುವ ಚರಂಡಿಗಳಲ್ಲಿ ಹೂಳು, ಕಸ ಮತ್ತು ತ್ಯಾಜ್ಯ ತುಂಬಿಕೊಂಡಿರುವುದರಿಂದ ಮಳೆ ನೀರು ಸರಾಗವಾಗಿ ಹರಿದುಹೋಗದೆ ರಸ್ತೆಗಳ ಮೇಲೆಯೇ ನಿಂತುಕೊಂಡಿತು. ಇದರಿಂದ ಹಲವು ಪ್ರಮುಖ ರಸ್ತೆಗಳು ಕೆರೆಯಂತಾಗಿದ್ದವು.
ಪಟ್ಟಣದ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ಮನೆಗಳತ್ತ ಹರಿದು, ಕೆಲ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ನಿವಾಸಿಗಳು ಪರದಾಡುವಂತಾಯಿತು. ಮನೆಗಳಿಗೆ ನೀರು ನುಗ್ಗಿದ್ದರಿಂದ ನಿವಾಸಿಗಳು ತಮ್ಮ ವಸ್ತುಗಳನ್ನು ರಕ್ಷಿಸಿಕೊಳ್ಳಲು ಹರಸಾಹಸಪಟ್ಟರು. ರಸ್ತೆಗಳ ಮೇಲೆ ನೀರು ನಿಂತಿದ್ದರಿಂದ ವಾಹನ ಸವಾರರು ಹಾಗೂ ಪಾದಚಾರಿಗಳ ಸಂಚಾರಕ್ಕೂ ತೀವ್ರ ತೊಂದರೆ ಉಂಟಾಯಿತು.
ಪ್ರತಿ ಬಾರಿ ಮಳೆ ಬಂದಾಗಲೂ ಇದೇ ಸಮಸ್ಯೆ ಮರುಕಳಿಸುತ್ತಿದ್ದು, ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಮಳೆ ನೀರು ಸರಾಗವಾಗಿ ಹರಿದುಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಈಗಾಗಲೇ ನಿರ್ಮಿಸಲಾಗಿರುವ ಚರಂಡಿಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ, ಹೂಳು ಹಾಗೂ ಕಸ ತೆರವುಗೊಳಿಸುವ ಮೂಲಕ ಮಳೆ ನೀರು ಸರಾಗವಾಗಿ ಹರಿಯುವಂತೆ ಶಾಶ್ವತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ಯಾಮ ಭಜಂತ್ರಿ, “ಯಡ್ರಾಮಿ ಪಟ್ಟಣದಲ್ಲಿ ಮಳೆ ನೀರು ರಸ್ತೆಗಳ ಮೇಲೆ ನಿಂತಿರುವ ವಿಷಯ ನಮ್ಮ ಗಮನಕ್ಕೆ ಬಂದ ತಕ್ಷಣ ನಾನು ಹಾಗೂ ಮೇಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇವೆ. ಮಳೆ ನೀರು ನಿಲ್ಲದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಕುರಿತು ಅಗತ್ಯ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.