Shubhashaya News

ನೊಂದ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಲು ಆಗ್ರಹಿಸಿ ಮಾದಿಗ ಸಂಘಟನೆಗಳ ಒಕ್ಕೂಟ ಪ್ರತಿಭಟನೆ

ದಲಿತ ಯುವತಿಯರ ಮೇಲಿನ ದೌರ್ಜನ್ಯ, ಕೊಲೆ ಪ್ರಕರಣಗಳ ಆರೋಪಿಗಳ ಬಂಧನಕ್ಕೆ ಒತ್ತಾಯ

ಕಲಬುರಗಿ: ರಾಯಚೂರು ಜಿಲ್ಲೆಯ ವಕ್ರಾಣಿ ಹಾಗೂ ವಿಜಯಪುರ ಜಿಲ್ಲೆಯ ಮುತ್ತಗಿ ಗ್ರಾಮಗಳಲ್ಲಿ ದಲಿತ ಸಮುದಾಯದ ಯುವತಿಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಮತ್ತು ಕೊಲೆ ಪ್ರಕರಣಗಳನ್ನು ಖಂಡಿಸಿ, ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಹಾಗೂ ನೊಂದ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಮಾದಿಗ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಯಿತು.

ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿ, ದಲಿತ ಸಮುದಾಯದ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಯಾವುದೇ ವಿಳಂಬವಿಲ್ಲದೆ ಬಂಧಿಸಿ, ಕಾನೂನುಬದ್ಧವಾಗಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು.

ಇದೇ ಸಂದರ್ಭದಲ್ಲಿ ರಾಯಚೂರು ಜಿಲ್ಲೆಯ ದಲಿತ ಸಮುದಾಯದ ಬುಮಾನಂದ ಹಾಗೂ ರಮೇಶ ನಕ್ಕುಂದಿ ಅವರ ಕೊಲೆ ಪ್ರಕರಣಗಳ ಆರೋಪಿಗಳ ವಿರುದ್ಧವೂ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ದಲಿತ ಸಮುದಾಯದ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯ, ಕೊಲೆ ಹಾಗೂ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಇಂತಹ ಘಟನೆಗಳಿಗೆ ಕಡಿವಾಣ ಹಾಕಲು ಕಠಿಣ ಕಾನೂನು ಕ್ರಮ ಕೈಗೊಳ್ಳುವುದರ ಜೊತೆಗೆ, ಪ್ರಕರಣಗಳ ತನಿಖೆಯನ್ನು ತ್ವರಿತಗೊಳಿಸಿ ತಪ್ಪಿತಸ್ಥರಿಗೆ ಶೀಘ್ರ ನ್ಯಾಯಾಲಯದ ಮೂಲಕ ಶಿಕ್ಷೆ ಖಚಿತಪಡಿಸಬೇಕು ಎಂದು ಅವರು ಒತ್ತಾಯಿಸಿದರು.

ದೌರ್ಜನ್ಯಕ್ಕೊಳಗಾದ ಕುಟುಂಬಗಳಿಗೆ ಸರ್ಕಾರದಿಂದ ಸೂಕ್ತ ಪರಿಹಾರ, ಅಗತ್ಯ ಭದ್ರತೆ ಹಾಗೂ ಪುನರ್ವಸತಿ ಸೇರಿದಂತೆ ಎಲ್ಲ ರೀತಿಯ ನೆರವು ಒದಗಿಸಬೇಕು. ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ದೊರೆಯುವವರೆಗೆ ಹೋರಾಟ ಮುಂದುವರಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಮುಖಂಡ ದಶರಥ ಕಲಗುರ್ತಿ, ಮಾದರ ಚನ್ನಯ್ಯ ಸೇವಾ ಸಮಿತಿ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಜಿನಕೇರಿ, ರಾಜು ಕಟ್ಟಿಮನಿ, ರಮೇಶ ವಾಡೇಕರ್, ರಂಜಿತಕುಮಾರ ಮೂಲಿಮನಿ, ಬಂಡೇಶ ರತ್ನಡಗಿ ಸೇರಿದಂತೆ ಮಾದಿಗ ಸಂಘಟನೆಗಳ ವಿವಿಧ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

Leave A Reply

Your email address will not be published.