ಕಲಬುರಗಿ: ಹಣ ನೀಡುವಂತೆ ಒತ್ತಾಯಿಸಿ ಜೀವಬೆದರಿಕೆ ಹಾಕಿ, ಕರುಣೇಶ್ವರ ಬಡಾವಣೆಯ ನಿವಾಸಿ ಬಲರಾಮ ರಾಣಪ್ಪ ಅವರ ಕುಟುಂಬಕ್ಕೆ ನಿರಂತರವಾಗಿ ಕಿರುಕುಳ ನೀಡುತ್ತಿರುವ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ವಿವಿಧ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾಕಾರರು ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿ, ಬಲರಾಮ ರಾಣಪ್ಪ ಅವರ ಕುಟುಂಬಕ್ಕೆ ಸೂಕ್ತ ಪೊಲೀಸ್ ರಕ್ಷಣೆ ಒದಗಿಸಬೇಕು. ಕುಟುಂಬಕ್ಕೆ ಜೀವಬೆದರಿಕೆ ಹಾಗೂ ಕಿರುಕುಳ ನೀಡುತ್ತಿರುವ ಆರೋಪಿಗಳ ವಿರುದ್ಧ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ಹಾಗೂ ಜಿಲ್ಲಾ ಮತ್ತು ಹೈಕೋರ್ಟ್ ನ್ಯಾಯವಾದಿ ರವಿಚಂದ್ರ ಗುತ್ತೇದಾರ ಮಾತನಾಡಿ, ಯಾವುದೇ ಕುಟುಂಬಕ್ಕೆ ಬೆದರಿಕೆ ಹಾಕಿ ಹಣ ವಸೂಲಿ ಮಾಡಲು ಯತ್ನಿಸುವುದು ಗಂಭೀರ ಅಪರಾಧವಾಗಿದೆ. ಇಂತಹ ಪ್ರಕರಣಗಳನ್ನು ಅಧಿಕಾರಿಗಳು ನಿರ್ಲಕ್ಷಿಸದೆ ತಕ್ಷಣ ಮಧ್ಯಪ್ರವೇಶಿಸಿ, ಸಂತ್ರಸ್ತ ಕುಟುಂಬಕ್ಕೆ ರಕ್ಷಣೆ ಹಾಗೂ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಕುಟುಂಬದ ಸದಸ್ಯರಿಗೆ ಯಾವುದೇ ರೀತಿಯ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಪ್ರಕರಣದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ, ಬೆದರಿಕೆ ಹಾಗೂ ಕಿರುಕುಳದ ಹಿಂದೆ ಇರುವವರನ್ನು ಪತ್ತೆಹಚ್ಚಿ ಕಾನೂನು ಕ್ರಮ ಜರುಗಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಶೀಲಾ, ಮಾಲಾಶ್ರೀ, ಕೃಷ್ಣಾ ಧೋತ್ರೆ, ರಾಜು ಬೇಲೂರು, ಮಹೇಶ, ಲಕ್ಷ್ಮೀಕಾಂತ, ಜಗದೇವಿ ಪೂಜಾರಿ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.