ಚಿಂಚೋಳಿ:ಪುಸ್ತಕಗಳು ಮನುಷ್ಯನ ಜೀವನ ಸಂಗಾತಿಗಳಾಗಿವೆ. ಪುಸ್ತಕ ಓದುವುದರಿಂದ ವ್ಯಕ್ತಿತ್ವದ ವಿಕಸನವಾಗುತ್ತದೆ. ಆದರೆ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರಿನ ಸದಸ್ಯರಾದ ಸಾಹಿತಿ ಬಿ.ಹೆಚ್.ನಿರಗುಡಿ ಅಭಿಪ್ರಾಯಪಟ್ಟರು. ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಹಾಗೂ ಜಿಲ್ಲಾ ಜಾಗೃತಿ ಸಮಿತಿ ಸದಸ್ಯರು ಚಂದಾಪೂರದ ಡಾ.ಮಲ್ಲಿಕಾರ್ಜುನ ಪಾಲಾಮೂರ ಪ್ರಾಚಾರ್ಯರ ಮನೆಯಲ್ಲಿ ಏರ್ಪಡಿಸಿದ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಪುಸ್ತಕ ಸಂಸ್ಕೃತಿಯನ್ನು ಹುಟ್ಟುಹಾಕುವುದು, ಬೆಳೆಸುವುದು ಹಾಗೂ ಪರಿಚಲನೆಗೊಳಿಸುವುದು ಪ್ರಾಧಿಕಾರದ ಉದ್ದೇಶವಾಗಿದೆ. ವಿಶೇಷವಾಗಿ ಕನ್ನಡದಲ್ಲಿ ಲೇಖಕ, ಪ್ರಕಾಶಕ, ಮಾರಾಟಗಾರ ಹಾಗೂ ಓದುಗರ ನಡುವಿನ ಸಂಬಂಧವನ್ನು ಹೆಚ್ಚಿಸುವುದೂ, ನಾಡಿನಾದ್ಯಂತ ವಾಚಕರಿಗೆ ಒಳ್ಳೆಯ ಗ್ರಂಥಗಳು ಸುಲಭ ಬೆಲೆಗೆ ದೊರೆಯುವಂತೆ ನೋಡಿಕೊಳ್ಳುವುದೂ ಈ ಮೂಲಕ ಕನ್ನಡ ಪುಸ್ತಕೋದ್ಯಮ ಪ್ರಪಂಚವನ್ನು ಜನಪರಗೊಳಿಸುವುದೂ ಇದರ ಆಶಯಗಳು. ಕನ್ನಡ ಪುಸ್ತಕ ಪ್ರಕಾಶಕರ ಆರ್ಥಿಕ ಹಾಗೂ ಬೌದ್ಧಿಕ ಶ್ರಮಕ್ಕೆ ನೆರವಾಗುವ ಸಲುವಾಗಿ ಆಯಾ ವರ್ಷ ಪ್ರಕಟಗೊಂಡ ಪುಸ್ತಕಗಳ ಸಗಟು ಖರೀದಿ ಮಾಡುವುದು, ಖರೀದಿಸಿದ ಕೃತಿಗಳನ್ನು ನಾಡಿನ ಸಾರ್ವಜನಿಕ ಗ್ರಂಥಾಲಯಗಳಿಗೂ ಶಾಲೆ-ಕಾಲೇಜು ಹಾಗೂ ಸಂಘ ಸಂಸ್ಥೆಗಳಿಗೂ ವಿತರಿಸುವುದು, ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆ, ವಿಜ್ಞಾನ, ಮಾನವಿಕ ಮುಂತಾದ ವಿವಿಧ ಜ್ಞಾನ ಶಿಸ್ತುಗಳಲ್ಲಿ ಪರಿಣತರಾದ ವಿದ್ವಾಂಸರಿಂದ ಪುಸ್ತಕಗಳನ್ನು ಬರೆಸುವುದು, ಯುವ ಪ್ರತಿಭೆಗಳನ್ನು ಗುರುತಿಸಿ ಅವರ ಕೃತಿಗಳ ಪ್ರಕಟಣೆಗಾಗಿ ಧನಸಹಾಯ, ಅನುದಾನ ಹಾಗೂ ಬಹುಮಾನಗಳನ್ನು ನೀಡಿ ಅವರಿಗೆ ಉತ್ತೇಜನ ನೀಡುವುದು, ಸರ್ಕಾರಿ, ಅರೆ ಸರ್ಕಾರಿ, ವಿಶ್ವವಿದ್ಯಾಲಯ ಹಾಗೂ ಖಾಸಗಿ ಸಂಘಸಂಸ್ಥೆಗಳ ಸಹಕಾರದೊಂದಿಗೆ ಪುಸ್ತಕೋದ್ಯಮದ ಆಂದೋಲನಕ್ಕೆ ಅಗತ್ಯವಾದ ಕಾರ್ಯಕ್ರಮಗಳನ್ನು ರೂಪಿಸಿ ಈ ಉದ್ಯಮವನ್ನು ವಿಸ್ತರಿಸುವುದೂ ಪ್ರಾಧಿಕಾರದ ಆಶಯವಾಗಿದೆ. ಅಲ್ಲದೇ ಪುಸ್ತಕ ಪ್ರೀಯರ ಮನೆಯಲ್ಲಿ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮ ಆಯೋಜಿಸಿ, ಅಭಿನಂದನಾ ಪತ್ರ ನೀಡಿ ಅವರನ್ನು ಅಭಿನಂದಿಸುವ ಕಾರ್ಯ ಪುಸ್ತಕ ಪ್ರಾಧಿಕಾರ ಮಾಡುತ್ತಿದೆ ಎಂದು ಹೇಳಿದರು.
