ಕಲಬುರಗಿ: ‘ಮಳೆಗಾಲದಲ್ಲಿಯೇ ಮಳೆ ಕೈಕೊಟ್ಟು ಬಿಸಿಲಿನ ತೀವ್ರತೆ ಮುಂದುವರಿದಿದ್ದು, ಜಿಲ್ಲೆಗೆ ಎಚ್ಚರಿಕೆಯ ಗಂಟೆಯಾಗಿದೆ. ಜನರು ನೀರಿಗಾಗಿ ಪರದಾಡುವ ಪರಿಸ್ಥಿತಿ ಬಂದ ನಂತರ ಪರಿಹಾರ ಹುಡುಕುವುದಕ್ಕಿಂತ ಮುನ್ನವೇ ಸರಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು,” ಎಂದು ಕರವೇ(ಪ್ರವೀಣ ಶೆಟ್ಟಿ) ಬಣದ ಕಲಬುರಗಿ ತಾಲೂಕು ಅಧ್ಯಕ್ಷ ವಿಜಯಕುಮಾರ ಅಂಕಲಗಿ ಹೇಳಿದ್ದಾರೆ.
ಈ ಕುರಿತು ಶನಿವಾರ ಪತ್ರಿಕಾ ಹೇಳಿಕೆ ನೀಡಿದ ಅವರು, ‘ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳಿಗೆ ತೀವ್ರ ಹಿನ್ನಡೆಯಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಸಮಸ್ಯೆಯ ಆತಂಕ ಹೆಚ್ಚಾಗಿದೆ. ಮಳೆ ಕೊರತೆ ಹಾಗೂ ನಿರಂತರ ಬಿಸಿಲಿನ ಪರಿಣಾಮವಾಗಿ ಅಂತರ್ಜಲದ ಮೇಲಿನ ಒತ್ತಡವೂ ಹೆಚ್ಚುತ್ತಿದೆ. ಈ ಪರಿಸ್ಥಿತಿ ಮುಂದುವರಿದರೆ ಮುಂದಿನ ಬೇಸಿಗೆಯಲ್ಲಿ ಸಮಸ್ಯೆ ಮತ್ತಷ್ಟು ಗಂಭೀರವಾಗುವ ಸಾಧ್ಯತೆ ಇದೆ. ಹವಾಮಾನ ಇಲಾಖೆ ಹಾಗೂ ಸಂಬಂಧಿಸಿದ ತಜ್ಞರ ವೈಜ್ಞಾನಿಕ ಸಲಹೆಯೊಂದಿಗೆ ಕೃತಕ ಮಳೆ ತರಿಸುವ ಸಾಧ್ಯತೆಯನ್ನು ತಕ್ಷಣ ಪರಿಶೀಲಿಸಬೇಕು. ಹವಾಮಾನ ಪರಿಸ್ಥಿತಿ ಅನುಕೂಲಕರವಾಗಿದ್ದರೆ ಅಗತ್ಯ ತಾಂತ್ರಿಕ ಮತ್ತು ಕಾನೂನು ಅನುಮತಿ ಪಡೆದು ಕೃತಕ ಮಳೆಯ ಪ್ರಯೋಗ ನಡೆಸುವ ಕುರಿತು ಸರಕಾರ ತುರ್ತು ನಿರ್ಧಾರ ಕೈಗೊಳ್ಳಬೇಕು.ಜಿಲ್ಲೆಯ ಪ್ರತಿಯೊಬ್ಬ ಜನಪ್ರತಿನಿಧಿಯೂ ಪಕ್ಷಭೇದ ಮರೆತು ಈ ಗಂಭೀರ ವಿಚಾರವನ್ನು ಸರಕಾರದ ಗಮನಕ್ಕೆ ತರಬೇಕು,” ಎಂದು ಅವರು ಒತ್ತಾಯಿಸಿದ್ದಾರೆ.