ಕಲಬುರಗಿ: ಆಯುರ್ವೇದವು ಕೇವಲ ಒಂದು ಚಿಕಿತ್ಸಾ ಪದ್ಧತಿಯಲ್ಲ, ಅದು ನಮ್ಮ ದೈನಂದಿನ ಆಹಾರ, ಆರೋಗ್ಯಕರ ಜೀವನಶೈಲಿ ಮತ್ತು ಸಂಪ್ರದಾಯದ ಅವಿಭಾಜ್ಯ ಭಾಗವಾಗಿದೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಅರುಣಕುಮಾರ ಎಂ.ವೈ. ಪಾಟೀಲ ಹೇಳಿದರು.
ನಗರದ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆಯುಷ್ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ “ಆರೋಗ್ಯಕರ ನಾಳೆಗಳಿಗಾಗಿ ಆಯುರ್ವೇದ” ಎಂಬ ಘೋಷವಾಕ್ಯದ 11ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಉತ್ತರ ಕರ್ನಾಟಕದ ಸಾಂಪ್ರದಾಯಿಕ ಆಹಾರ ಪದ್ಧತಿಯಾದ ರೊಟ್ಟಿ, ತರಕಾರಿ ಸೇರಿದಂತೆ ಸ್ಥಳೀಯ ಆಹಾರಗಳು ಪೌಷ್ಟಿಕ ಹಾಗೂ ಆರೋಗ್ಯಕರವಾಗಿವೆ. ಇಂತಹ ನೈಸರ್ಗಿಕ ಆಹಾರ ಪದ್ಧತಿಯನ್ನು ಉತ್ತೇಜಿಸುವ ಅಗತ್ಯವಿದೆ. ವಿದ್ಯಾರ್ಥಿಗಳಲ್ಲಿ ಚಿಕ್ಕ ವಯಸ್ಸಿನಿಂದಲೇ ಆರೋಗ್ಯಕರ ಆಹಾರ ಮತ್ತು ಜೀವನಶೈಲಿಯ ಅರಿವು ಮೂಡಿಸಬೇಕು. ‘ಏನು ತಿನ್ನಬೇಕು, ಏನು ತಿನ್ನಬಾರದು’ ಎಂಬುದರ ಕುರಿತು ಶಾಲಾ ಹಂತದಲ್ಲೇ ಅರಿವು ಮೂಡಿಸಲು ಪಠ್ಯಪುಸ್ತಕಗಳಲ್ಲಿ ಅಗತ್ಯ ಮಾಹಿತಿಯನ್ನು ಅಳವಡಿಸಲು ಆಯುಷ್ ಇಲಾಖೆಯ ಉನ್ನತಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಮಾರುಕಟ್ಟೆಯಲ್ಲಿ ದೊರೆಯುವ ಅನಗತ್ಯ ಬೇಕರಿ ಉತ್ಪನ್ನಗಳು, ಚಿಪ್ಸ್, ಚಾಕೊಲೇಟ್ ಹಾಗೂ ಜಂಕ್‌ಫುಡ್‌ಗಳ ಅತಿಯಾದ ಸೇವನೆಯಿಂದ ದೂರವಿದ್ದು, ನೈಸರ್ಗಿಕ ಆಹಾರಕ್ಕೆ ಆದ್ಯತೆ ನೀಡಬೇಕು. ಸಮಯಕ್ಕೆ ಸರಿಯಾಗಿ ಆಹಾರ ಸೇವನೆ, ನಿಯಮಿತ ವ್ಯಾಯಾಮ, ಧ್ಯಾನ ಸೇರಿದಂತೆ ಆರೋಗ್ಯಕರ ದಿನಚರಿಯನ್ನು ರೂಢಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಆಯುಷ್ ನೌಕರರ ಸಂಘದ ರಾಜ್ಯಾಧ್ಯಕ್ಷ ಶ್ರೀಶೈಲ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಆಯುರ್ವೇದವು ಕೇವಲ ವೈದ್ಯಕೀಯ ಪದ್ಧತಿಯಲ್ಲ. ಅದು ಸಂಪ್ರದಾಯ, ಜ್ಞಾನ ಮತ್ತು ವಿಜ್ಞಾನದ ಸಮ್ಮಿಳನದೊಂದಿಗೆ ರೂಪುಗೊಂಡಿರುವ ಸಮಗ್ರ ಜೀವನ ಪದ್ಧತಿಯಾಗಿದೆ ಎಂದು ಹೇಳಿದರು.
ಸೆಂಟ್ ಜಾನ್ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ. ಮಲ್ಲಾರಾವ್ ಮಲ್ಲೆ ಮಾತನಾಡಿ, ಮಾನವ ದೇಹದ ಆರೋಗ್ಯವು ನಾವು ಅನುಸರಿಸುವ ಸಮಯಪಾಲನೆ ಮತ್ತು ಜೀವನಶೈಲಿಯನ್ನು ಅವಲಂಬಿಸಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಲಬುರಗಿಯ ಶ್ರೀ ಬಸವೇಶ್ವರ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ರಸಶಾಸ್ತ್ರದ ಪ್ರಾಧ್ಯಾಪಕಿ ಡಾ. ಜಯಲಕ್ಷ್ಮಿ ಹಾಗೂ ಸಹ ಪ್ರಾಧ್ಯಾಪಕಿ ಡಾ. ಸಹನಾ ಅವರು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶರಣಬಸಪ್ಪ ಕ್ಯಾತನಾಳ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಲಕ್ಷ್ಮಣ ಶೃಂಗೇರಿ, ಆಯುಷ್ ಇಲಾಖೆಯ ವಿವಿಧ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಹಾಗೂ ನರ್ಸಿಂಗ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಡಾ. ಅರುಂಧತಿ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಆಯುಷ್ ಪ್ರಭಾರ ಅಧಿಕಾರಿ ಡಾ. ರವೀಂದ್ರ ಸಿ. ಹೂಗಾರ ಸ್ವಾಗತಿಸಿದರು. ಡಾ. ರಾಜೇಶ್ವರಿ ವಂದಿಸಿದರು.