Shubhashaya News

ಕರುಣೆ, ಸಮಾನತೆ ಬತ್ತಿಹೋಗುತ್ತಿರುವ ಸಮಾಜದಲ್ಲಿ ನಾವಿದ್ದೇವೆ; ಮೊಹಮ್ಮದ್ ಕುಂಞಿ

ಕಲಬುರಗಿ: ಕರುಣೆ ಬತ್ತಿಹೋಗುತ್ತಿರುವ ಇಂದಿನ ಜಗತ್ತಿನಲ್ಲಿ ಮಾನವೀಯತೆ, ಸತ್ಯ, ಸಮಾನತೆ ಹಾಗೂ ನ್ಯಾಯದ ಸಂದೇಶವನ್ನು ಸಮಾಜಕ್ಕೆ ತಲುಪಿಸುವ ಅಗತ್ಯವಿದೆ. ವಿದ್ಯಾವಂತರ ಸಂಖ್ಯೆ ಹೆಚ್ಚಾಗುತ್ತಿದ್ದರೂ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿರುವುದು ಸಮಾಜದ ಸ್ಥಿತಿಗತಿಗೆ ಕನ್ನಡಿ ಹಿಡಿದಂತಾಗಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕದ ರಾಜ್ಯ ಕಾರ್ಯದರ್ಶಿ ಹಾಗೂ ಶಾಂತಿ ಪ್ರಕಾಶನದ ಅಧ್ಯಕ್ಷ ಮೊಹಮ್ಮದ್ ಕುಂಞಿ ಹೇಳಿದರು.

ನಗರದ ಸಂಗತ್ರಾಶವಾಡಿಯಲ್ಲಿ ಜಮಾಅತೆ ಇಸ್ಲಾಮಿ ಹಿಂದ್, ಕಲಬುರಗಿ ವತಿಯಿಂದ “ಕ್ರಾಂತಿಯ ಜ್ಯೋತಿ – ಪ್ರವಾದಿ ಮುಹಮ್ಮದ್ ﷺ” ಎಂಬ ವಿಷಯದ ಕುರಿತು ಆಯೋಜಿಸಿದ್ದ ವಿಶೇಷ ಸೀರತ್ ಪ್ರವಚನ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

“ನಿಮ್ಮನ್ನು ನಾವು ಕರುಣೆಯೊಂದಿಗೇ ಕಳುಹಿಸಿದ್ದೇವೆ” ಎಂಬ ಪ್ರವಾದಿ ಮುಹಮ್ಮದ್ ﷺ ಅವರ ಸಂದೇಶ ಇಂದಿನ ಸಮಾಜಕ್ಕೆ ಅತ್ಯಂತ ಪ್ರಸ್ತುತವಾಗಿದೆ. ಸತ್ಯಕ್ಕಿಂತ ಸುಳ್ಳನ್ನು ಹೆಚ್ಚು ಜೋರಾಗಿ ಹೇಳುವ, ಸುಳ್ಳನ್ನೇ ಸಂಭ್ರಮಿಸುವ ವಾತಾವರಣ ನಿರ್ಮಾಣವಾಗಿರುವ ಸಂದರ್ಭದಲ್ಲಿ ಸತ್ಯವನ್ನು ಧೈರ್ಯದಿಂದ ಹಾಗೂ ಪ್ರಬಲವಾಗಿ ಪ್ರತಿಪಾದಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು.

ಪರಸ್ಪರ ಕಚ್ಚಾಡುತ್ತಿರುವ ಸಮಾಜದಲ್ಲಿ ಹೃದಯಗಳನ್ನು ಜೋಡಿಸುವ ಮಾರ್ಗವನ್ನು ಪ್ರವಾದಿ ಮುಹಮ್ಮದ್ ﷺ ಕಲಿಸಿಕೊಟ್ಟರು. ಮನುಷ್ಯರೆಲ್ಲರೂ ಸಮಾನರು ಹಾಗೂ ಪ್ರತಿಯೊಬ್ಬರೂ ಗೌರವಕ್ಕೆ ಅರ್ಹರು ಎಂಬ ಮಾನವೀಯ ಸಂದೇಶವನ್ನು ಅವರು ಸಾರಿದರು. “ಇಕ್ರಾ” (ಓದು) ಎಂಬ ಮೊದಲ ಸಂದೇಶದ ಮೂಲಕ ಜ್ಞಾನ, ಚಿಂತನೆ ಮತ್ತು ವೈಚಾರಿಕತೆಯ ಮಹತ್ವವನ್ನು ಸಾರಲಾಗಿದ್ದು, ಅರಿವು ಮತ್ತು ವೈಚಾರಿಕತೆಯ ಮೂಲಕವೇ ಸಮಾಜದಲ್ಲಿ ಬದಲಾವಣೆ ಸಾಧ್ಯ ಎಂದು ಮೊಹಮ್ಮದ್ ಕುಂಞಿ ಹೇಳಿದರು.

