Shubhashaya News

ಪೌರಕಾರ್ಮಿಕರ ಅವಮಾನ: ಕೃಷ್ಣ ಬೈರೇಗೌಡರ ಹೇಳಿಕೆಗೆ ಸಿಐಟಿಯು ಖಂಡನೆ

ಕಲಬುರಗಿ: ಪೌರಕಾರ್ಮಿಕರ ಕುರಿತು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಇತ್ತೀಚೆಗೆ ನೀಡಿರುವ ಹೇಳಿಕೆ ಅತ್ಯಂತ ದುರದೃಷ್ಟಕರವಾಗಿದ್ದು, ಆಡಳಿತದ ಜವಾಬ್ದಾರಿಯನ್ನು ಪ್ರಶ್ನಿಸುವಂತಿದೆ ಎಂದು ಕರ್ನಾಟಕ ರಾಜ್ಯ ಮುನಿಸಿಪಲ್ ಕಾರ್ಮಿಕರ ಸಂಘ ತೀವ್ರವಾಗಿ ಖಂಡಿಸಿದೆ.

ಈ ಕುರಿತು ಸಂಘದ ಪ್ರಧಾನ ಕಾರ್ಯದರ್ಶಿ ಸೈಯದ್ ಮುಜೀಬ್ ಹಾಗೂ ಕಲಬುರಗಿ ಜಿಲ್ಲಾ ಸಮಿತಿಯ ಗೌರವಾಧ್ಯಕ್ಷೆ ಕೆ. ನೀಲಾ ಅವರು ಪ್ರಕಟಣೆ ನೀಡಿದ್ದು, ನಗರದ ಸ್ವಚ್ಛತೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಪೌರಕಾರ್ಮಿಕರು ತಮ್ಮ ಸೇವೆಯನ್ನು ಕಾಯಂಗೊಳಿಸುವಂತೆ ಮನವಿ ಮಾಡಿದ ಸಂದರ್ಭದಲ್ಲಿ, “ನೀವು ಕೆಲಸವೇ ಮಾಡುವುದಿಲ್ಲ. ನಿಮ್ಮನ್ನು ಏಕೆ ಪರ್ಮನೆಂಟ್ ಮಾಡಬೇಕು?” ಎಂದು ಸಚಿವರು ಪ್ರಶ್ನಿಸಿರುವುದು ಅವರ ಸಂವೇದನಾರಹಿತತೆಯನ್ನು ತೋರಿಸುತ್ತದೆ ಎಂದು ಆರೋಪಿಸಿದ್ದಾರೆ.

ವರದಿಗಳ ಪ್ರಕಾರ ಸುಮಾರು ಶೇ.30ರಷ್ಟು ಪೌರಕಾರ್ಮಿಕರು ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ ಎಂದು ಸಚಿವರು ಆರೋಪಿಸಿದ್ದಾರೆ. ಅಂತಹ ಪ್ರಕರಣಗಳಿದ್ದರೆ ಪೌರಕಾರ್ಮಿಕರ ಮೇಲ್ವಿಚಾರಣೆ ಮಾಡುವ ಅಧಿಕಾರಿಗಳು ಹಾಗೂ ಸಂಬಂಧಿಸಿದ ಇಲಾಖೆ ಏನು ಮಾಡುತ್ತಿದೆ ಎಂಬುದನ್ನು ಸಚಿವರು ಪ್ರಶ್ನಿಸಬೇಕು. ಕರ್ತವ್ಯಕ್ಕೆ ಗೈರುಹಾಜರಾಗುವ ನಿರ್ದಿಷ್ಟ ನೌಕರರ ವಿರುದ್ಧ ಸೇವಾ ನಿಯಮಗಳ ಪ್ರಕಾರ ಶಿಸ್ತು ಕ್ರಮ ಕೈಗೊಳ್ಳುವುದು ಸರ್ಕಾರದ ಅಧಿಕಾರವಾಗಿದ್ದು, ಅದನ್ನು ಬಿಟ್ಟು ಇಡೀ ಪೌರಕಾರ್ಮಿಕ ಸಮುದಾಯವನ್ನೇ ಅವಮಾನಿಸುವ ರೀತಿಯಲ್ಲಿ ಮಾತನಾಡುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.

ಯಾವುದೇ ನೌಕರನ ವಿರುದ್ಧ ನಿರ್ದಿಷ್ಟ ಆರೋಪಗಳಿದ್ದರೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬಹುದು. ಆದರೆ ವೈಯಕ್ತಿಕ ಕರ್ತವ್ಯಲೋಪದ ಆರೋಪವನ್ನು ಇಡೀ ವರ್ಗದ ಮೇಲಿನ ಸಾಮೂಹಿಕ ಅವಮಾನವಾಗಿ ಪರಿವರ್ತಿಸುವುದು ಅಮಾನವೀಯ ಹಾಗೂ ನ್ಯಾಯಸಮ್ಮತವಲ್ಲ ಎಂದು ಸಂಘದ ಮುಖಂಡರು ಹೇಳಿದ್ದಾರೆ.

ಸತ್ತ ಪ್ರಾಣಿಗಳು, ಹೆಗ್ಗಣಗಳು, ಕೊಳೆತು ನಾರುವ ಘನತ್ಯಾಜ್ಯ ಸೇರಿದಂತೆ ನಗರದ ಸ್ವಚ್ಛತೆಗೆ ಸಂಬಂಧಿಸಿದ ಅಪಾಯಕಾರಿ ಹಾಗೂ ಅಸಹ್ಯಕರ ಪರಿಸ್ಥಿತಿಗಳಲ್ಲಿಯೂ ಪೌರಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಅವರ ಸೇವೆ ಕೆಲ ದಿನಗಳು ಸ್ಥಗಿತಗೊಂಡರೂ ನಗರದ ಸ್ವಚ್ಛತೆ ಹಾಗೂ ಸಾರ್ವಜನಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂಬುದನ್ನು ಸಚಿವರು ಅರಿತುಕೊಳ್ಳಬೇಕು ಎಂದು ಸಂಘ ಒತ್ತಾಯಿಸಿದೆ.

Leave A Reply

Your email address will not be published.