ಕಾಳಗಿ : ಪುರಾಣ ಪ್ರವಚನಗಳಿಂದ ಮಾನಸಿಕ ನೆಮ್ಮದಿ ದೊರೆಯುವುದಲ್ಲದೆ ಸದ್ವಿಚಾರ ಹಾಗೂ ಸದ್ಗುಣಗಳನ್ನು ಹೊಂದಲು ಸಾಧ್ಯವಿದೆ ಎಂದು ಕಮಲಾಪೂರ ಪೂಜ್ಯ ಶಾಂತವೀರ ಶಿವಾಚಾರ್ಯರರು ಆಶಿರ್ವಚನ ನೀಡಿದರು.
ಸಮೀಪದ ಕರ್ನಾಟಕ ಸರ್ಕಾರದ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ರೇವಗ್ಗಿ(ರಟಕಲ್) ರೇವಣಸಿದ್ದೇಶ್ವರ ಗುಡ್ಡದಲ್ಲಿ ಶ್ರಾವಣ ಮಾಸದ ಅಂಗವಾಗಿ 38ದಿನಗಳ ಕಾಲ ನಡೆದ ಹೆಮರೆಡ್ಡಿ ಮಲ್ಲಮ್ಮನ ಪುರಾಣ ಮಹಾಮಂಗಲ ಕಾರ್ಯಕ್ರಮ ಸಾನಿಧ್ಯ ವಹಿಸಿ ಆಶಿರ್ವಚನ ನೀಡಿದರು.
ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆ ಹಾಗೂ ಆಧುನಿಕತೆಯ ಗುಂಗಿನಲ್ಲಿ ಮನುಷ್ಯನ ಬದುಕು ಯಾಂತ್ರಿಕವಾಗುತ್ತಿದೆ. ಇದರಿಂದ ಮನುಷ್ಯ ಮಾನಸಿಕ ನೆಮ್ಮದಿಯನ್ನು ಕಳೆದುಕೊಳ್ಳುವಂತಾಗಿದೆ. ಮಾನಸಿಕ ನೆಮ್ಮದಿ ಹೊಂದಲು ಪುರಾಣ ಪ್ರವಚನಗಳು ಇಂದು ಅಗತ್ಯವಾಗಿವೆ ಎಂದರು.
ನಮ್ಮ ದೇಶದ ಸಂಸ್ಕೃತಿ ಹಾಗೂ ಧರ್ಮವನ್ನು ಇಡೀ ವಿಶ್ವವೇ ಮೆಚ್ಚಿಕೊಂಡಿದೆ. ಹೀಗಿರುವಾಗ ಇಂದಿನ ಯುವಕರು ಪಾಶ್ಚಾತ್ಯ ಸಂಸ್ಕೃತಿಯತ್ತ ಮಾರು ಹೋಗುತ್ತಿ ದ್ದಾರೆ. ಹೀಗಾಗಿ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದ್ದು, ಅತ್ಯಾಚಾರ ಹಾಗೂ ಅನೈತಿಕ ಚಟುವಟಿಕೆಗಳು ಹೆಚ್ಚು ವಂತಾಗಿದೆ ಎಂದು ಆತಂಕ ವ್ಯಕ್ತ ಪಡಿಸಿದರು.
ದೇವಸ್ಥಾನ ಸಮಿತಿ ಅಧ್ಯಕ್ಷ ಹಾಗೂ ಸೇಡಂ ಸಹಾಯಕ ಆಯುಕ್ತ ಪ್ರಭುರೆಡ್ಡಿ ಮಾತನಾಡಿ, ಮನುಷ್ಯನಿಗೆ ಹಣ ಗಳಿಸುವು ದೊಂದೇ ಉದ್ಯೋಗ ವಾಗ ಬಾರದು, ತಾನು ಗಳಿಸಿದ್ದರಲ್ಲಿ ಅಲ್ಪ ಭಾಗವನ್ನಾದರೂ ಸಮಾಜದ ಒಳಿತಿಗಾಗಿ ಖರ್ಚು ಮಾಡ ಬೇಕಾಗಿದೆ. ಈ ಹಿನ್ನೆಲೆಯಲ್ಲಿ ದಾನ ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಂಡಲ್ಲಿ ಮಾನಸಿಕ ನೆಮ್ಮದಿ ಹಾಗೂ ಶಾಂತಿಯನ್ನು ಪಡೆಯಲು ಸಾಧ್ಯವಿದೆ ಎಂದರು.
ದೇವಸ್ಥಾನ ಕಾರ್ಯದರ್ಶಿ ಸದಾಶಿವ ವಗ್ಗೆ ಮಾತನಾಡಿದರು. ರಟಕಲ್ ಪೂಜ್ಯ ರೇವಣಸಿದ್ಧ ಶರಣರು, ದೇವಸ್ಥಾನ ಅರ್ಚಕ ಮಲ್ಲಿನಾಥ ದೇವರಮನಿ, ಚನ್ನಬಸಪ್ಪ ದೇವರಮನಿ, ಗಂಗಾಧರ ಬಸವನಗುಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನೂರಾರು ಭಕ್ತರು ಇದ್ದರು. ಇದೇ ವೇಳೆ ದೇವಸ್ಥಾನ ಸ್ವಚ್ಚತಾ ಸಿಬ್ಬಂದಿ ಹಾಗೂ ಭಜನಾ ತಂಡಗಳಿಗೆ ಸತ್ಕರಿಸಿ ಗೌರವಿಸಲಾಯಿತು. ಪ್ರವಚನಕಾರ್ತಿ ಮಾತವಚನ, ಗವಾಯಿ ಮಹಾದೇವಯ್ಯ ಸ್ವಾಮಿ ಯಂಪಳ್ಳಿ, ತಬಲ ವಾದಕ ಶಿವಕುಮಾರ್ ಸ್ವಾಮಿ ಉಡುಬನಳ್ಳಿ ಪುರಾಣ ಸೇವೆ ಸಲ್ಲಿಸಿದರು. ಪುರಾಣ ಸೇವಕ ವೀರಣ್ಣ ಗಂಗಾಣಿ ನಿರೂಪಿಸಿ ವಂದಿಸಿದರು. ಎಎಸ್ಐ ಜಗನ್ನಾಥ ಮೂಲಗೆ ಪೊಲೀಸ್ ಬಂದೋಬಸ್ತ್ ಮಾಡಿದರು.