ಒಬ್ಬ ವ್ಯಕ್ತಿಯ ಉತ್ತಮ ವ್ಯಕ್ತಿತ್ವವನ್ನು ಆತನ ಮಾತುಗಳಿಂದ ಮಾತ್ರ ಅಳೆಯಲು ಸಾಧ್ಯವಿಲ್ಲ. ಊರಿನವರು ಉತ್ತಮ ವ್ಯಕ್ತಿ ಎಂದು ಅಂಕ ನೀಡಿದರೂ ಕುಟುಂಬದವರು, ಪತ್ನಿ, ಮಕ್ಕಳು ಹಾಗೂ ನೆರೆಹೊರೆಯವರು ಉತ್ತಮ ವ್ಯಕ್ತಿ ಎಂದು ಹೇಳದಿದ್ದರೆ ಆ ವ್ಯಕ್ತಿತ್ವ ಅಪೂರ್ಣ. ನಮ್ಮ ಅನುಪಸ್ಥಿತಿಯಲ್ಲಿಯೂ ಜನರು ನಮ್ಮನ್ನು ಸ್ಮರಿಸುವಂತಹ ಜೀವನ ನಡೆಸಿದಾಗ ಮಾತ್ರ ನಮ್ಮ ಸಂಪಾದನೆ ಸಾರ್ಥಕವಾಗುತ್ತದೆ ಎಂದು ಅವರು ಹೇಳಿದರು.

ಪ್ರವಾದಿ ಮುಹಮ್ಮದ್ ﷺ ಅವರ ಜೀವನವು ಸಮಗ್ರ ಹಾಗೂ ಪರಿಪೂರ್ಣ ಮಾದರಿಯಾಗಿದೆ. ಕುಟುಂಬ, ಸಮಾಜ, ಆರ್ಥಿಕತೆ, ನ್ಯಾಯ ಹಾಗೂ ಮಾನವ ಸಂಬಂಧಗಳ ಪ್ರತಿಯೊಂದು ಕ್ಷೇತ್ರದಲ್ಲಿಯೂ ಅವರು ಮಾರ್ಗದರ್ಶನ ನೀಡಿದ್ದಾರೆ ಎಂದು ವಿವರಿಸಿದರು.

ಮಹಿಳೆಯರ ಹಕ್ಕುಗಳ ಪ್ರತಿಪಾದನೆ

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಎಂ.ಆರ್. ಮೆಡಿಕಲ್ ಕಾಲೇಜಿನ ಮೈಕ್ರೋಬಯಾಲಜಿ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ಯಶವಂತರಾವ್ ಮೆಂಗಿ ಮಾತನಾಡಿ, ತಾವು 28 ವರ್ಷಗಳಿಂದ ಜಮಾಅತೆ ಇಸ್ಲಾಮಿ ಹಿಂದ್‌ನೊಂದಿಗೆ ಸಂಪರ್ಕ ಹೊಂದಿದ್ದು, ಕುರಾನ್ ಅನ್ನು ಪ್ರತಿಬಾರಿ ಓದಿದಾಗಲೂ ಹೊಸ ಕಲಿಕೆ ದೊರೆಯುತ್ತದೆ ಎಂದರು.

