ಬರ ಘೋಷಣೆ, ಬಾಕಿ ಬೆಳೆ ವಿಮೆ ಪಾವತಿಗೆ ಎತ್ತು ಗಾಡಿಗಳೊಂದಿಗೆ ಕಲ್ಯಾಣ ಜನಪರ ವೇದಿಕೆಯಿಂದ ಹೆದ್ದಾರಿ ತಡೆ ಪ್ರತಿಭಟನೆ
ಆಳಂದ: ಕೊಡಲಹಂಗರಗಾ ಬಳಿಯ ರಾಜ್ಯ ಹೆದ್ದಾರಿ ತಡೆ ಪ್ರತಿಭಟನೆಯಲ್ಲಿ ಕಲ್ಯಾಣ ಜನಪರ ವೇದಿಕೆ ರಾಜ್ಯಾಧ್ಯಕ್ಷ ಬಸವರಾಜ ಕೊರಳ್ಳಿ ಮಾತನಾಡಿದರು.
ವಾರದ ಗಡುವು—ತಾಳ್ಮೆ ಕಟ್ಟೆಯೊಡೆದರೆ ಅಧಿಕಾರಿಗಳ ಕಚೇರಿ ಬಾಗಿಲು ಒಡೆಯುವ ರೈತರ ಎಚ್ಚರಿಕೆ
ಆಳಂದ: ತಾಲೂಕು ಬರ ಘೋಷಣೆ, ಬಾಕಿ ಇರುವ ಬೆಳೆ ವಿಮೆ ಪಾವತಿ ಹಾಗೂ ಪ್ರಸಕ್ತ ಸಾಲಿನ ಬೆಳೆ ಹಾನಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ಕಲ್ಯಾಣ ಜನಪರ ವೇದಿಕೆ ನೇತೃತ್ವದಲ್ಲಿ ವಿವಿಧ ಗ್ರಾಮಗಳ ರೈತರು ಸೋಮವಾರ ತಾಲೂಕಿನ ಕೊಡಲಹಂಗರಗಾ ಬಳಿ ರಾಜ್ಯ ಹೆದ್ದಾರಿ ತಡೆದು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ಕೃಷಿ ಕೆಲಸಕ್ಕೆ ಬಳಸುವ ಎತ್ತು ಗಾಡಿಗಳನ್ನೇ ಪ್ರತಿಭಟನೆಯ ಅಸ್ತçವಾಗಿಸಿಕೊಂಡ ರೈತರು, ಎತ್ತುಗಳ ಸಮೇತ ಹೆದ್ದಾರಿಗೆ ಇಳಿದು ರಸ್ತೆ ಮೇಲೆ ಕುಳಿತು ಆಕ್ರೋಶ ವ್ಯಕ್ತಪಡಿಸಿದ್ದು ಪ್ರತಿಭಟನೆಯ ವಿಶೇಷವಾಗಿತ್ತು. ನಿತ್ಯ ಹೊಲದಲ್ಲಿ ದುಡಿಯಬೇಕಿದ್ದ ಎತ್ತು ಗಾಡಿಗಳು ಹೆದ್ದಾರಿಯಲ್ಲಿ ಸಾಲಾಗಿ ನಿಂತು ಸರ್ಕಾರದ ಗಮನ ಸೆಳೆದವು. ಕೃಷಿ ಕೆಲಸ ಬಿಟ್ಟು ರೈತರು ಹೋರಾಟಕ್ಕೆ ಧುಮುಕಿ ಆಕ್ರೋಶ ಹೊರಹಾಕಿದರು.
ಕಲ್ಯಾಣ ಜನಪರ ವೇದಿಕೆ ರಾಜ್ಯಾಧ್ಯಕ್ಷ ಬಸವರಾಜ ಕೊರಳ್ಳಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ರೈತರು ಒಂದು ಗಂಟೆಗೂ ಹೆಚ್ಚು ಕಾಲ ವಾಗ್ದರಿ–ರಿಬ್ಬನಪಲ್ಲಿ ರಾಜ್ಯ ಹೆದ್ದಾರಿ ಬಂದ್ ಮಾಡಿದರು. ಇದರಿಂದ ಕರ್ನಾಟಕ ಹಾಗೂ ಮಹಾರಾಷ್ಟçದ ನಡುವೆ ಸಂಚರಿಸುವ ಸಾರಿಗೆ ಸಂಸ್ಥೆಗಳ ಬಸ್ಗಳು ಸೇರಿದಂತೆ ಖಾಸಗಿ ವಾಹನಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು. ತುರ್ತು ಕೆಲಸಗಳಿಗೆ ತೆರಳಬೇಕಿದ್ದ ಪ್ರಯಾಣಿಕರು ಹಾಗೂ ವಾಹನ ಸವಾರರು ಪರದಾಡುವಂತಾಯಿತು.
‘ಬೆಳೆ ವಿಮೆ ಕಟ್ಟಿದ್ದರೂ ಪರಿಹಾರ ಏಕೆ ಇಲ್ಲ?’ ಎಂದು ಪ್ರಶ್ನಿಸಿದ ರೈತರು, ಕಳೆದ ಸಾಲಿನ ಬಾಕಿ ಬೆಳೆ ವಿಮೆಯನ್ನು ಕೂಡಲೇ ಪಾವತಿಸಬೇಕು. ಪ್ರಸಕ್ತ ಸಾಲಿನಲ್ಲಿ ಬೆಳೆ ತುಂಬಿದ ರೈತರಿಗೆ ಮಧ್ಯಂತರ ಪರಿಹಾರ ನೀಡಬೇಕು. ಬೆಳೆ ಹಾನಿಗೆ ಬರ ಪರಿಹಾರ ಕಲ್ಪಿಸಬೇಕು. ಆಳಂದ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸಬೇಕು ಎಂದು ಒತ್ತಾಯಿಸಿದರು.