ಹಿರಿಯ ನಾಗರಿಕರಾದ ಅಶೋಕ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಜ್ಞಾನದ ಬಲದಿಂದ ಅಜ್ಞಾನ ತೊಲಗುತ್ತದೆ. ಪುಸ್ತಕಗಳು ಮನೆಗೊಂದು ಸಂಪತ್ತು ಇದ್ದ ಹಾಗೆ ಎಂದು ಹೇಳಿದರು.
ಜಿಲ್ಲಾ ಜಾಗೃತಿ ಸಮಿತಿಯ ಸದಸ್ಯರಾದ ಪ್ರೊ.ಶೋಭಾದೇವಿ ಚಕ್ಕಿ, ಪ್ರೊ.ರೇವಣಸಿದ್ದಪ್ಪ ದುಕಾನ, ಡಾ.ವಿಜಯಕುಮಾರ ಪರೂತೆ, ದೇವಿಂದ್ರಪ್ಪ ಹೋಳ್ಕರ್, ನಾಗಶೆಟ್ಟಿ ಭದ್ರಶೆಟ್ಟಿ, ಶಂಕರಜಿ ಹಿಪ್ಪರಗಿ ವೇದಿಕೆಯಲ್ಲಿದ್ದರು. ಇದೆ ಸಂದರ್ಭದಲ್ಲಿ ಮನೆಗೊಂದು ಗ್ರಂಥಾಲಯ ಯೋಜನೆಯಡಿ ಮನೆಯಲ್ಲಿ ಉತ್ತಮ ಗ್ರಂಥಾಲಯ ಹೊಂದಿದ್ದಕ್ಕಾಗಿ ಪ್ರಾಂಶುಪಾಲ ಡಾ.ಮಲ್ಲಿಕಾರ್ಜುನ ಪಾಲಾಮೂರ್ ದಂಪತಿಗಳಿಗೆ ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಸನ್ಮಾನಿಸಿ, ಅಭಿನಂದನಾ ಪತ್ರ ನೀಡಲಾಯಿತು. ಉತ್ತಮ ದೊಡ್ಡಮನಿ, ಜಗನ್ನಾಥ ಶೇರಿಕಾರ, ಜ್ಯೋತಿ ಬೊಮ್ಮಾ, ನಂದಿಕುಮಾರ ಪಾಟೀಲ, ಮಾರುತಿ ಗಂಜಗಿರಿ, ರಾಜಶೇಖರ ಮುಸ್ತರಿ, ಸುರೇಶ ವಾಲಿಕಾರ, ಶಿವಪ್ರಸಾದ, ರಾಮಶೆಟ್ಟಿ ಪಾಟೀಲ, ಶ್ರೀಶೈಲ್ ಮುಂತಾದವರು ಉಪಸ್ಥಿತರಿದ್ದರು. ಸಂಗೀತ ಶಿಕ್ಷಕ ರೇವಣಸಿದ್ದಯ್ಯಾ ಹಿರೇಮಠ ಪ್ರಾರ್ಥಿಸಿದರು. ಮಂಜುನಾಥ ದುಬಲಗುಂಡಿ ಸ್ವಾಗತಿಸಿದರು. ಸುನಿತಾ ಪಾಲಾಮೂರ್ ವಂದಿಸಿದರು.