ಭೇದಭಾವದಿಂದ ಕೂಡಿರುವ ಇಂದಿನ ಸಮಾಜದಲ್ಲಿ ಪ್ರವಾದಿ ಮುಹಮ್ಮದ್ ﷺ ಅವರ ಸಂದೇಶದ ಪ್ರಸ್ತುತತೆಯನ್ನು ಅರಿಯಬೇಕಾಗಿದೆ. ಬಡವರ ಪಾಲಿಗೆ ಶ್ರೀಮಂತರ ಜವಾಬ್ದಾರಿಯನ್ನು ಒತ್ತಿಹೇಳುವ ಜಕಾತ್, ನ್ಯಾಯ ಮಾಡುವಾಗ ಯಾವುದೇ ಭಯ, ಒಲವು ಅಥವಾ ಪಕ್ಷಪಾತ ಇರಬಾರದು ಎಂಬ ನ್ಯಾಯದ ತತ್ವಗಳು ಇಂದಿಗೂ ಅತ್ಯಂತ ಮಹತ್ವದ್ದಾಗಿವೆ ಎಂದು ಹೇಳಿದರು.

ಪುರುಷರಿಗೆ ಇರುವ ಹಕ್ಕುಗಳಂತೆ ಮಹಿಳೆಯರಿಗೂ ಹಕ್ಕುಗಳು ದೊರೆಯಬೇಕು ಎಂಬ ವಿಚಾರವನ್ನು ಪ್ರವಾದಿ ಮುಹಮ್ಮದ್ ﷺ ಅವರು ಸ್ಪಷ್ಟವಾಗಿ ಪ್ರತಿಪಾದಿಸಿದ್ದರು. ಪತಿ, ಪೋಷಕರು ಹಾಗೂ ಮಕ್ಕಳಿಂದ ಮಹಿಳೆಗೆ ದೊರೆಯಬೇಕಾದ ಹಕ್ಕುಗಳು ಮತ್ತು ಆಸ್ತಿ ಹಂಚಿಕೆಯ ಕುರಿತು ಅವರು ಸ್ಪಷ್ಟವಾದ ಮಾರ್ಗದರ್ಶನ ನೀಡಿದ್ದಾರೆ ಎಂದು ಡಾ. ಯಶವಂತರಾವ್ ಮೆಂಗಿ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕದ ರಾಜ್ಯಾಧ್ಯಕ್ಷ ಡಾ. ಬೆಲ್ಗಾಮಿ ಮೊಹಮ್ಮದ್ ಸಾದ್ ವಹಿಸಿದ್ದರು. ಕಲಬುರಗಿ ಅಧ್ಯಕ್ಷ ಜಾಕಿರ್ ಹುಸೈನ್, ಫಾದರ್ ಸ್ಟ್ಯಾನಿ ಲೋಬೋ, ಡಾ. ಸಯ್ಯದ್ ರಹಮತುಲ್ಲಾ, ಮೊಹಮ್ಮದ್ ಅಜೀಮುದ್ದೀನ್ ಅಡ್ವಕೇಟ್, ಮೊಹಮ್ಮದ್ ಮೊಹಿಯುದ್ದೀನ್, ಖ್ಯಾತ ಉದ್ಯಮಿ ಎಂಜಿನಿಯರ್ ಮೊಹಮ್ಮದ್ ರಫಿಯುದ್ದೀನ್, ಅಜೀಜ್ ಅಹ್ಮದ್ ಶಹನ್ನಾ, ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಸಮಗ್ರ ಕ್ರಾಂತಿಯ ಜ್ಯೋತಿ ಬೆಳಗಿದ ಪೈಗಂಬರ್ ಮೊಹಮ್ಮದ್ (ಸ) ಹಾಗೂ ಮನದೊಡೆಯ ಮೊಹಮ್ಮದ್ (ಸ) ಪುಸ್ತಕ ಲೋಕಾರ್ಪಣೆ ಮತ್ತು ಜಮಾಅತೆ ಇಸ್ಲಾಮಿ ಹಿಂದ್, ಕಲಬುರಗಿ ವತಿಯಿಂದ “ಮೊಹಮ್ಮದ್ ಡಯಾಲಿಸಿಸ್ ಸೆಂಟರ್” ಅನ್ನು ಉದ್ಘಾಟಿಸಲಾಯಿತು. ಸಮಾಜದ ಅಗತ್ಯವಿರುವ ಜನರಿಗೆ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಕೇಂದ್ರವನ್ನು ಆರಂಭಿಸಲಾಗಿದೆ ಎಂದು ಆಯೋಜಕರು ತಿಳಿಸಿದರು.

Leave A Reply

Your email address will not be published.