Shubhashaya News

ಯುವ ಜನತೆಗೆ ಪ್ರಜಾಪ್ರಭುತ್ವದ ವಿಚಾರದಾರೆ ತಲುಪಿಸಿ: ಇಕ್ರಮ್ ಶರೀಫ್

ಕಲಬುರಗಿ: ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಯುವ ಜನತೆಗೆ ಪ್ರಜಾಪ್ರಭುತ್ವದ ವಿಚಾರದಾರೆ ತಲುಪಿಸುವ ಉದ್ದೇಶದಿಂದ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ “ಯುವ ಸಂಸತ್ತು” ಆಯೋಜಿಸಬೇಕಾಗಿದ್ದು, ಇದೇ ವಾರದಲ್ಲಿ ತಾಲೂಕಾ ಯುವ ಸಂಸತ್ತು ಸಭೆ ನಡೆಸಿ ವರದಿ ನೀಡಬೇಕೆಂದು ತಾಲೂಕಾ ಮಟ್ಟದ ಅಧಿಕಾರಿಗಳಿಗೆ ಡಿ.ಸಿ. ಇಕ್ರಮ್ ಶರೀಫ್ ಸೂಚನೆ ನೀಡಿದರು.

ಸೋಮವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಲಬುರಗಿ ಜಿಲ್ಲಾ ಮತ್ತು ತಾಲೂಕು ಮಟ್ಟದ “ಯುವ ಸಂಸತ್ತು ರಸನೆ” ಪೂರ್ವಭಾವಿ ಸಭೆ ನಡೆಸಿದ ಅವರು, ರಾಜ್ಯದ ವಿಧಾನಸಭೆ ಮಾದರಿಯಲ್ಲಿ ಪ್ರೌಢ ಶಾಲಾ, ಪದವಿ ಪೂರ್ವ, ಪದವಿ ಹಾಗೂ ಸ್ನಾತಕೋತ್ತರ ಪದವಿ ಹಂತದಿಂದ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡು ಸಾಧ್ಯವಾದರೆ 224 ವಿದ್ಯಾರ್ಥಿಗಳು ಒಳಗೊಂಡ ಯುವ ಸಂಸತ್ತು ಸಭೆ ಆಯೋಜಿಸಬೇಕು. ಇದರಲ್ಲಿ ಉತ್ತಮ ಕಾಯಕ್ಷಮತೆ ತೋರಿದ ಅರ್ಹರ ಹೆಸರನ್ನು ಜಿಲ್ಲಾ ಯುವ ಸಂಸತ್ತು ಸಭೆಗೆ ಶಿಫಾರಸ್ಸು ಮಾಡಬೇಕು. ಇನ್ನು ಜಿಲ್ಲಾ ಮಟ್ಟದಿಂದ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಬ್ಬರಂತೆ ರಾಜ್ಯ ಮಟ್ಟದ ಯುವ ಸಂಸತ್ತಿಗೆ ಆಯ್ಕೆ ಮಾಡಿ ಕಳುಹಿಸಿಕೊಡಲಾಗುವುದು ಎಂದರು.

ತಾಲೂಕಾ ಯುವ ಸಂಸತ್ತು ಸಭೆಯ ನಂತರ ನಂತರ ಜಿಲ್ಲಾ ಯುವ ಸಂಸತ್ತು ಸಭೆ ಆಯೋಜಿಸಲಾಗುತ್ತದೆ. ದೇಶದ ಸಂಸದೀಯ ವ್ಯವಸ್ಥೆಯನ್ನು ಪರಿಚಯಿಸುವ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಯುವ ಸಂಸತ್ತು ಸಭೆ ಯುವ ಸಮುದಾಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದ್ದು, ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಅರ್ಥಪೂರ್ಣವಾಗಿ ಆಯೋಜಿಸಬೇಕು ಎಂದ ಜಿಲ್ಲಾಧಿಕಾರಿಗಳು, ತಾಲೂಕಾ ಮಟ್ಟದಲ್ಲಿ ಬಿ.ಇ.ಓ ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಇದರ ಯಶಸ್ಸಿಗೆ ಮುಂದಾಳತ್ವ ವಹಿಸಬೇಕೆಂದರು.