ಕೆಲವು ಪ್ರದೇಶಗಳಲ್ಲಿ ಬೆಳೆ ವಿಮೆ ಪಾವತಿಯಾಗಿದ್ದರೂ ಕೊಡಲಹಂಗರಗಾ ಸೇರಿದಂತೆ ಹಲವು ಗ್ರಾಮಗಳ ರೈತರಿಗೆ ಇನ್ನೂ ವಿಮೆ ಹಣ ಜಮೆಯಾಗಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು. ವಿಮೆ ಪಾವತಿಯಲ್ಲಿ ಉಂಟಾಗಿರುವ ತಾಂತ್ರಿಕ ಸಮಸ್ಯೆಗಳನ್ನು ಕೂಡಲೇ ಪರಿಹರಿಸಿ ಅರ್ಹ ರೈತರ ಖಾತೆಗಳಿಗೆ ಹಣ ಜಮೆ ಮಾಡಬೇಕು ಎಂದು ಆಗ್ರಹಿಸಿದರು.
“ಬೆಳೆ ವಿಮೆ ಪಾವತಿಗೆ ಸರ್ಕಾರಕ್ಕೆ ಒಂದು ವಾರದ ಗಡುವು ನೀಡುತ್ತೇವೆ. ರೈತರ ತಾಳ್ಮೆ ಕಟ್ಟೆಯೊಡೆದರೆ ಅಧಿಕಾರಿಗಳ ಕಚೇರಿ ಬಾಗಿಲು ಒಡೆಯುವ ಹೋರಾಟಕ್ಕೂ ಹಿಂದೆ ಸರಿಯುವುದಿಲ್ಲ” ಎಂದು ಪ್ರತಿಭಟನಾಕಾರರು ಗುಡುಗಿದರು.
ಹಿರಿಯ ಮುಖಂಡರಾದ ಶಂಕರರಾವ್ ಮಾಲಿಪಾಟೀಲ, ಭೀಮಶಾ ಚಿತಲಿ, ವೇದಿಕೆಯ ರಾಜ್ಯ ಕಾರ್ಯದರ್ಶಿ ಶರಣು ಕುಲಕರ್ಣಿ, ಜಿಲ್ಲಾಧ್ಯಕ್ಷ ನಾಗರಾಜ ಘಡಕೆ, ಉಪಾಧ್ಯಕ್ಷ ವಿಕ್ರಂ ಜೇವರ್ಗಿ,ತಾಲೂಕು ಅಧ್ಯಕ್ಷ ಬೀರಣ್ಣಾ ಭೂಸನೂರ, ಗಂಗಾಧರ್ ಕುಂಬಾರ, ಶರಣು ಪಾಟೀಲ, ನೀಲಕಂಠ ಶೇರಿಕಾರ ಸೇರಿದಂತೆ ಅನೇಕ ರೈತರು ಮಾತನಾಡಿದರು. ಪಾಲ್ಗೊಂಡು ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಭೀಮರಾವ್ ಬಾಲಖೇಡ, ಸುರೇಶ ಭೂಸನೂರ, ಶಿವುಕುಮಾರ ನಗದೆ, ಸೋಮಯ್ಯ ಸ್ವಾಮಿ,ಶರಣಪ್ಪ ಸಾಹೂಕಾರ ರೆಡ್ಡಿ, ಪೀರಪ್ಪಗೌಡ ಪಾಟೀಲ, ಅಣ್ಣಾರಾವ್ ಬಿರಾದಾರ, ದತ್ತಪ್ಪಾ ಪೂಜಾರಿ, ರೇವಣಸಿದ್ಧ ಪೂಜಾರಿ, ಶರಣಬಸಪ್ಪ ಉಜಳಂಬೆ,ನಿಖಿಲ ಭೀಮಳ್ಳಿ, ಗೌರಿಶಂಕರ ಪಾಟೀ, ಸಂದೀಪ ಭೀಮಳ್ಳಿ ಸೇರಿದಂತೆ ನೆರೆ, ಹೊರೆಯ ಗ್ರಾಮಗಳ ಅನೇಕ ರೈತರು ಭಗವಹಿಸಿದ್ದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಅಣ್ಣಾರಾವ್ ಪಾಟೀಲ ಹಾಗೂ ಸಹಾಯಕ ಕೃಷಿ ನಿರ್ದೇಶಕ ತಿಪ್ಪೇಸ್ವಾಮಿ ವಿ. ಅವರು ರೈತರ ಮನವಿ ಸ್ವೀಕರಿಸಿದರು. ರೈತರ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ಕಳುಹಿಸಲಾಗುವುದು. ಬೆಳೆ ವಿಮೆ ಪಾವತಿಯಲ್ಲಿ ಉಂಟಾಗಿರುವ ತಾಂತ್ರಿಕ ಅಡಚಣೆಗಳನ್ನು ನಿವಾರಿಸಿ ಅರ್ಹ ರೈತರ ಖಾತೆಗಳಿಗೆ ಹಣ ಜಮೆಯಾಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಗ್ರಾಮೀಣ ಸಿಪಿಐ ಜಗದೀಶ ಹಾಗೂ ನರೋಣಾ ಠಾಣೆಯ ಪಿಎಸ್ಐ ಸಿದ್ರಾಮ ನಿಂಬರಗಾ ಸಿಬ್ಬಂದಿಯೊAದಿಗೆ ಸ್ಥಳಕ್ಕೆ ಧಾವಿಸಿ ಬಂದೋಬಸ್ತ್ ಕಲ್ಪಿಸಿದರು. ಬಳಿಕ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.