ಅಫಜಲಪುರ: ತಾಲೂಕಿನ 10 ಕೆರೆಗಳಿಗೆ ₹318 ಕೋಟಿ ವೆಚ್ಚದಲ್ಲಿ ನೀರು ತುಂಬಿಸುವ ಯೋಜನೆಯಡಿ ಮೊದಲ ಹಂತವಾಗಿ ಬಳೂರ್ಗಿ ಗ್ರಾಮದ 30 ಎಕರೆ ವಿಸ್ತೀರ್ಣದ ಕೆರೆಗೆ ನೀರು ಹರಿಸುವ ಕಾಮಗಾರಿ ಆರಂಭಗೊಂಡಿದ್ದು, ಯೋಜನೆಯ ಅನುಷ್ಠಾನದ ಕುರಿತು ರೈತರು ಹಾಗೂ ಹೋರಾಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಳೂರ್ಗಿ ಗ್ರಾಮದ ಕೆರೆಗೆ ರೈತರೊಂದಿಗೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದ ಪ್ರಗತಿಪರ ಹೋರಾಟಗಾರ ಶ್ರೀಮಂತ ಬಿರಾದಾರ ಹಾಗೂ ಮಹಿಳಾ ಹೋರಾಟಗಾರ್ತಿ ಬಸಮ್ಮಾ ಗುತ್ತೇದಾರ, ಕೆರೆಗೆ ಸಮರ್ಪಕವಾಗಿ ನೀರು ಹರಿಸದೆ ಕೇವಲ ನಾಲ್ಕು ಇಂಚಿನ ಪೈಪ್ ಮೂಲಕ ನೀರು ಹರಿಸಲಾಗುತ್ತಿದೆ ಎಂದು ಆರೋಪಿಸಿದರು.
“ಕೆರೆಗೆ ಅಗತ್ಯ ಪ್ರಮಾಣದಲ್ಲಿ ನೀರು ಹರಿಸುವ ಬದಲು ಕಾಟಾಚಾರಕ್ಕೆ ನೀರು ಬಿಡಲಾಗುತ್ತಿದೆ. ಕೆರೆಯ ಹೂಳು ತೆಗೆಯದೇ ನೀರು ಹರಿಸುತ್ತಿರುವುದು ಅವೈಜ್ಞಾನಿಕ ಕ್ರಮವಾಗಿದೆ. ಇದರಿಂದ ಯೋಜನೆಯ ಉದ್ದೇಶವೇ ಈಡೇರುವುದಿಲ್ಲ. ಜನರ ಕಣ್ಣಿಗೆ ಮಣ್ಣು ಎರಚುವ ರೀತಿಯಲ್ಲಿ ಕಾಮಗಾರಿ ನಡೆಸಲಾಗುತ್ತಿದೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಸಾಮಾನ್ಯವಾಗಿ ಕೆರೆ ಅಥವಾ ನದಿಗೆ ಸಮರ್ಪಕವಾಗಿ ನೀರು ತುಂಬಿದ ಬಳಿಕ ಶಾಂತಿ ಹಾಗೂ ಸಮೃದ್ಧಿಯ ಸಂಕೇತವಾಗಿ ಬಾಗೀನ ಅರ್ಪಿಸುವ ಸಂಪ್ರದಾಯವಿದೆ. ಆದರೆ ಬಳೂರ್ಗಿ ಕೆರೆಗೆ ಸಮರ್ಪಕವಾಗಿ ನೀರು ಹರಿಯುವ ಮುನ್ನವೇ ಆಳಂದ ಶಾಸಕ ಬಿ.ಆರ್. ಪಾಟೀಲ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಅರುಣಕುಮಾರ ಪಾಟೀಲ ಅವರು ಬಾಗೀನ ಅರ್ಪಿಸಿರುವುದು ವಿಪರ್ಯಾಸ ಎಂದು ಶ್ರೀಮಂತ ಬಿರಾದಾರ ಟೀಕಿಸಿದರು.
ಯೋಜನೆಯನ್ನು ವೈಜ್ಞಾನಿಕವಾಗಿ ಅನುಷ್ಠಾನಗೊಳಿಸಿ ಕೆರೆಗೆ ಸಮರ್ಪಕ ಪ್ರಮಾಣದಲ್ಲಿ ನೀರು ಹರಿಸಬೇಕು. ಇಲ್ಲದಿದ್ದರೆ ಕೆರೆಯಲ್ಲೇ ಧರಣಿ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಹೋರಾಟಗಾರರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ನಾಮದೇವ ಕಡಕೋಳ, ಭೀಮರಾವ ಗೌರ, ರವಿ ಗೌರ, ಸೋಮಜಾಳ ಅರ್ಜುನ, ಮನೋಹರ ರಾಠೋಡ, ಬಿ.ಎಂ. ರಾವ್, ಖಾಜು ಜಾಬದಿ, ಗೌತಮ್ಮ ದೊಡ್ಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.