ಜಿಲ್ಲಾ ಯುವ ಸಂಸತ್ತು ಸಭೆಗೆ ಜಿಲ್ಲಾ ಉಸ್ತುವಾರಿ ಸಚಿವರು, ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಮತ್ತು ವಕೀಲರ ಸಂಘದ ಜಿಲ್ಲಾಧ್ಯಕ್ಷರನ್ನು ಹಾಗೂ ತಾಲೂಕಾ ಯುವ ಸಂಸತ್ತು ಶಾಸಕರು, ಸಂಸದರು ಹಾಗೂ ತಾಲೂಕಿನ ನ್ಯಾಯಾಧೀಶರನ್ನು ಆಹ್ಚಾನಿಸಬೇಕು. ಯುವ ಸಂಸತ್ತು ಸಭೆಯಲ್ಲಿ ಯಾವುದೇ ವಿವಾದಕ್ಕೆ ಆಸ್ಪದ ಕೊಡದ ಪ್ರಮುಖ ಮೂರು ವಿಷಯಗಳ ಮೇಲೆ ಚರ್ಚೆ ನಡೆಸಬೇಕು. ಸಾಂಕೇತಿಕವಾಗಿ ಕಾರ್ಯಕ್ರಮ ಉದ್ಘಾಟನೆ ಬಳಿಕ ಯುವ ಸಂಸತ್ತು ಕಾರ್ಯ ಕಲಾಪಗಳನ್ನು ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ನಡವಳಿಕೆ ನಿಯಮಾನುಸಾರ ನಡೆಸಬೇಕೆಂದು ಡಿ.ಸಿ. ಅಧಿಕಾರಿಗಳಿಗೆ ಸೂಚಿಸಿದರು.

ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಮಂತ್ರಿ ಮಂಡಲ, ವಿಧಾನಸಭಾಧ್ಯಕ್ಷ, ಉಪಸಭಾಧ್ಯಕ್ಷ, ವಿರೋಧ ಪಕ್ಷದ ನಾಯಕ, ಮುಖ್ಯ ಸಚೇತಕ ಪಾತ್ರಗಳೊಂದಿಗೆ ಯುವ ಸಂಸತ್ತು ರಚಿಸಿ ಕಾರ್ಯ ಕಲಾಪ ನಡೆಸಬೇಕು. ಸದನದ ಪ್ರಕ್ರಿಯೆಗಳಾದ ಪ್ರಶ್ನೋತ್ತರ ಅವಧಿ, ಶೂನ್ಯ ವೇಳೆ, ನಿಯಮ 330/343 ಮೇಲಿನ ತುರ್ತು ವಿಷಯದ ಚರ್ಚೆ, ನಿಯಮ 60ರಡಿ ಗಮನ ಸೆಳೆಯುವ ಸೂಚನೆ, ಗೊತ್ತುವಳಿ ಮಂಡನೆ, ವಿಧೇಯಕಗಳ ಮಂಡನೆ, ವಿಧೇಯಕಗಳ ಮೇಲಿನ ಚರ್ಚೆ, ವಿಧೇಯಕಗಳ ಅಂಗೀಕಾರ, ಸಮಾಪ್ತಿ ಸೂಚನೆ ಮೊದಲಾದ ಸದನ ನಡವಳಿ ಪ್ರಕ್ರಿಯೆಯನ್ನು ಅನುಸರಿಸುವ ಮೂಲಕ ಶಾಸಕಾಂಗ ವ್ಯವಸ್ಥೆಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಕೆಲಸ ಇಲ್ಲಿ ಮಾಡಬೇಕು ಎಂದರು.

ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಿ ಪ್ರೀತಿ ದೊಡ್ಮನಿ ಅವರು ಯುವ ಸಂಸತ್ತು ರಚನೆ ಮತ್ತು ಕಾರ್ಯ ಕಲಾಪಗಳ ಕುರಿತು ವಿವರಿಸಿದರು.

ಸಭೆಯಲ್ಲಿ ಡಿ.ಡಿ.ಪಿ.ಐ. ಶಂಕ್ರೆಮ್ಮ ಡವಳಗಿ ಸೇರಿದಂತೆ ವಿಡಿಯೋ ಕಾನ್ಫೆರೆನ್ಸ್ ಮೂಲಕ ತಹಶೀಲ್ದಾರರು, ಬಿ.ಇ.ಓ ಹಾಗೂ ಇತರೆ ಅಧಿಕಾರಿಗಲು ಭಾಗವಹಿಸಿದ್ದರು.

Leave A Reply

Your email address will not be published.